Bengaluru: ವೈಯಕ್ತಿಕ ಕಾರಣ ಹಿನ್ನೆಲೆ ಕೋಪದಿಂದ ಕೈ ಕೊಯ್ದುಕೊಂಡ ಪ್ರಿಯಕರನ ರಕ್ಷಿಸಿದ ಪೊಲೀಸರು
ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆ ಮೇಲಿನ ಕೋಪದಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಶುಕ್ರವಾರ ಬೆಳಗ್ಗೆ ರಕ್ಷಿಸಿದ್ದಾರೆ.
ಬೆಂಗಳೂರು (ಜ.12): ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ತನ್ನ ಪ್ರಿಯತಮೆ ಮೇಲಿನ ಕೋಪದಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಶುಕ್ರವಾರ ಬೆಳಗ್ಗೆ ರಕ್ಷಿಸಿದ್ದಾರೆ. ಕೇರಳ ಮೂಲದ ಜಿತಿನ್ ಬಿನ್ನಿ (26) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಹದೇವಪುರ ಠಾಣೆಗೆ ಕರೆ ಮಾಡಿ ಜಿತಿನ್ ಆತ್ಮಹತ್ಯೆ ಯತ್ನದ ಬಗ್ಗೆ ಆತನ ಪ್ರಿಯತಮೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮೊಬೈಲ್ ಕರೆಯನ್ನು ಆಧರಿಸಿ ಸಬ್ ಇನ್ಸ್‌ಪೆಕ್ಟರ್‌ಗಳಾದ ಪರಶುರಾಮ್ ಹಾಗೂ ಮಲ್ಲೇಶ್ ನೇತೃತ್ವದ ತಂಡವು ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸುವಲ್ಲಿ ಯಶಸ್ಸು ಕಂಡಿದೆ. ಮೊಬೈಲ್ ಲೋಕೇಷನ್ ಆಧರಿಸಿ ಪಿಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು, ಪಿಜಿಯ ಕೋಣೆಯಲ್ಲಿ ಕೈ ಕುಯ್ದುಕೊಂಡು ರಕ್ತದ ಮಡುವಿನಲ್ಲಿ ಅರೆಪ್ರಜ್ಞಾನಾಗಿ ಬಿದ್ದಿದ್ದ ಜಿತಿನ್‌ನನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿ ಆತನ ಪ್ರಾಣ ಉಳಿದಿದೆ.
ಸಹಾಯಕ ಕೋರಿದ ಪ್ರಿಯತಮೆ: ನಗರದ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಕೇರಳ ಮೂಲದ ಜಿತಿನ್ ಹೂಡಿ ಸಮೀಪದ ಪಿಜಿಯಲ್ಲಿ ವಾಸವಾಗಿದ್ದು, ನಗರದಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗದಲ್ಲಿರುವ ಕೇರಳ ಮೂಲದ ಯುವತಿಯನ್ನು ಆತ ಪ್ರೀತಿಸುತ್ತಿದ್ದ. ಆದರೆ ಇತ್ತೀಚಿಗೆ ಈ ಜೋಡಿ ಮಧ್ಯೆ ಮನಸ್ತಾಪವಾಗಿದ್ದು, ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು. ಅಂತೆಯೇ ತನ್ನ ಪ್ರಿಯತಮೆಗೆ ಗುರುವಾರ ರಾತ್ರಿ ಮದ್ಯ ಸೇವಿಸಿದ್ದ ಜಿತಿನ್ ವಿಡಿಯೋ ಕಾಲ್ ಮಾಡಿದ್ದ. ಆ ವೇಳೆ ನಡುರಾತ್ರಿವರೆಗೆ ಪ್ರೇಮಿಗಳ ನಡುವೆ ಮಾತುಕತೆ ನಡೆದಿದೆ. ಆ ವೇಳೆ ವೈಯಕ್ತಿಕ ಕಾರಣಗಳನ್ನು ಪ್ರಸ್ತಾಪಿಸಿದ್ದಾರೆ. ಹೀಗೆ ಮಾತು ಮುಂದುವರೆದಂತೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಈ ಹಂತದಲ್ಲಿ ಕೆರಳಿದ ಜಿತಿನ್, ತನ್ನ ಪ್ರಿಯತಮೆಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಲೇ ಕೈ ಕುಯ್ದುಕೊಂಡು ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ಆಕೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಆತಂಕಗೊಂಡ ಆಕೆ, ಕೂಡಲೇ ಮಹದೇವಪುರ ಠಾಣೆಗೆ ನಸುಕಿನ 5 ಗಂಟೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಅದೇ ವೇಳೆ ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಗಸ್ತಿನಲ್ಲಿದ್ದ ಪಿಎಸ್‌ಐಗಳಾದ ಪರಶುರಾಮ್ ಹಾಗೂ ಮಲ್ಲೇಶ್ ಅವರು, ತಕ್ಷಣವೇ ಆಕೆಯಿಂದ ಜಿತಿನ್ ಪೋಟೋ ಪಡೆದು ಕಾರ್ಯಾಚರಣೆಗಳಿದಿದ್ದಾರೆ. ಕೊನೆಗೆ ಮೊಬೈಲ್ ಲೋಕೇಷನ್ ಮೂಲಕ ಆತನ ಪಿಜಿ ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಿತಿನ್ ಗೆ ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದೆ. ಚಿಕಿತ್ಸೆಗೆ ಆತ ಸ್ಪಂದಿಸುತ್ತಿದ್ದು, ಪ್ರಾಣಪಾಯದಿಂದ ಜಿತಿನ್ ಪರಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಳೆಯ ವೈಷಮ್ಯ, 3 ಸಾವಿರ ರೂಪಾಯಿಗಾಗಿ ಹಲ್ಲೆ?: ಪ್ರಾಣ ರಕ್ಷಣೆಗೆ ಕತ್ತು ಕೊಯ್ದ ಯುವಕ!
ಹಣಕಾಸು ಸಮಸ್ಯೆ, ತಂದೆ ಅನಾರೋಗ್ಯ: ತನ್ನೂರಿನಲ್ಲಿ ಹಣಕಾಸು ಸಮಸ್ಯೆ ಹಾಗೂ ಕ್ಯಾನ್ಸರ್ ಪೀಡಿತ ತಂದೆ ಅನಾರೋಗ್ಯದ ವಿಚಾರವಾಗಿ ಜಿತಿನ್ ಖಿನ್ನತೆಗೊಳಗಾಗಿದ್ದ. ಇದೇ ವಿಷಯವಾಗಿ ಪ್ರಿಯತಮೆ ಜತೆ ಮಾತುಕತೆ ನಡೆಸಿ ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.