ಪ್ರಕರಣವನ್ನು ಪರಿಷತ್ತಿನ ಶಿಸ್ತು ಸಮಿತಿಗೆ ವಹಿಸಿಸಲಾಗಿದೆ. ಅದರ ವಿಚಾರಣೆ ಪೂರ್ಣಗೊಳ್ಳುವರೆಗೆ ವಕೀಲ ಎಚ್‌.ಮಂಜುನಾಥ್‌ ಅವರ ಸನ್ನದು ಅಮಾನತುಪಡಿಸಲಾಗಿದೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ್‌ ರಘು  

ಬೆಂಗಳೂರು(ನ.25):  ಕಚೇರಿಯ ಕಿರಿಯ ವಕೀಲೆಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ನಗರದ ವಕೀಲ ಎಚ್‌.ಮಂಜುನಾಥ್‌ (46) ಅವರ ‘ಸನ್ನದು’ ಅನ್ನು ತಾತ್ಕಾಲಿಕವಾಗಿ ಅಮಾನತುಪಡಿಸಿ ಕರ್ನಾಟಕ ವಕೀಲರ ಪರಿಷತ್‌ ಆದೇಶಿಸಿದೆ. ಲೈಂಗಿಕ ಕಿರುಕುಳಕ್ಕೆ ತುತ್ತಾದ ಮಹಿಳಾ ವಕೀಲೆ ಸಲ್ಲಿಸಿದ್ದ ದೂರು ಆಧರಿಸಿ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿದ ನಂತರ ಕರ್ನಾಟಕ ವಕೀಲರ ಪರಿಷತ್‌ ಇತ್ತೀಚೆಗೆ ಈ ಆದೇಶ ಮಾಡಿದೆ.

ಪ್ರಕರಣವನ್ನು ಪರಿಷತ್ತಿನ ಶಿಸ್ತು ಸಮಿತಿಗೆ ವಹಿಸಿಸಲಾಗಿದೆ. ಅದರ ವಿಚಾರಣೆ ಪೂರ್ಣಗೊಳ್ಳುವರೆಗೆ ವಕೀಲ ಎಚ್‌.ಮಂಜುನಾಥ್‌ ಅವರ ಸನ್ನದು ಅಮಾನತುಪಡಿಸಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಎಚ್‌.ಎಲ್‌.ವಿಶಾಲ್‌ ರಘು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ನಾದಿನಿ ಜೊತೆ ಅಶ್ಲೀಲವಾಗಿ ವರ್ತಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾವನ ಮೇಲೆಯೂ ಹಲ್ಲೆ ನಡೆಸಿದ ಕಾಮುಕ!

ದೂರುದಾರೆ ವಕೀಲೆಯ ದೂರಿಗೆ ವಿವರಣೆ ಕೇಳಿ ವಕೀಲ ಎಚ್‌.ಮಂಜುನಾಥ್‌ಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. 2023ರ ಅ.5ರಂದು ಪರಿಷತ್‌ಗೆ ಪತ್ರ ಸಲ್ಲಿಸಿದ ಅವರು, ತಮ್ಮ ವಿವರಣೆ ಸಲ್ಲಿಸಲು 10ರಿಂದ 14 ದಿನಗಳ ಅವಕಾಶ ನೀಡಲು ಕೋರಿದ್ದರು. ಅದಾದ 30 ದಿನ ಕಳೆದರೂ ತಮ್ಮ ವಿವರಣೆ, ಆಕ್ಷೇಪಣೆ ಸಲ್ಲಿಸಲು ಅವರು ವಿಫಲವಾಗಿದ್ದಾರೆ. ಹೀಗಾಗಿ, ಪರಿಷತ್ತಿನ ಶಿಸ್ತು ಪ್ರಾಧಿಕಾರದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಯಿತು.

ದೂರು, ಅದರೊಂದಿಗೆ ಲಗತ್ತಿಸಿರುವ ದೂರುದಾರೆ ಮತ್ತು ವಕೀಲ ಎಚ್‌.ಮಂಜುನಾಥ್‌ ನಡುವಿನ ವಾಟ್ಸ್‌ ಆ್ಯಪ್‌ ಸಂದೇಶಗಳನ್ನು ಪರಿಶೀಲಿಸಿದಾಗ, ಮಂಜನಾಥ್‌ ತನ್ನ ಕಚೇರಿಯ ಕಿರಿಯ ವಕೀಲೆಯಾಗಿದ್ದ ದೂರುದಾರೆಗೆ ಲೈಂಗಿಕ ಕಿರುಕುಳ ನೀಡಿರುವುದು, ಜೀವ ಬೆದರಿಕೆ ಹಾಕಿರುವುದು ಮತ್ತು ವೃತ್ತಿಪರವಾಗಿ ತಪ್ಪಾಗಿ ನಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಅವರ ಸನ್ನದು ಅಮಾನತುಪಡಿಸಲಾಗುತ್ತಿದೆ ಎಂದು ಪರಿಷತ್‌ ಆದೇಶದಲ್ಲಿ ಹೇಳಿದೆ.