Asianet Suvarna News Asianet Suvarna News

ಶೀಲ ಶಂಕೆ: ಪತ್ನಿ ಕೊಂದು ಧರ್ಮಸ್ಥಳದಲ್ಲಿ ಹರಕೆ ತೀರಿಸಿದ ಪಾಪಿ ಗಂಡ..!

*  ಪತ್ನಿ ಶೀಲ ಶಂಕಿಸಿ ನಿತ್ಯ ಜಗಳ ಆಡುತ್ತಿದ್ದ ಪತಿ
*  ಧರ್ಮಸ್ಥಳಕ್ಕೆ ತೆರಳಿ ಆಣೆ ಮಾಡಿದ್ದ ಪತ್ನಿ ಆದರೂ ಪತ್ನಿಯ ಮೇಲೆ ಸಂಶಯ
*  ಚಾಕುವಿನಿಂದ ಕತ್ತುಕೊಯ್ದು ಪತ್ನಿಯ ಹತ್ಯೆಗೈದ
 

Man Arrested for Murder Case in Bengaluru grg
Author
Bengaluru, First Published Sep 26, 2021, 7:37 AM IST

ಬೆಂಗಳೂರು(ಸೆ.26): ಆತನಿಗೆ ಪತ್ನಿಯ ಶೀಲದ ಮೇಲೆ ವಿನಾಕಾರಣ ಶಂಕೆ. ಧರ್ಮಸ್ಥಳಕ್ಕೆ(Dharmasthala) ಜತೆಗೆ ಬಂದು ದೇವರ ಮೇಲೆ ಆಣೆ ಪ್ರಮಾಣ ಮಾಡಿದರೂ ಪತ್ನಿಯನ್ನು ನಂಬದೇ ಆಕೆಯ ಕೊಲೆ ಮಾಡಿ ಮುಡಿಕೊಡುತ್ತೇನೆ ಎಂದು ಹರಕೆ ತೊಟ್ಟಿದ್ದ ಭೂಪ. ಅದರಂತೆ ಬೆಂಗಳೂರಿಗೆ ಹಿಂತಿರುಗಿದವನೇ ಪತ್ನಿಯನ್ನು ಕೊಲೆ ಮಾಡಿ ಧರ್ಮಸ್ಥಳಕ್ಕೆ ಹಿಂತಿರುಗಿ ಮಂಡೆ ಬೋಳಿಸಿಕೊಂಡ!

ಇಂತಹ ‘ಧರ್ಮಬೀರು’ ಪತ್ನಿ ಹಂತಕ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಸಮೀಪದ ಹೆಲ್ತ್‌ ಲೇಔಟ್‌ ನಿವಾಸಿ ಕಾಂತರಾಜ್‌ ಎಂಬಾತನೇ ಈ ಪತ್ನಿ ಹಂತಕ! ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಸ್ಕೂಡ್ರೈವರ್‌, ಎರಡು ಮೊಬೈಲ್‌ಗಳು ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ.

ತನ್ನ ಪತ್ನಿ ರೂಪಾಳ ಶೀಲದ ಬಗ್ಗೆ ಶಂಕೆ ಹೊಂದಿದ್ದ ಕಾಂತರಾಜು ಸೆ.22ರಂದು ಆಕೆಯನ್ನು ಕೊಲೆ(Murder) ಮಾಡಿದ್ದ. ನಂತರ ಧರ್ಮಸ್ಥಳಕ್ಕೆ ತೆರಳಿ ಪತ್ನಿ ಹತ್ಯೆಗೆ ಹರಕೆ ತೀರಿಸಿ ನಗರಕ್ಕೆ ಮರಳಿದ್ದ. ಈತನ ಕುಕೃತ್ಯ ಪತ್ತೆ ಹಚ್ಚಿದ್ದ ಪೊಲೀಸರು ಆತನ ಬಂಧನಕ್ಕೆ ಮುಂದಾದಾಗ ಪತ್ನಿಯ ಜತೆ ಸಂಬಂಧ ಹೊಂದಿದ್ದವನನ್ನು ಕೊಲೆ ಮಾಡುವುದು ಬಾಕಿಯಿದೆ. ಅದೊಂದು ಕೃತ್ಯ ಎಸೆಗಲು ಅವಕಾಶ ಕೊಡಿ ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದ!

ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿ ಹೆಂಡ್ತಿ ಹತ್ಯೆಗೆ ಸಂಚು..!

ಅಣೆ ಪ್ರಮಾಣ: 

10 ವರ್ಷಗಳ ಹಿಂದೆ ರಿಯಲ್‌ ಎಸ್ಟೇಟ್‌ ಏಜೆಂಟ್‌ ಕಾಂತರಾಜ್‌ ಹಾಗೂ ಕುಣಿಗಲ್‌ ತಾಲೂಕಿನ ಹೊಸಹಳ್ಳಿ ಗ್ರಾಮದ ರೂಪಾ ವಿವಾಹವಾಗಿದ್ದು, ದಂಪತಿಗೆ ಗಂಡು ಮಗುವಿದೆ. ಮೊದಲು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ರೂಪಾ, ಬಳಿಕ ಕೆಲಸ ತೊರೆದಿದ್ದರು. ಕೆಲ ದಿನಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತ್ನಿ ನಡವಳಿಕೆ ಮೇಲೆ ಶಂಕಿತನಾಗಿದ್ದ ಆರೋಪಿ, ಇದೇ ವಿಚಾರವಾಗಿ ಮನೆಯಲ್ಲಿ ಆಗಾಗ ಜಗಳ ತೆಗೆದು ರೂಪಾಳಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಗೂ ಮೂರು ದಿನಗಳ ಹಿಂದೆ ಪತ್ನಿ ಮತ್ತು ಮಗನ ಜತೆ ಧರ್ಮಸ್ಥಳ ಹಾಗೂ ಹೊರನಾಡಿಗೆ ದೇವರ ದರ್ಶನಕ್ಕೆ ಕಾಂತರಾಜ್‌ ಹೋಗಿದ್ದ. ಆಗ ಧರ್ಮಸ್ಥಳದಲ್ಲೇ ಪತ್ನಿಗೆ ‘ನೀನು ಯಾರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದೀಯಾ? ನನಗೆ ಎಲ್ಲ ವಿಚಾರ ಗೊತ್ತಿದೆ’ ಎಂದು ಆತ ಗಲಾಟೆ ಮಾಡಿದ್ದ. ಈ ಮಾತಿನಿಂದ ನೊಂದ ರೂಪಾ, ‘ನಾನು ಬೇಕಾದರೆ ದೇವರ ಎದುರಿನಲ್ಲೇ ಪ್ರಮಾಣ ಮಾಡುತ್ತೇನೆ’ ಎಂದಿದ್ದಳು. ಕೊನೆಗೆ ಧರ್ಮಸ್ಥಳದ ಶ್ರೀ ಮಂಜುನಾಥ ದೇವಾಲಯದ ಗರ್ಭಗುಡಿ ಮುಂದೆ ನಿಂತು ‘ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆಯಾಗಲಿ’ ಎಂದು ರೂಪಾ ಪ್ರಮಾಣ ಮಾಡಿದರೆ, ಇತ್ತ ‘ಇನ್ನೆರಡು ದಿನಗಳಲ್ಲಿ ಪತ್ನಿ ಕೊಂದು ಬಂದು ಮುಡಿಕೊಡುತ್ತೇನೆ’ ಎಂದು ಕಾಂತರಾಜ್‌ ಹರಕೆ ಮಾಡಿದ್ದ ಎನ್ನಲಾಗಿದೆ.

ಸೆ.21ರಂದು ಧರ್ಮಸ್ಥಳದಿಂದ ದಂಪತಿ ಮನೆಗೆ ಮರಳಿದ್ದಾರೆ. ಇದಾದ ಮರು ದಿನವೇ ಸಂಜೆ 5.30ರ ಸುಮಾರಿಗೆ ರೂಪಾಳ ಕತ್ತು ಕುಯ್ದು ಭೀಕರವಾಗಿ ಕೊಂದ ಕಾಂತರಾಜ್‌, ಅಂದು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ರಾತ್ರಿ ಹಾಸನಕ್ಕೆ ತೆರಳಿದ್ದ. ಅಲ್ಲಿ ಹತ್ಯೆಗೆ ಬಳಸಿದ್ದ ಚಾಕುವನ್ನು ಬಿಸಾಡಿದ ಆತ, ಅಲ್ಲಿಂದ ಮತ್ತೆ ಬಸ್ಸಿನಲ್ಲಿ ಧರ್ಮಸ್ಥಳಕ್ಕೆ ಹೋಗಿ ಸೆ.23ರಂದು ಮುಂಜಾನೆ ದೇವರ ದರ್ಶನ ಮಾಡಿ ಮುಡಿ ಕೊಟ್ಟು ನಗರಕ್ಕೆ ವಾಪಸ್‌ ಬಂದಿದ್ದ. ಸೆ.24ರಂದು ಬೆಳಗ್ಗೆ ಮತ್ತೆ ಮೈಸೂರಿಗೆ ಹೋಗಿದ್ದ ಆರೋಪಿ, ಅಲ್ಲಿಂದ ರಾತ್ರಿ ಮೆಜೆಸ್ಟಿಕ್‌ಗೆ ಬಂದು ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸ್ನೇಹಿತನ ಭೇಟಿಗೆ ತೆರಳಿದ್ದ. ಇತ್ತ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇನ್‌ಸ್ಪೆಕ್ಟರ್‌ ಲೋಹಿತ್‌ ನೇತೃತ್ವದ ತಂಡವು, ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಆರೋಪಿ ಬೆನ್ನಹತ್ತಿದ್ದರು. ಆ ವೇಳೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೆಳೆಯನ ಬಳಿ ಹಣ ಪಡೆಯಲು ಕಾಂತರಾಜ್‌ ಬರುವ ಮಾಹಿತಿ ಸಿಕ್ಕಿದ ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಎರಡು ಅಡಿ ಜಾಗಕ್ಕಾಗಿ ಮೂವರನ್ನು ಕೊಂದಿದ್ದ!

2006ರಲ್ಲಿ ಮನೆ ಪಕ್ಕದ ಎರಡು ಅಡಿ ಜಾಗದ ವಿಚಾರವಾಗಿ ಜಗಳ ಮಾಡಿಕೊಂಡು ನೆರೆಮನೆಯವರ ಮೂವರನ್ನು ಕೊಂದ ಆರೋಪದ ಮೇರೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ಕಾಂತರಾಜ್‌, 2009ರಲ್ಲಿ ತ್ರಿವಳಿ ಕೊಲೆ ಪ್ರಕರಣದಲ್ಲಿ ಆರೋಪ ಮುಕ್ತನಾದ. ತರುವಾಯ ಎಂಎ ಪದವೀಧರೆ ರೂಪಾಳ ಜತೆ ವಿವಾಹವಾಗಿ ಹೊಸ ಜೀವನ ಶುರು ಮಾಡಿದ್ದ ಆರೋಪಿ, ಕೊನೆಗೂ ತನ್ನ ದುಷ್ಟವರ್ತನೆಯಿಂದ ಪತ್ನಿಯನ್ನು ಬಲಿ ಪಡೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆಗೆ ಸಂಚು

ಹತ್ಯೆಗೂ ಮುನ್ನ ಧರ್ಮಸ್ಥಳ ಹಾಗೂ ಹೊರನಾಡಿಗೆ ಪತ್ನಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ಆರೋಪಿ, ಆ ವೇಳೆ ಯುಗ ಪುರುಷ ಹಾಗೂ ಬಾನಲ್ಲೇ ಮಧುಚಂದ್ರಕೆ ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ ಯತ್ನಿಸಿ ವಿಫಲನಾಗಿದ್ದ ಎಂದು ತಿಳಿದು ಬಂದಿದೆ. ಬೆಟ್ಟದಿಂದ ತಳ್ಳಿ ಅಥವಾ ಕಾರಿನ ಬ್ರೇಕ್‌ ಫೇಲ್‌ ಮಾಡಿ ಅಪಘಾತ ಮಾಡಿಸಿ ಪತ್ನಿ ರೂಪಾಳನ್ನು ಕೊಲ್ಲಲು ಕಾಂತರಾಜ್‌ ಸಂಚು ರೂಪಿಸಿದ್ದ. ಆದರೆ ಪರಿಸ್ಥಿತಿ ಪೂರಕವಾಗದ ಕಾರಣಕ್ಕೆ ಮನೆಗೆ ಕರೆತಂದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಗೆಳೆಯನ ಹತ್ಯೆಗೆ ಸಂಚು?

ಪತ್ನಿ ರೂಪಾ ಕೊಲೆ ಮಾಡಿದ ಬಳಿಕ ಆಕೆಯ ಗೆಳೆಯನ ಕೊಲೆಗೆ ಯೋಜಿಸಿದ್ದೆ ಎಂದು ಆರೋಪಿ ಹೇಳಿದ್ದಾನೆ. ಆದರೆ ರೂಪಾಳಿಗೆ ಅನೈತಿಕ ಸಂಬಂಧವಿತ್ತೆ ಎಂಬುದು ಖಚಿತವಾಗಿಲ್ಲ. ಮೊದಲಿನಿಂದಲೂ ವಿಚಿತ್ರ ಸ್ವಭಾವದ ಕಾಂತರಾಜ್‌, ಸುಖಾಸುಮ್ಮನೆ ಪತ್ನಿ ಶೀಲ ಶಂಕಿಸಿದ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

Follow Us:
Download App:
  • android
  • ios