ಬಂಧಿತರಿಂದ ಆರೋಪಿಗಳಿಂದ 11.50 ಲಕ್ಷ ಮೌಲ್ಯದ 191 ಗ್ರಾಂ ಎಂಡಿಎಂಎ ಮಾದಕವಸ್ತು, 1.50 ಲಕ್ಷ ಮೌಲ್ಯದ 2.80 ಕೆ.ಜಿ. ಗಾಂಜಾ, 2500 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್‌ ಫೋನ್‌ ಜಪ್ತಿ 

ಬೆಂಗಳೂರು(ಸೆ.24): ನಗರದಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ಮಾಡುತ್ತಿದ್ದ ಮಲಯಾಳಿ ಕಿರುತೆರೆ ನಟ ಸೇರಿ ಕೇರಳ ಮೂಲದ ಮೂವರು ಡ್ರಗ್ಸ್‌ ಪೆಡ್ಲ​ರ್ಸ್‌ಳನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಲಯಾಳಿ ಕಿರುತೆರೆ ನಟ ಶಿಯಾಜ್‌, ಸಹಚರರಾದ ಮೊಹಮ್ಮದ್‌ ಶಾಹಿದ್‌ ಹಾಗೂ ಮಂಗಲ್‌ ತೋಡಿ ಜಿತಿನ್‌ ಬಂಧಿತರು. ಆರೋಪಿಗಳಿಂದ .11.50 ಲಕ್ಷ ಮೌಲ್ಯದ 191 ಗ್ರಾಂ ಎಂಡಿಎಂಎ ಮಾದಕವಸ್ತು, .1.50 ಲಕ್ಷ ಮೌಲ್ಯದ 2.80 ಕೆ.ಜಿ. ಗಾಂಜಾ, .2500 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ನ ಖಾಸಗಿ ಕಾಲೇಜೊಂದರ ಬಳಿ ಇಬ್ಬರು ಅಪರಿಚಿತರು ಮಾದಕವಸ್ತು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಭಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿ ಶಿಯಾಜ್‌ ಮತ್ತು ಮೊಹಮ್ಮದ್‌ ಶಾಹಿದ್‌ನನ್ನು ಮಾಲು ಸಹಿತ ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ಇಬ್ಬರು ನೀಡಿದ ಮಾಹಿತಿ ಮೇರೆಗೆ ಅಗರ ಕೆರೆ ಬಳಿ ಆರೋಪಿ ಮಂಗಲ್‌ ತೋಡಿ ಜಿತಿನ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಾಂಜಾ ದಂಧೆ ಮೂಲಕ ಕೋಟಿ ಕೋಟಿ ಸಂಪಾದನೆ: ಡ್ರಗ್ಸ್‌ ಪೆಡ್ಲರ್‌ ಆಸ್ತಿ ಮುಟ್ಟುಗೋಲು

ಕೇರಳದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದ ಆರೋಪಿಗಳು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಡ್ರಗ್ಸ್‌ ಮಾರಾಟ ದಂಧೆಗೆ ಇಳಿದಿದ್ದಾರೆ. ಕೇರಳದಲ್ಲಿ ಡ್ರಗ್ಸ್‌ ಪೆಡ್ಲರ್‌ಗಳನ್ನು ಪರಿಚಯಿಸಿಕೊಂಡು ಕಡಿಮೆ ದರಕ್ಕೆ ಮಾದಕವಸ್ತು ಖರೀದಿಸುತ್ತಿದ್ದರು. ಬಳಿಕ ಬೆಂಗಳೂರು ನಗರಕ್ಕೆ ಬಂದು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಗೆ ಮಾದಕವಸ್ತು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ವಿದ್ಯಾರ್ಥಿಗಳಷ್ಟೇ ಅಲ್ಲದೆ, ನಗರದಲ್ಲಿ ನಡೆದಿರುವ ಹಲವು ಹೈ ಪ್ರೊಫೈಲ್‌ ಪಾರ್ಟಿಗಳಿಗೂ ಎಂಡಿಎಂಎ ಹಾಗೂ ಗಾಂಜಾ ಪೂರೈಸಿರುವ ಸಾಧ್ಯತೆಯಿದೆ. ಹೀಗಾಗಿ ಆ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.