Asianet Suvarna News Asianet Suvarna News

Loan App ಕಿರುಕುಳ: ಮಗಳ ಹುಟ್ಟುಹಬ್ಬದಂದೆ ವಿಷ ಕುಡಿದು ದಂಪತಿ ಆತ್ಮಹತ್ಯೆ

ಲೋನ್ ಆಪ್ ಕಿರುಕುಳದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Loan App Harassment Andhra Couple Dies by Suicide on the birthday of one of their daughters akb
Author
First Published Sep 10, 2022, 2:10 PM IST

ಲೋನ್ ಆಪ್ ಕಿರುಕುಳದಿಂದ ಮನನೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಲೋನ್ ಆಪ್‌ ಕಿರುಕುಳದ ಬಗ್ಗೆ ಈ ಹಿಂದೆಯೂ ಸಾಕಷ್ಟು ಈ ರೀತಿಯ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಲೋನ್ ಆಪ್ ಸಹವಾಸ ಮಾಡದಂತೆ ಹಲವು ಮಾಧ್ಯಮಗಳಲ್ಲಿ ವರದಿಗಳಾಗಿದ್ದವು, ಅಲ್ಲದೇ ಕಿರುಕುಳಕ್ಕೊಳಗಾದವರು ಕೂಡ ಪೊಲೀಸರಿಗೆ ದೂರು ನೀಡಿದ ಪೊಲೀಸರು ಕೂಡ ಈ ಬಗ್ಗೆ ಸುದ್ದಿಗೋಷ್ಠಿಗಳಲ್ಲಿ ಮಾಹಿತಿ ನೀಡಿದ್ದರು. ಈ ಮಧ್ಯೆ ಲೋನ್‌ ಆಪ್ ಅನಾಹುತದ ಬಗ್ಗೆ ತಿಳಿಯದೇ ಗುಂಡಿಗೆ ಬಿದ್ದ ದಂಪತಿ ಈಗ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ.

ಲೋನ್ ಆಪ್‌ಗಳು ನೀಡುತ್ತಿದ್ದ ಕಿರುಕುಳ ತಾಳಲಾರದೇ ತಮ್ಮ ಮಗಳೊಬ್ಬಳ ಹುಟ್ಟುಹಬ್ಬದ ದಿನವೇ ದಂಪತಿ ವಿಷ ಸೇವಿಸಿ ಇಹಲೋಕ ತ್ಯಜಿಸಿದ್ದಾರೆ. ಘಟನೆ ಬಗ್ಗೆ ಪೊಲೀಸ್ ಅಧಿಕಾರಿಗಳು ಹೇಳುವಂತೆ, ಕೊಲ್ಲಿ ದುರ್ಗಾ ರಾವ್‌  ಎಂಬುವವರು ಅಲ್ಲೂರಿ ಸೀತಾರಾಮ್ ರಾಜು (Alluri Sitharama Raju) ಜಿಲ್ಲೆಯ ಲಬ್ಬರ್ಥಿ (Labbarthi) ಗ್ರಾಮದವರಾಗಿದ್ದು, ಜೀವನ ಕಟ್ಟಿಕೊಳ್ಳುವುದಕ್ಕಾಗಿ 10 ವರ್ಷಗಳ ಹಿಂದೆ ರಾಜಮಹೇಂದ್ರವರಮ್‌ಗೆ (Rajamahendravaram) ಆಗಮಿಸಿದ್ದರು. ಆರು ವರ್ಷಗಳ ಹಿಂದೆ ಇವರು ರಮ್ಯಾ ಲಕ್ಷ್ಮಿ ( Ramya Lakshmi) ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗೆ 4 ವರ್ಷದ ನಾಗಸಾಯಿ ಹಾಗೂ ಎರಡು ವರ್ಷದ ಲಿಖಿತಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಟ್ಟು ಮಕ್ಕಳು ಸೇರಿ ನಾಲ್ವರಿದ್ದ ಕುಟುಂಬ ರಾಜಮಹೇಂದ್ರವರಮ್‌ನ ಶಾಂತಿನಗರದಲ್ಲಿ ವಾಸವಾಗಿದ್ದರು.

ನಿಮ್ಮ ಫೋನ್‌ಗಳಲ್ಲಿದ್ಯಾ ಸಾಲ ನೀಡುವ ಈ ಚೀನಾ ಆಪ್‌ಗಳು... ಹಾಗಿದ್ರೆ ಈಗ್ಲೇ ಡಿಲಿಟ್ ಮಾಡಿ

ದುರ್ಗಾ ರಾವ್ ವೃತ್ತಿಯಲ್ಲಿ ಓರ್ವ ಪೈಂಟರ್ ಆಗಿದ್ದು, ರಮ್ಯಾ ಲಕ್ಷ್ಮಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದಲ್ಲಿಎದುರಾದ ಕೆಲ ಆರ್ಥಿಕ ಸಂಕಷ್ಟದಿಂದಾಗಿ ಇವರು ಎರಡು ಆನ್ಲೈನ್ ಮೊಬೈಲ್ ಆಪ್‌ಗಳ ಮೂಲಕ ಲೋನ್‌ಗೆ ಅರ್ಜಿ ಸಲ್ಲಿಸಿ ಸಾಲ ಪಡೆದಿದ್ದರು. ಆದರೆ ಅವರಿಗೆ ನಿಗದಿತ ಸಮಯಕ್ಕೆ ಈ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಲೋನ್ ಆಪ್‌ ಸಿಬ್ಬಂದಿ ಇವರಿಗೆ ಕರೆ ನೀಡಿ ಕಿರುಕುಳ ನೀಡಲು ಶುರು ಮಾಡಿದ್ದರು. ಈ ನಡುವೆ ದಂಪತಿ ಸಾಲದ ಸ್ವಲ್ಪಮೊತ್ತವನ್ನು ಪಾವತಿ ಮಾಡಿದ್ದರು. ಆದರೆ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲಾಗಿರಲಿಲ್ಲ.

ಹೀಗಾಗಿ ಲೋನ್ ಆಪ್ ಸಂಸ್ಥೆ ಆಗಾಗ ಇವರಿಗೆ ಕರೆ ಮಾಡಿ ಹಣ ಪಾವತಿ ಮಾಡುವಂತೆ ಕೇಳಿತ್ತು. ಈ ಮಧ್ಯೆ ಈ ದಂಪತಿಗೆ ರಮ್ಯಾಲಕ್ಷ್ಮಿಯ ಫೋಟೋಗಳನ್ನು ಅಶ್ಲೀಲಗೊಳಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡಲಾಗಿತ್ತು. ಹೀಗಾಗಿ ಲೋನ್ ಪಾವತಿ ಮಾಡುವ ಸಲುವಾಗಿ ದುರ್ಗಾರಾವ್‌ ತಮ್ಮ ಪೇಂಟಿಂಗ್ ಕೆಲಸದ ಜೊತೆ ಡೆಲಿವರಿ ಬಾಯ್ ಆಗಿಯೂ 10 ದಿನಗಳ ಹಿಂದಷ್ಟೇ ಕೆಲಸ ಮಾಡಲು ಶುರು ಮಾಡಿದ್ದರು. ಅಲ್ಲದೇ ಹೆಚ್ಚಿನ ಹಣ ಸಂಪಾದನೆಗೆ ತಮ್ಮಿಂದ ಸಾಧ್ಯವಾದ ಎಲ್ಲವನ್ನೂ ಮಾಡಿದ್ದರು. 

Loan App Crime: ಲೋನ್‌ ಆ್ಯಪ್‌ ಕಿರುಕುಳಕ್ಕೆ ಮಂಗ್ಳೂರಲ್ಲಿ ಮೊದಲ ಬಲಿ

ಈ ನಡುವೆ ರಮ್ಯಾ ಅವರಿಗೆ ಕಿರುಕುಳ ಹೆಚ್ಚಿಸಿದ ಲೋನ್ ಆಪ್, ಆಕೆಯ ವಿರೂಪಗಳಿಸಿದ ಅಶ್ಲೀಲ ಫೋಟೋವೊಂದನ್ನು ಆಕೆಗೇ ವಾಟ್ಸಾಪ್‌ ಮೂಲಕ ಕಳುಹಿಸಿ, ಎರಡು ದಿನಗಳಲ್ಲಿ ಲೋನ್ ಕಟ್ಟದಿದ್ದರೆ ಶೀಘ್ರದಲ್ಲೇ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದರು.

ಇದಾದ ನಂತರ ದಂಪತಿ ಸೆಪ್ಟೆಂಬರ್ 5 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ (West Godavari district) ಮೊಗಲ್ಟೂರಿಗೆ ಹೋಗಿದ್ದು, ಅಲ್ಲಿ ನಗರದ ಗೋದಾವರಿ ನದಿಯ ಬಂಡ್‌ನಲ್ಲಿರುವ ಹೋಟೆಲ್‌ನಲ್ಲಿ ಉಳಿದಿದ್ದಾರೆ.ಮಧ್ಯರಾತ್ರಿಯ ನಂತರ, ರಮ್ಯಾ ತನ್ನ ಸೋದರ ಸಂಬಂಧಿಗೆ ಕರೆ ಮಾಡಿ ತಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಮಕ್ಕಳಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದ್ದಾರೆ.

ಸೋದರ ಸಂಬಂಧಿ ಶೀಘ್ರದಲ್ಲೇ ಇತರ ಸಂಬಂಧಿಕರನ್ನು ಕರೆದುಕೊಂಡು ಹೋಟೆಲ್ ಕೋಣೆಗೆ ತಲುಪುವಷ್ಟರಲ್ಲಿ ದಂಪತಿಗಳು ಪ್ರಜ್ಞಾಹೀನರಾಗಿ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ದಂಪತಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಚಿಕಿತ್ಸೆ ವೇಳೆ ದಂಪತಿ ಮೃತಪಟ್ಟಿದ್ದಾರೆ. ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
 

Follow Us:
Download App:
  • android
  • ios