7ನೇ ಹಂತದಿಂದ ಜಿಗಿದು ಎಲ್‌ಎಲ್‌ಬಿ ವಿದ್ಯಾರ್ಥಿನಿ ಆತ್ಮಹತ್ಯೆ ಸುತ್ತಾಡಲು ಬರಲಿಲ್ಲ ಎಂದು ಭಾವಿ ಪತಿ ಮನೆ ಬಳಿ ಬಂದು ಗಲಾಟೆ ಮನನೊಂದ ವಿದ್ಯಾರ್ಥಿನಿ ಸಾವಿಗೆ ಶರಣು

ಬೆಂಗಳೂರು (ಡಿ.20) : ರಜೆ ದಿನ ಸುತ್ತಾಡಲು ಜತೆಯಲ್ಲಿ ಬರಲಿಲ್ಲವೆಂದು ಭಾವಿಪತಿ ಬೈದು ಗಲಾಟೆ ಮಾಡಿದ ಎಂಬ ಕಾರಣಕ್ಕೆ ಮನನೊಂದು ಕಾನೂನು ವಿದ್ಯಾರ್ಥಿನಿ ಕಾಲೇಜಿನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವಿ.ವಿ.ಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನಶಂಕರಿ ನಿವಾಸಿ ವಾಣಿ(23) ಮೃತ ಯುವತಿ. ವಿ.ವಿ.ಪುರಂನ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜು ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಕಾಲೇಜಿನ ಕಟ್ಟಡದಿಂದ ಜಿಗಿದು ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆ

ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರ್‌ ಕಾಲೇಜಿನ ಆವರಣದ ಕಾನೂನು ಕಾಲೇಜಿನಲ್ಲಿ ಪ್ರಥಮ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು. ಬೆಳಗ್ಗೆ ಎಂದಿನಂತೆ ಮನೆಯಿಂದ ಕಾಲೇಜಿಗೆ ಬಂದಿದ್ದಾಳೆ. ಬೆಳಗ್ಗೆ 11ರ ಸುಮಾರಿಗೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜಿನ 7ನೇ ಮಹಡಿಗೆ ತೆರಳಿ ಕೆಳಗೆ ಜಿಗಿದಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಾಣಿಯನ್ನು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ವಾಣಿ ಕೊನೆಯುಸಿರೆಳೆದಿದ್ದಳು.

ಕಳೆದ ತಿಂಗಳು ನಿಶ್ಚಿತಾರ್ಥ:

ಕಳೆದ ತಿಂಗಳು ವಾಣಿಗೆ ಖಾಸಗಿ ಕಂಪನಿ ಉದ್ಯೋಗಿ ಚಂದ್ರಶೇಖರ್‌ ಜತೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಈ ನಡುವೆ ಚಂದ್ರಶೇಖರ್‌ ರಜೆ ದಿನಗಳು ಹೊರಗಡೆ ಸುತ್ತಾಡಲು ಬರುವಂತೆ ವಾಣಿಯನ್ನು ಕರೆಯುತ್ತಿದ್ದ. ಆದರೆ, ವಾಣಿ ವಿವಾಹ ಆಗುವವರೆಗೂ ಎಲ್ಲಿಗೂ ಬರುವುದಿಲ್ಲ ಎಂದಿದ್ದಳು. ಭಾನುವಾರ ರಜೆ ಇದ್ದ ಕಾರಣ ಸುತ್ತಾಡಲು ಬರುವಂತೆ ವಾಣಿಯನ್ನು ಕರೆದಿದ್ದಾನೆ. ಇದಕ್ಕೆ ವಾಣಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಚಂದ್ರಶೇಖರ್‌, ವಾಣಿ ಮನೆ ಬಳಿ ಬಂದು ಗಲಾಟೆ ಮಾಡಿ ತೆರಳಿದ್ದ.

Bengaluru: ಶಿಕ್ಷಕಿ ಬೈದಿದ್ದಕ್ಕೆ ಡೆತ್‌ನೋಟ್‌ ಬರೆದಿಟ್ಟು 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಈ ಘಟನೆಯಿಂದ ವಾಣಿ ಮಾನಸಿಕವಾಗಿ ನೊಂದಿದ್ದಳು. ಹೀಗಾಗಿ ವಾಣಿ ಮರಣಪತ್ರ ಬರೆದಿಟ್ಟು ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ವಾಣಿಯ ತಾಯಿ ಭಾವಿ ಅಳಿಯ ಚಂದ್ರಶೇಖರ್‌ ವಿರುದ್ಧ ದೂರು ನೀಡಿದ್ದಾರೆ. ಈ ದೂರು ಧರಿಸಿ ವಿ.ವಿ.ಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.