ಬೆಂಗಳೂರು: ಮದ್ಯಪಾನ ಮಾಡಿ ಲಾರಿ ಚಲಾವಣೆ, ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿ ಸರಣಿ ಅಪಘಾತ: ಸವಾರ ಬಲಿ
ಅಡ್ಡಾದಿಡ್ಡಿ ಚಲಿಸಿದ ಲಾರಿ. ಸರಣಿ ಅಪಘಾತಕ್ಕೆ ಸವಾರ ಬಲಿ. ಪಾನಮತ್ತನಾಗಿ ಕಾರಿಗೆ ಗುದ್ದಿಸಿದ ಲಾರಿ ಚಾಲಕ. 4 ಕಾರು, 1 ಸರಕು ಸಾಗಣೆ ವಾಹನ, ಬೈಕ್, ಲಾರಿ ಜಖಂ. ಬೈಕ್ ಸವಾರ ಸಾವು
ಬೆಂಗಳೂರು (ಆ.27): ಪಾನಮತ್ತನಾಗಿ ಚಾಲಕ ಅಡ್ಡಾದಿಡ್ಡಿಯಾಗಿ ಲಾರಿ ಚಲಾಯಿಸಿದ ಪರಿಣಾಮ ನಡೆದ ಸರಣಿ ಅಪಘಾತದಲ್ಲಿ ನವ ವಿವಾಹಿತನೊಬ್ಬ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕ ನಿವಾಸಿ ನೇಮರಾಜು (37) ಮೃತ. ಘಟನೆಯಲ್ಲಿ ಗಾಯಗೊಂಡಿರುವ ಕಾರು ಚಾಲಕ ಮುತ್ತುರಾಜು ಹಾಗೂ ರಾಕೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ನಾಲ್ಕು ಕಾರು, 1 ಸರಕು ಸಾಗಾಣಿಕೆ ವಾಹನ, ಬೈಕ್ ಹಾಗೂ ಲಾರಿ ಜಖಂಗೊಂಡಿವೆ. ಅಪಘಾತ ಸಂಬಂಧ ಲಾರಿ ಚಾಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಚಂದ್ರಶೇಖರ್‌ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಆಂಧ್ರಪ್ರದೇಶದಿಂದ ರಾಮಮೂರ್ತಿ ನಗರಕ್ಕೆ ಲಾರಿಯಲ್ಲಿ ಕಬ್ಬಿಣ ಸಾಗಿಸುವಾಗ ಶುಕ್ರವಾರ ರಾತ್ರಿ ಕಲ್ಯಾಣನಗರ ಮೇಲ್ಸೇತುವೆಯಲ್ಲಿ ಆರೋಪಿ ಅಪಘಾತ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ರಶೇಖರ್, ರಾಮಮೂರ್ತಿನಗರದ ಗ್ರಾಹಕರಿಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಕಬ್ಬಿಣ ತರುತ್ತಿದ್ದ. ಸರಕು ತುಂಬಿಕೊಂಡು ಆಂಧ್ರಪ್ರದೇಶ ಬಿಡುವಾಗಲೇ ಮದ್ಯ ಸೇವಿಸಿದ್ದ ಆತ, ರಾತ್ರಿ 12.45ರಲ್ಲಿ ಕಲ್ಯಾಣ ನಗರದ ಮೇಲ್ಸೇತುವೆ ಮೂಲಕ ರಾಮಮೂರ್ತಿ ನಗರಕ್ಕೆ ಸಾಗುತ್ತಿದ್ದ. ಆ ವೇಳೆ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡು ಮುಂದಿನ ಕಾರಿಗೆ ಚಂದ್ರಶೇಖರ್ ಲಾರಿ ಗುದ್ದಿಸಿದ್ದಾನೆ. ಆಗ ಆ ಕಾರು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಲಾರಿ ಮತ್ತು ಕಾರುಗಳ ನಡುವೆ ಸಿಲುಕಿ ಕೆಳಗುರುಳಿದ ಬೈಕ್ ಸವಾರ ನೇಮರಾಜು ಮೇಲೆ ಲಾರಿ ಚಕ್ರಗಳು ಹರಿದಿವೆ. ಇದರಿಂದ ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕೊನೆಗೆ ಕಾರಿಗೆ ಅಪ್ಪಳಿಸಿ ಲಾರಿ ನಿಂತಿದೆ. ಗಾಯಾಗೊಂಡಿದ್ದ ಕಾರಿನ ಚಾಲಕ ಮುತ್ತುರಾಜು ಹಾಗೂ ಆ ಕಾರಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ರಾಕೇಶ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದಾರೆ. ಇನ್ನುಳಿದ ವಾಹನಗಳಲ್ಲಿದ್ದ ಯಾರೊಬ್ಬರಿಗೂ ಗಂಭೀರ ಸ್ವರೂಪದ ಪೆಟ್ಟಾಗಿಲ್ಲ ಎಂದು ಪೊಲೀಸರು ವಿವರಿಸಿದ್ದಾರೆ.
ಪತ್ನಿಯ ಕರೆ ತರಲು ಹೋಗುತ್ತಿದ್ದ ಸವಾರ: ಹಾಸನ ಜಿಲ್ಲೆ ಆಲೂರು ತಾಲೂಕಿನ ಮೃತ ನೇಮಿರಾಜು, ನಗರದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಆರು ತಿಂಗಳ ಹಿಂದೆಷ್ಟೇ ಅವರು ವಿವಾಹವಾಗಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆ ರಾಮಮೂರ್ತಿನಗರ ಸಮೀಪದ ಕಸ್ತೂರಿನಗರದಲ್ಲಿರುವ ತವರು ಮನೆಗೆ ಹೋಗಿದ್ದ ಪತ್ನಿಯನ್ನು ಕರೆತರಲು ಮಾವನ ಮನೆಗೆ ನೇಮರಾಜು ತೆರಳುವಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.