Asianet Suvarna News Asianet Suvarna News

ಇಂದು, ನಾಳೆ ಪ್ರೊ ಕಬಡ್ಡಿ ಹರಾಜು; ಇಲ್ಲಿದೆ ಹರಾಜಿನ ಕಂಪ್ಲೀಟ್ ಮಾಹಿತಿ

ಈ ಬಾರಿ ಎಲ್ಲಾ 12 ತಂಡಗಳಿಗೂ ಆಟಗಾರರ ಖರೀದಿಗೆ 4.5 ಕೋಟಿ ರುಪಾಯಿ ಬದಲು 5 ಕೋಟಿ ರುಪಾಯಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್  ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ.

Pro Kabaddi League 2023 All you need to know about season 10 PKL auction kvn
Author
First Published Oct 9, 2023, 1:59 PM IST

ಮುಂಬೈ(ಅ.09): 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಹಾಗೂ ಮಂಗಳವಾರ ಮುಂಬೈನಲ್ಲಿ ನಡೆಯಲಿದೆ. 500ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ. 

ಈ ಬಾರಿ ಎಲ್ಲಾ 12 ತಂಡಗಳಿಗೂ ಆಟಗಾರರ ಖರೀದಿಗೆ 4.5 ಕೋಟಿ ರುಪಾಯಿ ಬದಲು 5 ಕೋಟಿ ರುಪಾಯಿ ಬಳಸಲು ಅವಕಾಶ ನೀಡಲಾಗಿದೆ. ಆದರೆ ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್  ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ. ಪ್ರತಿ ತಂಡ ಕನಿಷ್ಠ 18 ಹಾಗೂ ಗರಿಷ್ಠ 25 ಆಟಗಾರರನ್ನು ಖರೀದಿಸಬಹುದಾಗಿದೆ. ಸದ್ಯ ಬೆಂಗಳೂರು ಬುಲ್ಸ್‌ನಲ್ಲಿ 9 ಆಟಗಾರರಿದ್ದು, ಇತರರನ್ನು ಹರಾಜಿನಲ್ಲಿ ಖರೀದಿಸಬಹುದಾಗಿದೆ. ತಂಡಕ್ಕೆ ಹರಾಜಿನಲ್ಲಿ ಬಳಸಲು 2.99 ಕೋಟಿ ರುಪಾಯಿ ಬಾಕಿ ಇದೆ.

Asian Games 2023: ಹಾಂಗ್ಝೋ ಏಷ್ಯಾಡ್‌ಗೆ ವೈಭವದ ತೆರೆ..!

ತಾರೆಯರಿಗೆ ಬಂಪರ್?: ಈ ಬಾರಿ ಹರಾಜಿನಲ್ಲಿ ತಾರಾ ಆಟಗಾರರಾದ ಪವನ್ ಶೆರಾವತ್, ವಿಕಾಸ್ ಖಂಡೋಲಾ, ಫಜಲ್ ಅಟ್ರಾಚಲಿ, ಮಣೀಂದರ್ ಸಿಂಗ್, ಫಜಲ್‌ ಟಾಪ್-3 ದುಬಾರಿ ಆಟಗಾರರು ಎನಿಸಿಕೊಂಡಿದ್ದರು. ಈ ಬಾರಿ ಅವರನ್ನು ತಂಡಗಳು ರೀಟೈನ್ ಮಾಡಿಕೊಂಡಿಲ್ಲ.

ಪವನ್ ಶೆರಾವತ್ ಕಳೆದ ಬಾರಿ 2.26 ಕೋಟಿ ರುಪಾಯಿಗೆ ತಮಿಳ್ ತಲೈವಾಸ್ ತಂಡಕ್ಕೆ ಬಿಕರಿಯಾಗಿದ್ದರು. ಆದರೆ ಮೊದಲ ಪಂದ್ಯದಲ್ಲೇ ಗಾಯಗೊಂಡು ಲೀಗ್‌ನಿಂದ ಹೊರಬಿದ್ದಿದ್ದರು. ಮೊನ್ನೆಯಷ್ಟೇ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಿಸಿಕೊಟ್ಟಿರುವ ಪವನ್ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ದು, ಈ ಬಾರಿಯೂ ಹರಾಜಿನಲ್ಲಿ ಅವರೇ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದರೆ ಅಚ್ಚರಿಯಿಲ್ಲ. 

ತಂಡ ಬಾಕಿ ಇರುವ ಹಣ ತಂಡದಲ್ಲಿರುವ ಆಟಗಾರರು

(ಕೋಟಿ ರು.ಗಳಲ್ಲಿ)

ಬೆಂಗಾಲ್‌ 4.22 8

ಬೆಂಗಳೂರು 2.99 9

ಡೆಲ್ಲಿ 3.12 9

ಗುಜರಾತ್‌ 4.02 6

ಹರ್ಯಾಣ 3.13 12

ಜೈಪುರ 0.87 12

ಪಾಟ್ನಾ 3.09 10

ಪುಣೇರಿ 2.80 13

ತಲೈವಾಸ್‌ 2.43 14

ಟೈಟಾನ್ಸ್‌ 3.44 9

ಮುಂಬಾ 2.69 13

ಯೋಧಾಸ್‌ 2.06 10

ರಾಷ್ಟ್ರೀಯ ಗೇಮ್ಸ್‌ಗೆ ರಾಜ್ಯ ಟೆನಿಸ್‌ ತಂಡ ಪ್ರಕಟ

ಬೆಂಗಳೂರು: ಅ.30ರಿಂದ ನ.6ರ ವರೆಗೂ ಗೋವಾದಲ್ಲಿ ನಡೆಯಲಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ಟೆನಿಸ್‌ ತಂಡ ಪ್ರಕಟಗೊಂಡಿದೆ. ಕಳೆದ ವರ್ಷ ರಾಜ್ಯ ತಂಡ 1 ಚಿನ್ನ ಸೇರಿ 8 ಪದಕ ಜಯಿಸಿತ್ತು.

ತಂಡಗಳು: ಪುರುಷರು-ಪ್ರಜ್ವಲ್‌ ದೇವ್‌, ದೀಪಕ್‌, ರಿಶಿ ರೆಡ್ಡಿ, ರಶೀನ್‌, ಕೆವಿನ್‌. ಮೀಸಲು ಆಟಗಾರ: ಸೂರಜ್‌. ಮಹಿಳೆಯರು-ಶರ್ಮದಾ, ಸುಹಿತಾ, ಸೋಹಾ, ಪ್ರತಿಭಾ, ಜಾನ್ವಿ. ಮೀಸಲು ಆಟಗಾರ್ತಿ: ಸಿರಿ ಪಾಟೀಲ್‌.

ರಾಜ್ಯ ಮಟ್ಟದ ನೆಟ್‌ಬಾಲ್‌: ಬೆಂಗ್ಳೂರು ಕ್ವಾರ್ಟರ್‌ಗೆ

ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ರಾಜ್ಯಮಟ್ಟದ ನೆಟ್ ಬಾಲ್ ಕ್ರೀಡಾಕೂಟಕ್ಕೆ ಭಾನುವಾರ ನಗರದ ಹೊರವಲಯದಲ್ಲಿರುವ ಮಾಕಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಚಾಲನೆ ದೊರೆಯಿತು. ಈ ಕೂಟದಲ್ಲಿ 22 ಜಿಲ್ಲೆಗಳ ಅಂಡರ್‌-14, ಅಂಡರ್‌-17 ತಂಡಗಳು ಪಾಲ್ಗೊಂಡಿವೆ. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಉತ್ತರ, ಹಾಸನ, ಉಡುಪಿ, ಮೈಸೂರು, ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ದಾವಣಗೆರೆ, ಹಾಸನ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹಾಸನ, ಮೈಸೂರು, ಬಾಗಲೂರು ದಕ್ಷಿಣ, ಉಡುಪಿ, ಚಿಕ್ಕೋಡಿ, ಮಂಡ್ಯ, ಧಾರವಾಡ, ಬೆಂಗಳೂರು ಉತ್ತರ ತಂಡಗಳು ಅಂತಿಮ-8ರ ಘಟ್ಟಕ್ಕೇರಿವೆ.
 

Follow Us:
Download App:
  • android
  • ios