Supreme Court verdict : ಲಿಫ್ಟ್ ಅಪಘಾತವಾದ್ರೆ ಯಾರು ಹೊಣೆ? ಯಾರು ಪರಿಹಾರ ನೀಡ್ಬೇಕು? ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೂವರ ಹೆಸರನ್ನು ಸೂಚಿಸಿದೆ.
ಲಿಫ್ಟ್‌ನಲ್ಲಿ ಅಪಘಾತ ಸಂಭವಿಸಿದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದೆ. ಇನ್ನು ಮುಂದೆ ಲಿಫ್ಟ್ನಲ್ಲಿ ಸಂಭವಿಸುವ ಯಾವುದೇ ಅಪಘಾತಕ್ಕೆ ಲಿಫ್ಟ್ ತಯಾರಿಸಿದ ಕಂಪನಿ, ಅದರ ನಿರ್ವಹಣೆ ಮಾಡುತ್ತಿರುವ ಸಂಸ್ಥೆ ಹಾಗೂ ಕಟ್ಟಡದ ಮಾಲೀಕರು ಅಥವಾ ಆಡಳಿತ ಮಂಡಳಿ ಈ ಮೂವರೂ ಜಂಟಿಯಾಗಿ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಏನಿದು ಪ್ರಕರಣ?
ಈ ಪ್ರಕರಣ 2003ರಲ್ಲಿ ನವದೆಹಲಿಯಲ್ಲಿರುವ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ಪ್ರಧಾನ ಕಚೇರಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದೆ. ಕಟ್ಟಡದ ಲಿಫ್ಟ್ನಲ್ಲಿ 13 ಅಧಿಕಾರಿಗಳು ಪ್ರಯಾಣಿಸುತ್ತಿದ್ದಾಗ, ಲಿಫ್ಟ್ ಆರನೇ ಮತ್ತು ಏಳನೇ ಮಹಡಿಯ ಮಧ್ಯೆ ಏಕಾಏಕಿ ನಿಂತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಅಧಿಕಾರಿ ವಿಪಿನ್ ಹಂಡಾ ಅವರು ಲಿಫ್ಟ್ನಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಿ ಲಿಫ್ಟ್ ಹಠಾತ್ ಕೆಳಕ್ಕೆ ಚಲಿಸಿದ್ದರಿಂದ ಅವರು ಗಂಭೀರವಾಗಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಕಂಪನಿಯ ವಾದವೇನು?
ಲಿಫ್ಟ್ ತಯಾರಿಸಿದ ಕಂಪನಿ, ಈ ದುರ್ಘಟನೆ ರಕ್ಷಣಾ ಕಾರ್ಯಾಚರಣೆಯ ವೇಳೆ ನಡೆದ ಮಾನವೀಯ ತಪ್ಪಿನಿಂದ ಸಂಭವಿಸಿದೆ ಎಂದು ವಾದಿಸಿತು. ಅಲ್ಲದೆ ಕಟ್ಟಡದಲ್ಲಿ ವಿದ್ಯುತ್ ವೋಲ್ಟೇಜ್ ಏರಿಳಿತ ಇರುವ ಬಗ್ಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿತು.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಲಿಫ್ಟ್ನಲ್ಲಿ ಬಹಳ ದಿನಗಳಿಂದ ತಾಂತ್ರಿಕ ದೋಷಗಳಿದ್ದರೂ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದು ಸಂಬಂಧಪಟ್ಟ ಎಲ್ಲಾ ಪಕ್ಷಗಳ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅದರಂತೆ ಪರಿಹಾರದ ಶೇಕಡಾ 70ರಷ್ಟು ಮೊತ್ತವನ್ನು ಲಿಫ್ಟ್ ಕಂಪನಿ, ಶೇಕಡಾ 25 ರಷ್ಟು ಮೊತ್ತವನ್ನು ನಿರ್ವಹಣಾ ಸಂಸ್ಥೆ (MES) ಹಾಗೂ ಉಳಿದ ಶೇಕಡಾ 5 ರಷ್ಟು ಮೊತ್ತವನ್ನು RAW ಭರಿಸಬೇಕು ಎಂದು ಆದೇಶಿಸಿದೆ.


