Asianet Suvarna News Asianet Suvarna News

ಶಿಕ್ಷಕಿಯ ಪಿಂಚಣಿ ದಾಖಲೆಗೆ ಸಹಿ ಹಾಕಲು ಲಂಚ ಸ್ವೀಕರಿಸಿದ ಶಾಲಾ ಸಂಚಾಲಕಿ ಲೋಕಾ ಬಲೆಗೆ

ತನ್ನದೇ ಶಾಲೆಯಲ್ಲಿ ನಿವೃತ್ತಿಹೊಂದಲಿರುವ ಶಿಕ್ಷಕಿಯ ಪಿಂಚಣಿ ದಾಖಲೆಗೆ ಸಹಿ ಹಾಕಲು ಶಾಲಾ ಸಂಚಾಲಕಿ 5 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಾರೆ.

Lokayukta raid while demanding bribe to sign pension document of school teacher at mangaluru rav
Author
First Published Jul 8, 2023, 2:38 PM IST

ಮಂಗಳೂರು (ಜು.8) :  ತನ್ನದೇ ಶಾಲೆಯಲ್ಲಿ ನಿವೃತ್ತಿಹೊಂದಲಿರುವ ಶಿಕ್ಷಕಿಯ ಪಿಂಚಣಿ ದಾಖಲೆಗೆ ಸಹಿ ಹಾಕಲು ಶಾಲಾ ಸಂಚಾಲಕಿ 5 ಲಕ್ಷ ರು. ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಾರೆ.

ಮಂಗಳೂರು ತಾಲೂಕಿನ ಬಜಪೆ ಸುಂಕದಕಟ್ಟೆಶ್ರೀನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

ದೂರುದಾರ ಶೋಭಾರಾಣಿ ಅವರು 42 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ, ಬಳಿಕ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜು.31ರಂದು ನಿವೃತ್ತಿ ಹೊಂದುತ್ತಿದ್ದು, ಈ ಹಿನ್ನೆಲೆಯಲ್ಲಿ ಪಿಂಚಣಿ ಪತ್ರಗಳಿಗೆ ಸಹಿ ಹಾಕಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡಲು ಶಾಲಾ ಸಂಚಾಲಕಿಗೆ ಮೇ 25ರಂದು ಮನವಿ ಪತ್ರ ಸಲ್ಲಿಸಿದ್ದರು. ಮನವಿಗೆ ಸ್ವೀಕೃತಿ ಪತ್ರವನ್ನು ನಂತರ ನೀಡುವುದಾಗಿ ತಿಳಿಸಿದ ಸಂಚಾಲಕಿ ಜ್ಯೋತಿ ಎನ್‌.ಪೂಜಾರಿ ಅವರು, ಪಿಂಚಣಿ ಪತ್ರಗಳನ್ನು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕಳುಹಿಸದೇ ಸ್ವೀಕೃತಿ ಪತ್ರ ನೀಡದೇ ದೂರುದಾರರನ್ನು ಸತಾಯಿಸಿದ್ದರು. ಪಿಂಚಣಿ ಪತ್ರಕ್ಕೆ ಸಹಿ ಮಾಡಲು 20 ಲಕ್ಷ ರು.ಗಳ ಬೇಡಿಕೆ ಇರಿಸಿದ್ದರು. ಜು.5ರಂದು ಮತ್ತೆ ಶಿಕ್ಷಕಿ ಸಂಚಾಲಕರನ್ನು ಅವರ ಮನೆಗೆ ತೆರಳಿ ಭೇಟಿ ಮಾಡಿ ಸಹಿ ಮಾಡುವಂತೆ ವಿನಂತಿಸಿದ್ದರು. ಆಗ ಸಹಿ ಮಾಡಬೇಕಾದರೆ 5 ಲಕ್ಷ ರು. ನೀಡುವಂತೆ ಸಂಚಾಲಕಿ ಬೇಡಿಕೆ ಇರಿಸಿದ್ದರು.

ಹಫ್ತಾ ವಸೂಲಿಗೆ ಒತ್ತಡ: ಕಲಬುರಗಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಕಾನ್​ಸ್ಟೇಬಲ್​​ಗಳು

ಅದರಂತೆ ಶಿಕ್ಷಕಿ ಶೋಭಾರಾಣಿ ಅವರು ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದು, ಶುಕ್ರವಾರ ಸಂಚಾಲಕಿ ಜ್ಯೋತಿ ಪೂಜಾರಿಗೆ 5 ಲಕ್ಷ ರು. ಲಂಚ ನೀಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದರು. ಆರೋಪಿ ಜ್ಯೋತಿ ಪೂಜಾರಿಯನ್ನು ಲೋಕಾಯುಕ್ತ ಪೊಲೀಸರು ದಸ್ತಗಿರಿ ಮಾಡಿದ್ದು, ಕೋರ್ಚ್‌ಗೆ ಹಾಜರುಪಡಿಸಲಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿ.ಎ.ಸೈಮನ್‌ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಕಲಾವತಿ, ಚಲುವರಾಜು, ಎಸ್‌ಐಗಳಾದ ವಿನಾಯಕ ಬಿಲ್ಲವ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆಸ್ಪತ್ರೆ ಕಟ್ಟಡದಿಂದ ಜಿಗಿದು ರೋಗಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆ ಕಟ್ಟಡದಿಂದ ಕೆಳಕ್ಕೆ ಹಾರಿಬಿದ್ದು ರೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಸಂಭವಿಸಿದೆ. ಕಡಬ ನಿವಾಸಿ ದಿವಾಕರ್‌(36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಜೂ.30ರಂದು ಅನಾರೋಗ್ಯದಿಂದ ಈತ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ. ವಿಪರೀತ ಮದ್ಯಪಾನ ಮಾಡುತ್ತಿದ್ದ ಈತ ಬೆಳಗ್ಗೆ ಏಕಾಏಕಿ ಆಸ್ಪತ್ರೆಯ ಹೊಸ ಬ್ಲಾಕ್‌ ಕಟ್ಟಡ ಏರಿ ಕೆಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಂದರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಖಾವಿಧಾರಿ ಯುವಕನಿಂದ ಜಾತ್ರೆಗಾಗಿ ಕಲೆಕ್ಷನ್‌: ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಳ್ಳಾಲ: ಜಾತ್ರೆಗೆ ಆರ್ಥಿಕ ನೆರವು ಬೇಕೆಂದು ಹಣ ಸಂಗ್ರದಲ್ಲಿ ತೊಡಗಿದ್ದ ಯುವಕನನ್ನು ತೊಕ್ಕೊಟ್ಟುವಿನ ಕ್ಯಾಟರಿಂಗ್‌ ಸಂಸ್ಥೆ ಮಾಲಕ ರಾಜೇಶ್‌ ಎಂಬವರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸಿಎಂ ತವರಿನಲ್ಲಿ ಸರ್ಕಾರಿ ವೈದ್ಯೆಯ ಲಂಚಾವತಾರ, ಸೂಜಿ ಚುಚ್ಚಿದ್ರು ಕಾಸು, ಬ್ಯಾಂಡೆಂಜ್ ಹಾಕಿದ್ರು ಕಾಸು!

ತೊಕ್ಕೊಟ್ಟು ಕಾಪಿಕಾಡು ರಾಜ್‌ ಕೇಟರರ್ಸ್‌ ಬಳಿ ಬಂದಿದ್ದ ಖಾವಿ ತೊಟ್ಟಯುವಕ ಜಾತ್ರೆ ನಡೆಸಲು ದಾನ ಮಾಡಬೇಕೆಂದು ಮಾಲಕ ರಾಜೇಶ್‌ ಅವರಲ್ಲಿ ಕೇಳಿದ್ದಾನೆ. ರಾತ್ರಿ ವೇಳೆ ಬಂದು ಜಾತ್ರೆಗಾಗಿ ಹಣ ಕೇಳುತ್ತಿರುವ ಬಗ್ಗೆ ಸಂಶಯಗೊಂಡು ಯುವಕನ್ನು ಪ್ರಶ್ನಿಸಿದ್ದರಾಎ. ಆದರೆ ಯುವಕ ಸಮರ್ಪಕವಾಗಿ ಉತ್ತರ ನೀಡದೆ ತನ್ನ ಹೆಸರು ಮುತ್ತಪ್ಪ, ಹೈದರಾಬಾದ್‌ ಮೂಲದವನೆಂದು ಮೊದಲಿಗೆ ಹೇಳಿದ್ದಾನೆ. ಅಲ್ಲದೆ 30 ಜನ ನಗರದಲ್ಲಿ ಇದೇ ರೀತಿ ಕಲೆಕ್ಷನ್‌ ಮಾಡುತ್ತಿರುವುದಾಗಿ ಕನ್ನಡದಲ್ಲಿ ಹೇಳಿದ್ದಾನೆ. ಯುವಕನ ಬಳಿ ಮೊಬೈಲ್‌ ಆಗಲಿ, ಯಾವುದೇ ಗುರುತಿನ ಚೀಟಿ ಇಲ್ಲದಿರುವುದನ್ನು ಗಮನಿಸಿದ ರಾಜೇಶ್‌ ಸ್ಥಳಕ್ಕೆ ಉಳ್ಳಾಲ ಪೊಲೀಸರನ್ನು ಕರೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಯುವಕ ತಾನು ಜಮಖಂಡಿ ಜಿಲ್ಲೆಯವನೆಂದು ಧ್ವಂದ್ವ ಹೇಳಿಕೆಯನ್ನು ನೀಡಿದ್ದಾನೆಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios