ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯುಎಇನಲ್ಲಿ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಸಂಸ್ಥೆ ‘ಸಕ್ಸಸ್‌ ಪಾರ್ಟಿ’ ನಡೆಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ದುಬೈನಲ್ಲಿ ಆ್ಯಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸೌರಭ್‌ ಚಂದ್ರಕರ್‌ನ ಮದುವೆ ಪಾರ್ಟಿ ನಡೆದಿತ್ತು. ಅವುಗಳಲ್ಲಿ ಭಾರತೀಯ ಚಿತ್ರರಂಗದಿಂದ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

ನವದೆಹಲಿ(ಅ.09): ನೂರಾರು ಕೋಟಿ ರುಪಾಯಿ ಅಕ್ರಮ ಹಣ ವರ್ಗಾವಣೆ ನಡೆದಿದೆ ಎನ್ನಲಾದ ಮಹಾದೇವ್‌ ಆನ್‌ಲೈನ್‌ ಬೆಟ್ಟಿಂಗ್‌ ದಂಧೆ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಬಾಲಿವುಡ್ ನಟರಾದ ರಣಬೀರ್‌ ಕಪೂರ್‌, ಹುಮಾ ಖುರೇಷಿ, ಕಾಮಿಡಿ ಶೋ ಖ್ಯಾತಿಯ ಕಪಿಲ್‌ ಶರ್ಮಾ ಮುಂತಾದವರಿಗೆ ಈಗಾಗಲೇ ಸಮನ್ಸ್‌ ನೀಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಇದೀಗ ಬಾಲಿವುಡ್‌, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಟಿ.ವಿ. ಇಂಡಸ್ಟ್ರಿಯ ಇನ್ನಷ್ಟು ನಟ-ನಟಿಯರನ್ನು ವಿಚಾರಣೆಗೆ ಕರೆಸಲು ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಯುಎಇನಲ್ಲಿ ಮಹಾದೇವ್‌ ಬೆಟ್ಟಿಂಗ್‌ ಆ್ಯಪ್‌ ಸಂಸ್ಥೆ ‘ಸಕ್ಸಸ್‌ ಪಾರ್ಟಿ’ ನಡೆಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ ದುಬೈನಲ್ಲಿ ಆ್ಯಪ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ಸೌರಭ್‌ ಚಂದ್ರಕರ್‌ನ ಮದುವೆ ಪಾರ್ಟಿ ನಡೆದಿತ್ತು. ಅವುಗಳಲ್ಲಿ ಭಾರತೀಯ ಚಿತ್ರರಂಗದಿಂದ 30ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅವರಿಗೆ ಆ್ಯಪ್‌ನ ಪ್ರವರ್ತಕರು ಪಾವತಿಸಿರುವ ಹಣದ ಬಗ್ಗೆ ಮಾಹಿತಿ ಪಡೆಯಲು ಇ.ಡಿ. ಸಮನ್ಸ್‌ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಇದೇ ವೇಳೆ, ಸಮನ್ಸ್‌ಗೆ ಒಳಗಾದವರೆಲ್ಲ ಆರೋಪಿಗಳು ಎಂದೇನಲ್ಲ. ಕೆಲವು ಮಾಹಿತಿ ಪಡೆಯಲು ಅವರನ್ನು ಕರೆಯಲಾಗುತ್ತದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಇಂದು, ನಾಳೆ ಪ್ರೊ ಕಬಡ್ಡಿ ಹರಾಜು; ಇಲ್ಲಿದೆ ಹರಾಜಿನ ಕಂಪ್ಲೀಟ್ ಮಾಹಿತಿ

ನಿತ್ಯ 200 ಕೋಟಿ ರು. ಲಾಭ ಗಳಿಸುತ್ತಿದ್ದ ಮಹದೇವ ಆ್ಯಪ್‌!

ರಣಬೀರ್ ಕಪೂರ್, ಶ್ರದ್ಧಾ ಕಪೂರ್‌ರಂತಹ ಬಾಲಿವುಡ್‌ ನಟರನ್ನು ಜಾರಿ ನಿರ್ದೇಶನಾಲಯ (ಇ.ಡಿ.)ದ ವಿಚಾರಣೆ ಸಂಕಷ್ಟಕ್ಕೆ ದೂಡಿರುವ ಮಹದೇವ ಬೆಟ್ಟಿಂಗ್‌ ಆ್ಯಪ್‌, ಪ್ರತಿ ದಿನ 200 ಕೋಟಿ ರು. ಲಾಭ ಗಳಿಸುತ್ತಿತ್ತು ಎಂಬ ಸಂಗತಿ ಗೊತ್ತಾಗಿದೆ.

ಯುಎಇಯಲ್ಲಿ ಮಹದೇವ ಆ್ಯಪ್‌ ಸೃಷ್ಟಿಕರ್ತರು 200 ಕೋಟಿ ರು. ಹಣವನ್ನು ನಗದು ರೂಪದಲ್ಲಿ ವ್ಯಯಿಸಿ ವೈಭವೋಪೇತ ವಿವಾಹವನ್ನು ಏರ್ಪಡಿಸಿದ್ದರು. ಅದಾದ ಬಳಿಕ ಈ ಆ್ಯಪ್‌ ಮೇಲೆ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಕಳೆದ ತಿಂಗಳಷ್ಟೇ 39 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿತ್ತು. ಆ ವೇಳೆ ಚಿನ್ನದ ಗಟ್ಟಿ, ಆಭರಣ, ನಗದು ಸೇರಿದಂತೆ 417 ಕೋಟಿ ರು. ಸಂಪತ್ತು ಪತ್ತೆಯಾಗಿತ್ತು.

ಮಹಾದೇವ್ ಬೆಟ್ಟಿಂಗ್ ಆಪ್ ಕೇಸ್: ಶಾಕಿಂಗ್‌ ವಿಷಯ ಬಹಿರಂಗ ಪಡಿಸಿ ಬಾಲಿವುಡ್‌ ಸೆಲಬ್ರೆಟಿಗಳಿಗೆ ಎಚ್ಚರಿಕೆ ನೀಡಿದ ಕಂಗನಾ!

ಯಾವುದಿದು ಆ್ಯಪ್‌?:

ಸೌರಭ್‌ ಚಂದ್ರಶೇಖರ್‌ ಹಾಗೂ ರವಿ ಉಪ್ಪಳ್‌ ಎಂಬುವರು ಈ ಆ್ಯಪ್‌ನ ನಿರ್ವಾಹಕರು. ಇಬ್ಬರೂ ಛತ್ತೀಸ್‌ಗಢದ ಭಿಲಾಯಿನವರು. ಹೊಸ ಹೊಸ ವೆಬ್‌ಸೈಟ್‌ ಹಾಗೂ ಚಾಟ್‌ ಆ್ಯಪ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡುವ ಮೂಲಕ ಈ ಆ್ಯಪ್‌ ಕಂಪನಿ ಗ್ರಾಹಕರನ್ನು ಸೆಳೆಯುತ್ತಿತ್ತು. ಸಂಪರ್ಕಕ್ಕೆ ಬಂದ ಗ್ರಾಹಕರಿಗೆ ಎರಡು ಸಂಖ್ಯೆಗಳನ್ನು ಕಂಪನಿಯ ಗ್ರಾಹಕ ಸೇವಾ ಪ್ರತಿನಿಧಿಗಳು ನೀಡುತ್ತಿದ್ದರು. ಒಂದು ನಂಬರ್‌, ಬೆಟ್ಟಿಂಗ್ ಆ್ಯಪ್‌ನಲ್ಲಿ ಹಣ ವಿನಿಯೋಜನೆಗೆ. ಮತ್ತೊಂದು, ಗೆದ್ದಾಗ ಮರಳಿ ಹಣ ಪಡೆಯುವುದಕ್ಕೆ ಸಂಬಂಧಿಸಿದ ನಂಬರ್‌.

ಕಂಪನಿಗೆ ನಯಾಪೈಸೆ ನಷ್ಟವಾಗದಂತೆ ಮಹದೇವ ಆ್ಯಪ್‌ನಲ್ಲಿ ಬೆಟ್ಟಿಂಗ್‌ ನಡೆಯುತ್ತಿತ್ತು. ಆರಂಭದಲ್ಲಿ ಲಾಭ ಗಳಿಸುತ್ತಿದ್ದ ಗ್ರಾಹಕರು ದೀರ್ಘಾವಧಿಯಲ್ಲಿ ಭಾರಿ ಹಣ ಕಳೆದುಕೊಳ್ಳುತ್ತಿದ್ದರು. ಗ್ರಾಹಕರನ್ನು ನಂಬಿಸಲು 4 ದೇಶಗಳಲ್ಲಿ ದಿನದ ಇಪ್ಪತ್ನಾಲ್ಕೂ ತಾಸು ಕಾರ್ಯನಿರ್ವಹಿಸುವ ಕಾಲ್‌ಸೆಂಟರ್‌ಗಳನ್ನು ಕಂಪನಿ ಹೊಂದಿತ್ತು. ನಿತ್ಯ ಸಹಸ್ರಾರು ಕೋಟಿ ರು. ವಹಿವಾಟು ನಡೆಯುತ್ತಿತ್ತು. ಪ್ರತಿದಿನ 200 ಕೋಟಿ ರು. ಲಾಭವನ್ನು ಈ ಆ್ಯಪ್‌ ಗಳಿಸುತ್ತಿತ್ತು ಎಂಬುದು ಇ.ಡಿ. ತನಿಖೆಯಿಂದ ಬೆಳಕಿಗೆ ಬಂದಿತ್ತು.

ಈ ಆ್ಯಪ್‌ ದಂಧೆ ಮುಂದುವರಿಯುವುದಕ್ಕೆ ಸಹಕರಿಸಲು ಪೊಲೀಸರು, ರಾಜಕಾರಣಿಗಳು, ಅಧಿಕಾರಿಗಳಿಗೆ ಮಹದೇವ ಆ್ಯಪ್‌ನಿಂದ ಹಣ ಸಂದಾಯವಾಗುತ್ತಿತ್ತು. ಹವಾಲಾ ಮೂಲಕ ಅವರಿಗೆ ಹಣ ತಲುಪಿಸಲಾಗುತ್ತಿತ್ತು ಎನ್ನಲಾಗಿದೆ.