ಎಸ್‌ಐ ಕರ್ಮಕಾಂಡ ರೀತಿಯೇ ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ!
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕೆಪಿಟಿಸಿಎಲ್ ಕಿರಿಯ ಅಭಿಯಂತರ (ಜೆಇ)ರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯನ್ನು ಬೆಳಗಾವಿ ಪೊಲೀಸರು ತೀವ್ರಗೊಳಿಸಿದ್ದಾರೆ.
ಬೆಳಗಾವಿ (ಆ.23): ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ವು ಕೆಪಿಟಿಸಿಎಲ್ ಕಿರಿಯ ಅಭಿಯಂತರ (ಜೆಇ)ರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದ ತನಿಖೆಯನ್ನು ಬೆಳಗಾವಿ ಪೊಲೀಸರು ತೀವ್ರಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಅಪ್ಪ-ಮಗ ಸೇರಿ 9 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನೂ ಪ್ರಮುಖ ನಾಲ್ವರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ. ಪಿಎಸ್‌ಐ ನೇಮಕಾತಿ ಪರೀಕ್ಷೆ ವೇಳೆ ನಡೆದಂತೆ ಬ್ಲೂಟೂತ್ ಬಳಕೆಯಾಗಿದ್ದಲ್ಲದೆ, ನೆಟ್‌ವರ್ಕ್ ಜಾಮರ್ ಅನ್ನೂ ನಿಷ್ಕ್ರಿಯ ಗೊಳಿಸಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಪಿ ಡಾ.ಸಂಜೀವ್ ಪಾಟೀಲ್, ಆ.7ರಂದು ಗೋಕಾಕ ನಗರದ ಜೆಎಸ್‌ಎಸ್ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿ ಸಿದ್ದಪ್ಪ ಕೆಂಪಣ್ಣ ಮದಿಹಳ್ಳಿ ಎಂಬಾತ ಪ್ರಶ್ನೆ ಪತ್ರಿಕೆ ಪಡೆದು ಸ್ಮಾರ್ಚ್ ವಾಚ್ ಮೂಲಕ ಗೆಳೆಯ ಸಂಜು ಭಂಡಾರಿಗೆ ಕಳುಹಿಸುತ್ತಿದ್ದ. ಆತನ ಮೂಲಕ ಬರುತ್ತಿದ್ದ ಉತ್ತರ ನೋಡಿ ಬರೆಯುತ್ತಿದ್ದ. ಕೆಂಪಣ್ಣನನ್ನು ಬಂಧಿಸಿ ವಿಚಾರಿಸಿದಾಗ ಇನ್ನೂ ಹಲವರು ಈ ಅಕ್ರಮದಲ್ಲಿ ಭಾಗಿಯಾಗಿರುವ ಮಾಹಿತಿ ನೀಡಿದ್ದಾನೆ. ವ್ಯವಸ್ಥಿತ ಗ್ಯಾಂಗ್‌ವೊಂದು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಗದಗ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಯ ಗೋಕಾಕ, ಹುಕ್ಕೇರಿ ಹಾಗೂ ಅಥಣಿ ತಾಲೂಕಿಗೂ ಇದು ಹಬ್ಬಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.
ಕೆಪಿಟಿಸಿಎಲ್ ಪರೀಕ್ಷೆಯಲ್ಲೂ ಅಕ್ರಮ: ಗದಗ ಕಾಲೇಜಿನ ಉಪಪ್ರಾಂಶುಪಾಲ, ಪುತ್ರ ಅರೆಸ್ಟ್
ಪ್ರಕರಣ ಸಂಬಂಧ ಭಾನುವಾರವಷ್ಟೇ ಗದಗ ಜಿಲ್ಲೆಯ ಬೆಟಗೇರಿಯ ಅಮರೇಶ ಚಂದ್ರಶೇಖರಯ್ಯ ರಾಜೂರ, ಮೂಲತಃ ಚಿಕ್ಕೋಡಿ ತಾಲೂಕಿನ ಸದ್ಯ ಗದಗ ನಿವಾಸಿ ಉಪ ಪ್ರಾಚಾರ್ಯ ಮಾರುತಿ ಶಂಕರ ಸೋನವಣಿ ಹಾಗೂ ಪುತ್ರ ಸುಮಿತ್ ಕುಮಾರ್ ಸೋನವಣಿ ಅವರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪ್ರಮುಖ ಆರೋಪಿ ಸಂಜು ಭಂಡಾರಿಗಾಗಿ ಬಲೆ ಬೀಸಲಾಗಿದೆ.
ತನಿಖೆ ವೇಳೆ ಗದಗದಲ್ಲೂ ಪ್ರಶ್ನೆ ಪತ್ರಿಕೆ ಲೀಕ್ ಆದ ವಿಚಾರ ಬೆಳಕಿಗೆ ಬಂದಿದೆ. ಗದಗ ಮುನ್ಸಿಪಲ್ ಪಿಯು ಕಾಲೇಜಿನ ಪ್ರಾಚಾರ್ಯರ ಪುತ್ರ ಪತ್ರಕರ್ತರ ಸೋಗಿನಲ್ಲಿ ಮುಖಕ್ಕೆ ಮಾಸ್‌್ಕ ಹಾಕಿಕೊಂಡು ತಂದೆ ಇರುವ ಕಾಲೇಜಿಗೆ ಪ್ರವೇಶಿಸಿ ಪ್ರಶ್ನೆಪತ್ರಿಕೆಯ ಫೋಟೋ ತೆಗೆದುಕೊಂಡಿದ್ದ. ಆ ಪ್ರಶ್ನೆಪತ್ರಿಕೆಯನ್ನು ಮಾಲದಿನ್ನಿ ಗ್ರಾಮದ ಸುನೀಲ ಭಂಗಿ ಎಂಬಾತನಿಗೆ ರವಾನಿಸಿದ್ದ. ನಂತರ ಹುಕ್ಕೇರಿ ತಾಲೂಕಿನ ಶಿರಹಟ್ಟಿಬಿ.ಕೆ.ಗ್ರಾಮದ ಬಸವಣ್ಣಿ ದೊಣವಾಡ ಎಂಬಾತ ಶಿರಹಟ್ಟಿಯ ತೋಟದ ಮನೆಯೊಂದರಲ್ಲಿ ಕೂತು ಪೋನ್ ಮೂಲಕ ಉತ್ತರ ಹೇಳುತ್ತಿದ್ದ. ಅಲ್ಲೂ ಹೋಗಿ ಪರಿಶೀಲಿಸಿದಾಗ ಹಲವು ದಾಖಲೆಗಳು ಸಿಕ್ಕಿವೆ ಎಂದಿದ್ದಾರೆ.
ಆ ದಾಖಲೆಗಳಲ್ಲಿ ಪ್ರಶ್ನೆಪತ್ರಿಕೆಯ ಫೋಟೋ ಮೇಲೆ ಇದ್ದ ಕ್ರಮಸಂಖ್ಯೆಗಳನ್ನು ಗುರುತಿಸಿ ಮಾಹಿತಿ ಕಲೆಹಾಕಿದಾಗ ಗದಗದ ಮುನ್ಸಿಪಲ್ ಪಿಯು ಕಾಲೇಜಿಗೆ ಹಂಚಿಕೆಯಾಗಿರುವ ಮಾಹಿತಿ ಸಿಕ್ಕಿದೆ. ಅದರಂತೆ ಕಾಲೇಜಿಗೆ ತೆರಳಿ ತನಿಖೆ ನಡೆಸಿ ಪರೀಕ್ಷಾ ಕೇಂದ್ರ ಮೇಲ್ವಿಚಾರಕರೂ ಆಗಿದ್ದ ಉಪಪ್ರಾಚಾರ್ಯ ಮಾರುತಿ ಸೋನವಣಿ ಪುತ್ರ, ಸುಮಿತ್‌ಕುಮಾರ ಸೋನವಣಿಯನ್ನು ತೀವ್ರ ವಿಚಾರಣೆ ನಡೆಸಿದಾಗ ಅಕ್ರಮದ ಕುರಿತು ಇನ್ನಷ್ಟುಮಾಹಿತಿ ಲಭ್ಯವಾಗಿವೆ ಎಂದು ತಿಳಿಸಿದ್ದಾರೆ.
ಬ್ಲೂಟೂತ್ ಅಕ್ರಮ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಾದಂತೆ ಇಲ್ಲೂ ಬ್ಲೂಟೂತ್ ಅಕ್ರಮ ನಡೆದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಬ್ಲೂಟೂತ್ ಬಳಸಲಾಗಿದೆ. ಕಿಂಗ್‌ಪಿನ್ ಸಂಜು ಭಂಡಾರಿ ಇದನ್ನು ರವಾನಿಸಿದ್ದಾನೆ ಎನ್ನಲಾಗಿದೆ. ಈತ ಪೊಲೀಸ್ ಪೇದೆಯೊಬ್ಬರ ಪುತ್ರನಾಗಿದ್ದು, ಈ ಹಿಂದೆ ನಡೆದ ಪೊಲೀಸ್ ಪೇದೆ ಪರೀಕ್ಷೆ ಅಕ್ರಮದಲ್ಲೂ ಈತನ ಪಾತ್ರ ಇರುವ ಹಿನ್ನೆಲೆ ಪೊಲೀಸರು ಬಂಧಿಸಿ ಜೈಲಿಗೆ ಕಳಹಿಸಿದ್ದರು. ಜಾಮೀನು ಮೇಲೆ ಹೊರ ಬಂದು ಈತ ಮತ್ತೆ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಪರೀಕ್ಷೆ ಸಮಯದಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಅಳವಡಿಸಿದ್ದ ನೆಟ್ವರ್ಕ್ ಜಾಮರ್‌ಗಳನ್ನು ನಿಷ್ಕ್ರಿಯಗೊಳಿಸಿರುವ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದಿದ್ದಾರೆ.
ಸಿದ್ದರಾಮಯ್ಯ ಏನು ಮೇಲಿಂದ ಇಳಿದು ಬಂದಿಲ್ಲ: ಸಂಸದ ಮುನಿಸ್ವಾಮಿ
4.5 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ!: ಗೋಕಾಕ ಹಾಗೂ ಹುಕ್ಕೇರಿ ಬಿ.ಕೆ.ಶಿರಹಟ್ಟಿಯ ಗ್ಯಾಂಗ್‌ಗೆ 4.5 ಲಕ್ಷ ನೀಡಿದರೆ ಪ್ರಶ್ನೆ ಪತ್ರಿಕೆ ನೀಡುವ ಬಗ್ಗೆ ಸುಮಿತ್‌ಕುಮಾರ್ ಡೀಲ್ ಕುದುರಿಸಿದ್ದ. ನಂತರ ಈ ಗ್ಯಾಂಗ್ ಅಭ್ಯರ್ಥಿಗಳ ಜತೆಗೆ .6 ಲಕ್ಷ ಕೊಟ್ಟರೆ ಉತ್ತರ ನೀಡುವ ಡೀಲ್ ಕುದುರಿಸಿದ್ದಾರೆ. ಮುಂಗಡವಾಗಿ 3 ಲಕ್ಷ ಹಾಗೂ ಕೀ ಉತ್ತರಗಳು ಬಿಡುಗಡೆಯಾದ ಬಳಿಕ 3 ಲಕ್ಷ ನೀಡುವ ಬಗ್ಗೆ ಮಾತುಕತೆಯಾಗಿತ್ತು.