Matrimony Website Fraud: ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರ ಜತೆ ದೈಹಿಕ ಸಂಬಂಧ ಬೆಳಸಿದ್ದ ವಂಚಕ!
*ಮದುವೆ, ನೌಕರಿ ಆಮಿಷ ಒಡ್ಡಿ ಯುವತಿಯರಿಗೆ ಭಾರೀ ಮೋಸ
*26 ಮಹಿಳೆಯರಿಗೆ 21 ಲಕ್ಷ ವಂಚಿಸಿದ ವಂಚಕ ಜೈಭೀಮ ಬಂಧನ
*ತಾನು ಪ್ರಭಾವಿ ಹೆಸ್ಕಾಂ ಅಧಿಕಾರಿ ಎಂದು ಸುಳ್ಳು ಹೇಳುತ್ತಿದ್ದ
*3 ಯುವತಿಯರ ಜತೆ ದೈಹಿಕ ಸಂಬಂಧವನ್ನೂ ಬೆಳಸಿದ್ದ ವಂಚಕ
ಬೆಂಗಳೂರು (ಜ. 10): ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ (Matrimony Website) ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ (Vijayapur) ಮೂಲದ ಜೈಭೀಮ್ ವಿಠಲ್ ಪಡುಕೋಟಿ (33) ಬಂಧಿತ. ಆರೋಪಿಯಿಂದ ಕೃತ್ಯಕ್ಕೆ ಬಳಸಿರುವ ಮೊಬೈಲ್, ನಿಸ್ಸಾನ್ ಕಾರು ವಶಪಡಿಸಿಕೊಳ್ಳಲಾಗಿದೆ. ಆತನ ಬ್ಯಾಂಕ್ ಖಾತೆಯಲ್ಲಿದ್ದ 1.66 ಲಕ್ಷ ರು.ಗೆ ತಡೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ತಂದೆ ಹೆಸ್ಕಾಂ ನೌಕರರಾಗಿದ್ದು, ಅಕಾಲಿಕವಾಗಿ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದ ಮೇಲೆ ಹೆಸ್ಕಾಂಗೆ ಲೈನ್‌ಮ್ಯಾನ್ ಕೆಲಸಕ್ಕೆ ಸೇರಿದ್ದ ಜೈ ಭೀಮ್, ನಗರದಲ್ಲಿ 8 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದ. ಬಳಿಕ ಮುದ್ದೇಬಿಹಾಳದ ಸುನಿತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಈತ, ಆಕೆಯ ಜತೆ 2013ರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ. ಆಗ ಆಕೆಯನ್ನು ಕೊಂದು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಇದಾದ ನಂತರ ಜೀವನ ನಿರ್ವಹಣೆಗೆ ಸುಲಭವಾಗಿ ಹಣ ಗಳಿಸಲು ವಂಚನೆಗೆ ಇಳಿದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಕ್ಷನ್ ಅಧಿಕಾರಿ ಎಂದು ಪರಿಚಯ:
ಆರೋಪಿಯು ಜೀವನ್ ಸಾಥಿ, ಭಾರತ್ ಮ್ಯಾಟ್ರಿಮೋನಿ ಸೇರಿ ಇನ್ನಿತರ ಆನ್‌ಲೈನ್ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ಹುಬ್ಬಳ್ಳಿಯ ಹೆಸ್ಕಾಂ ಕಚೇರಿಯಲ್ಲಿ ಸೆಕ್ಷನ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಮಾಹಿತಿ ಹಾಕಿಕೊಂಡಿದ್ದ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಚಂದದ ಯುವತಿಯರ ಪ್ರೊಫೈಲ್ ಹುಡುಕಿ ನಿಮ್ಮ ಪ್ರೊಫೈಲ್ ಇಷ್ಟವಾಗಿದೆ ಎಂದು ಸಂದೇಶ ಕಳುಹಿಸುತ್ತಿದ್ದ.
ಇದನ್ನೂ ಓದಿ: ಪತ್ನಿಯನ್ನೇ ಕೊಂದು ಮನೆಯಲ್ಲಿ ಹೂತಿಟ್ಟು ಸಮಾಧಿ ಮೇಲೆ ಮಂಚ ಹಾಕಿಕೊಂಡಿದ್ದ ಪತಿ
ಅಲ್ಲದೆ, ಯುವತಿಯರ ಕುಟುಂಬದ ಬಗ್ಗೆ ಮಾಹಿತಿ ಪಡೆದುಕೊಂಡು ಹುಡುಗಿ ನೋಡಲು ಬರುವುದಾಗಿ ಹೇಳ್ಳುತ್ತಿದ್ದ. ಬಳಿಕ ಯುವತಿಯರು ಹಾಗೂ ಅವರ ಸಂಬಂಧಿಕರೊಂದಿಗೆ ಬಣ್ಣಬಣ್ಣದ ಮಾತನಾಡಿ ನಂಬಿಕೆ ಗಿಟ್ಟಿಸುತ್ತಿದ್ದ. ‘ನನಗೆ ಹೆಸ್ಕಾಂನಲ್ಲಿ ಉನ್ನತ ಅಧಿಕಾರಿಗಳ ಪರಿಚಯವಿದೆ. ಇಲ್ಲಿ ಸಾಕಷ್ಟುಹುದ್ದೆಗಳು ಖಾಲಿಯಿದ್ದು, ನಿಮ್ಮ ಪರಿಚಿತರಿಗೆ ಕೆಲಸ ಕೊಡಿಸುವೆ’ ಎಂದು ಆಮಿಷವೊಡ್ಡಿ ಲಕ್ಷ ಲಕ್ಷ ಹಣ ಪಡೆದು ಬಳಿಕ ವಂಚಿಸುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
26 ಯುವತಿಯರಿಗೆ ವಂಚನೆ:
ವಿವಾಹವಾಗಲು ಒಪ್ಪಿದ ಯುವತಿಯರು, ಆರೋಪಿ ಜೈ ಭೀಮ್‌ನನ್ನು ಭೇಟಿಯಾಗುತ್ತಿದ್ದರು. ಈ ವೇಳೆ ಯುವತಿಯರ ಬ್ಯಾಂಕ್ ದಾಖಲೆ, ಎಟಿಎಂ ಕಾರ್ಡ್ ವಿವರ ಪಡೆದು ಅವರ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡುತ್ತಿದ್ದ. ಈ ಬಗ್ಗೆ ಪ್ರಶ್ನಿಸಿದ ಯುವತಿಯರು ಹಣ ಹಿಂತಿರುಗಿಸುವಂತೆ ಸೂಚಿಸಿದರೆ ಅವರಿಗೆ ಬೆದರಿಸುತ್ತಿದ್ದ.
ಇದನ್ನೂ ಓದಿ: Crime Cases in India: ದೇಶದ ಇತರೆ ನಗರಗಳಿಗಿಂತ ಬೆಂಗ್ಳೂರು ಸೇಫ್..!
ಆರೋಪಿಯು ವಿವಾಹವಾಗುವುದಾಗಿ ನಂಬಿಸಿ ಮೂವರು ಯುವತಿಯರ ಜತೆಗೆ ದೈಹಿಕ ಸಂಪರ್ಕ ಹೊಂದಿ ವಂಚಿಸಿರುವುದಕ್ಕೆ ಸಾಕ್ಷ್ಯಗಳು ಸಿಕ್ಕಿದೆ. ಆರೋಪಿಯು ರಾಜ್ಯದ ಶಿವಮೊಗ್ಗ, ಹಾವೇರಿ, ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ಯಾದಗಿರಿ, ರಾಯಚೂರು ಮೂಲದ ಒಟ್ಟು 26 ಯುವತಿಯರಿಂದ ಒಟ್ಟು 21.30 ಲಕ್ಷ ರು. ಪಡೆದು ವಂಚಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವತಿಗೆ ರಿಕ್ವೆಸ್ಟ್ ಕಳಿಸಿ ಸಿಕ್ಕಿಬಿದ್ದ!
ಆರೋಪಿಯು ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದ 26 ವರ್ಷದ ಯುವತಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಿಕ್ವೆಸ್ಟ್ ಕಳುಹಿಸಿದ್ದ. ‘ನನಗೆ ನಿಮ್ಮ ಪ್ರೊಫೈಲ್ ಇಷ್ಟವಾಗಿದ್ದು, ವಿವಾಹವಾಗಲು ಸಿದ್ಧ’ ಎಂದು ಹೇಳಿದ್ದ. ಈ ವೇಳೆ ಆರೋಪಿಯ ಬಗ್ಗೆ ಅನುಮಾನಗೊಂಡ ಯುವತಿ, ಈತನ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ವಂಚನೆಯ ಕರ್ಮಕಾಂಡ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.