*  ರೌಡಿಗೆ ಬೇಲ್‌ ಕೊಡಲು ಹೋಗಿ ಜೈಲು ಸೇರಿದ* .5 ಸಾವಿರದ ಆಸೆಗಾಗಿ ಸಿಕ್ಕಸಿಕ್ಕವರಿಗೆ ಜಾಮೀನು ಕೊಡುತ್ತಿದ್ದ* ಪಹಣಿ ತಿದ್ದುಪಡಿ ಮಾಡಿ ಜೈಲಿಗೆ*  *ಜಾಮೀನು ನೀಡಿದ್ದ ಜಮೀನು ಸೀಜ್‌

ಬೆಂಗಳೂರು (ಫೆ. 18) ಐದು ಸಾವಿರ ಹಣಕ್ಕಾಗಿ ರೌಡಿಯೊಬ್ಬನ ಜಾಮೀನಿಗೆ ತನ್ನ ಜಮೀನು ಪಹಣಿ (RTC)ತಿದ್ದುಪಡಿ ಮಾಡಿದ್ದ ರೈತ ಈಗ ರೌಡಿ ಜತೆ ಪರಪ್ಪನ ಅಗ್ರಹಾರ (Jail) ಕೇಂದ್ರ ಕಾರಾಗೃಹ ಸೇರಿದ್ದಾನೆ.

ನಂದಿನಿ ಲೇಔಟ್‌ನ ರೌಡಿ ಯುವರಾಜ್‌ ಹಾಗೂ ರಾಮನಗರ (Ramanagara) ತಾಲೂಕಿನ ಹರಿಸಂದ್ರದ ಮದರಸಾಬ ದೊಡ್ಡಿ ಗ್ರಾಮದ ಕೆಂಪಯ್ಯ ಬಂಧಿತರಾಗಿದ್ದು, ಕಾನೂನುಬಾಹಿರ ಕೃತ್ಯಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ರೌಡಿ ಯುವರಾಜ್‌ನನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದರು. ಆಗ ಆತನಿಗೆ ಜಾಮೀನು ಕೊಡಲು ಬಂದು ಕೆಂಪಯ್ಯ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗೆ ವಂಚನೆ: ರಾಮನಗರ ತಾಲೂಕಿನ ಮದರಸಾಬ ದೊಡ್ಡಿ ಗ್ರಾಮದ ಕೆಂಪಯ್ಯನಿಗೆ ಬೇಸಾಯ ವೃತ್ತಿ ಆಗಿದ್ದು, ಹಣಕ್ಕಾಗಿ ನ್ಯಾಯಾಲಯಗಳಲ್ಲಿ ಸಿಕ್ಕಸಿಕ್ಕವರಿಗೆ ಜಾಮೀನು ಕೊಡುವುದು ಪ್ರವೃತ್ತಿ ಆಗಿತ್ತು. ಅಂತೆಯೇ 2014ರಲ್ಲಿ ಬ್ಯಾಟರಾಯನಪುರ ಠಾಣೆಯ ಅಪರಾಧ ಪ್ರಕರಣದ ಆರೋಪಿಗೆ ಆತ ಜಾಮೀನು ಕೊಟ್ಟಿದ್ದ. ಆದರೆ ವಿಚಾರಣೆಗೆ ಆ ಆರೋಪಿಯು ಗೈರಾದ ಕಾರಣಕ್ಕೆ ಕೆಂಪಯ್ಯನಿಗೆ ಸೇರಿದ ಸ್ಥಿರಾಸ್ತಿಯನ್ನು ನಗರದ 43ನೇ ನ್ಯಾಯಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಈ ವಿಚಾರ ಪಹಣಿಯ ಕಲಂ 11ರಲ್ಲಿ ಉಲ್ಲೇಖವಾಗಿತ್ತು. ಹೀಗಿದ್ದರೂ ಹಣದಾಸೆಗೆ ರೌಡಿ ಯುವರಾಜ್‌ಗೆ ಜಾಮೀನಿಗೆ ಭೂ ದಾಖಲೆ ತಿದ್ದುಪಡಿ ಮಾಡಿದ ತಪ್ಪಿಗೆ ಕೆಂಪಯ್ಯ ಈಗ ಜೈಲು ಸೇರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನೂನುಬಾಹಿರ ಕೃತ್ಯಗಳ ಹಿನ್ನೆಲೆಯಲ್ಲಿ ರೌಡಿ ಯುವರಾಜ್‌ನನ್ನು ಸೋಮವಾರ ಬಂಧಿಸಿದ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ಉತ್ತರ ವಿಭಾಗದ ಡಿಸಿಪಿ ಅವರ ಮುಂದೆ ನಂದಿನಿ ಲೇಔಟ್‌ ಠಾಣೆ ಪೊಲೀಸರು ಹಾಜರುಪಡಿಸಿದ್ದರು. ಆಗ ಯುವರಾಜ್‌ಗೆ ಜಾಮೀನುದಾರನಾಗಿ ವಕೀಲರ ಜತೆ ಯಶವತಂಪುರದಲ್ಲಿರುವ ಉತ್ತರ ವಿಭಾಗದ ಡಿಸಿಪಿ ಕಚೇರಿಗೆ ಕೆಂಪಯ್ಯ ಬಂದಿದ್ದ. ಜಾಮೀನು ಮನವಿ ಸ್ವೀಕರಿಸಿದ ಪೊಲೀಸರು, ಕೆಂಪಯ್ಯ ಸಲ್ಲಿಸಿದ್ದ ಭೂ ದಾಖಲೆಗಳನ್ನು ಪರಿಶೀಲಿಸಿದಾಗ ವಂಚನೆ ಗೊತ್ತಾಗಿದೆ.

ಸಿವಿಲ್‌ ನ್ಯಾಯಾಲಯದ ಆದೇಶದಂತೆ ಸ್ಥಿರ ಆಸ್ತಿ ಮುಟ್ಟುಗೋಲು ಸಂಗತಿಯನ್ನು ಮರೆ ಮಾಚಿದ್ದ ಕೆಂಪಯ್ಯ, ಪಹಣಿಯ ಕಾಲಂ 11ರಲ್ಲಿ ತಿದ್ದುಪಡಿ ಮಾಡಿ ನಕಲಿ ಪಹಣಿಯನ್ನು ಹಾಜರುಪಡಿಸಿ ಜಾಮೀನುದಾರನಾಗಲು ಯತ್ನಿಸಿದ್ದ ವಿಚಾರ ಬಯಲಾಯಿತು. ಕೂಡಲೇ ಕೆಂಪಯ್ಯ ಹಾಗೂ ರೌಡಿ ಯುವರಾಜ್‌ ಮೇಲೆ ವಂಚನೆ ಪ್ರಕರಣ ದಾಖಲಿಸಿಕೊಂಡು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 Triple Talaq : ಲೇಟಾಗಿ ಹಾಲು ತಂದು ಕೊಟ್ಟ ಪತ್ನಿ.. ಅಷ್ಟಕ್ಕೆ ತಲಾಖ್ ಎಂದ ಪತಿರಾಯ!

ಹಳೆ ಪ್ರಕರಣದಲ್ಲಿ ಶಿಕ್ಷೆ: ಒಂಬತ್ತು ವರ್ಷಗಳ ಹಿಂದೆ ನೈಸ್‌ (Nice Road) ರಸ್ತೆಯಲ್ಲಿ ಕಾರು(Car Accident) ಅಪಘಾತದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಚಾಲಕನಿಗೆ ನ್ಯಾಯಾಲಯ 6.6 ವರ್ಷ ಜೈಲು ಶಿಕ್ಷೆ ಹಾಗೂ 1.04 ಲಕ್ಷ ರು. ದಂಡ ವಿಧಿಸಿದೆ.

ಪರಪ್ಪನ ಅಗ್ರಹಾರದ ನಿವಾಸಿ ಭಾನುಕುಮಾರ್‌ (24) ಅಪರಾಧಿ ಆಗಿದ್ದು, 2013ರ ಮಾ.4 ರಂದು ನೈಸ್‌ ರಸ್ತೆಯಲ್ಲಿ ಕಾರು ಅಪಘಾತಕ್ಕೀಡು ಮಾಡಿಸಿದ್ದ. ಈ ಘಟನೆಯಲ್ಲಿ ಆತನ ಸ್ನೇಹಿತರಾದ ವಿಶ್ವನಾಥ್‌ ಹಾಗೂ ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತಿಬ್ಬರು ಸ್ನೇಹಿತರಾದ ನಿಖಿಲ್‌ ಕುಮಾರ್‌ ಹಾಗೂ ಮಣಿಕಂಠ ಗಾಯಗೊಂಡಿದ್ದರು. ಈ ಘಟನೆ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂದಿನ ಎಲೆಕ್ಟ್ರಾನಿಕ್‌ ಸಿಟಿ ಸಂಚಾರ ಠಾಣೆಯ ಬಿ.ಕೆ.ಶೇಖರ್‌ ನೇತೃತ್ವದ ತಂಡವು ಆರೋಪ ಪಟ್ಟಿಸಲ್ಲಿಸಿತು. ವಿಚಾರಣೆ ನಡೆಸಿದ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್‌ ನ್ಯಾಯಾಲಯವು, ಆರೋಪಿಗೆ 6 ವರ್ಷ 6 ತಿಂಗಳು ಸಜೆ ಶಿಕ್ಷೆ ವಿಧಿಸಿ ಆದೇಶಿಸಿದೆ ಎಂದು ಎಂದು ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್‌.ರವಿಕಾಂತೇಗೌಡ ತಿಳಿಸಿದ್ದಾರೆ.

ತನ್ನ ತಂದೆ ಖರೀದಿಸಿದ್ದ ಹೊಸ ಇನ್ನೋವಾ ಕಾರಿನಲ್ಲಿ 2013ರ ಮಾಚ್‌ರ್‍ 4ರ ರಾತ್ರಿ ತನ್ನ ನಾಲ್ವರ ಸ್ನೇಹಿತರ ಜತೆ ಭಾನುಕುಮಾರ್‌ ಜಾಲಿರೈಡ್‌ಗೆ ಹೋಗಿದ್ದರು. ಆಗ ಮದ್ಯ ಸೇವಿಸಿದ ಅವರು, ತಡ ರಾತ್ರಿ ಆದ ಕಾರಣ ಊಟ ಎಲ್ಲಿಯೂ ಸಿಗದೆ ಎಲೆಕ್ಟ್ರಾನಿಕ್‌ ಸಿಟಿ ಕಡೆಯಿಂದ ಬನ್ನೇರುಘಟ್ಟರಸ್ತೆಗೆ ತೆರಳುತ್ತಿದ್ದರು. ಆ ವೇಳೆ ಅತಿ ವೇಗ ಮತ್ತು ಅಜಾಗರುಕತೆಯಿಂದ ಇನ್ನೋವಾ ಕಾರನ್ನು ಚಾಲಕ ಚಾಲೂ ಮಾಡುತ್ತಿದ್ದ. ಆಗ ನಿಯಂತ್ರಣ ತಪ್ಪಿ ವಿಟ್ಟಸಂದ್ರ ಪ್ಲೈ ಓವರ್‌ ಹತ್ತಿರ ಕಾರು ಪಿಲ್ಲರ್‌ಗೆ ಗುದ್ದಿ ಕಾರು ಪಲ್ಟಿಯಾಗಿತ್ತು.