ಮೂರನೇ ಪತ್ನಿಯನ್ನು ಕೊಲೆಗೈದು ೨೩ ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಗೋಣಿ ಚೀಲದಲ್ಲಿ ಶವವನ್ನು ತುಂಬಿ ಬಸ್ಸಿನಲ್ಲಿ ಕಳುಹಿಸಿದ್ದ ಆರೋಪಿಯನ್ನು ಅಂತಿಮವಾಗಿ ಸ್ವಗ್ರಾಮದಲ್ಲಿ ಬಂಧಿಸಲಾಗಿದೆ.
ಕೊಪ್ಪಳ (ಜೂ.27): ಮೂರನೇ ಪತ್ನಿಯನ್ನು ಕೊಲೆ ಮಾಡಿ ಕಳೆದ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊಪ್ಪಳ ಪೊಲೀಸರು ಬಂಧಿಸಿದ್ದಾರೆ. ಹೆಂತಿ ಕೊಲೆ ಸಂಬಂಧಿಸಿ ಕಳೆದ 23 ವರ್ಷಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಗಂಗಾವತಿ ನಗರ ಪೊಲೀಸರು ಬಂಧಿಸಿ ಕೋರ್ಟ್‌ನ ಎದುರು ಒಪ್ಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಹಾಲದಾಳ ಗ್ರಾಮದ 75 ವರ್ಷದ ವೃದ್ಧ ಹನುಮಂತ ಹುಸೇನಪ್ಪ ಬಂಧಿತ ವ್ಯಕ್ತಿ. ಬಾದರ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿ ಹನುಮಂತ ಹುಸೇನಪ್ಪ ಕೆಲಸ ಮಾಡುತ್ತಿದ್ದ. ಮೊದಲ ಹೆಂಡತಿ ಸಾವು ಕಂಡ ಬಳಿಕ 2ನೇ ಮದುವೆಯಾಗಿದ್ದ. ಆದರೆ, ಗಂಡನ ಜೊತೆ ಜಗಳ ಮಾಡಿಕೊಂಡು ಈಕೆ ಬಿಟ್ಟುಹೋಗಿದ್ದಳು.
ಆದರೆ, ಹನುಮಂತ ಹುಸೇನಪ್ಪ ಸರ್ಕಾರಿ ನೌಕರಿ ಇದ್ದ ಕಾರಣಕ್ಕೆ ಕೊಪ್ಪಳ ತಾಲ್ಲೂಕಿನ ಇಂದರಗಿ ಗ್ರಾಮದ ರೇಣುಕಮ್ಮ ಹೆಸರಿನ ಮಹಿಳೆಯೊಬ್ಬರನ್ನ 3ನೇ ಮದುವೆ ಆಗಿದ್ದ. ಬಳಿಕ ಗಂಗಾವತಿ ನಗರದ ಲಕ್ಷ್ಮಿ ಕ್ಯಾಂಪಿನಲ್ಲಿ ಹೆಂಡತಿ ಜೊತೆ ವಾಸ ಮಾಡುತ್ತಿದ್ದ.
ಆದರೆ,ವೈಯಕ್ತಿಕ ಜಗಳದ ಕಾರಣಕ್ಕೆ 2002 ರಲ್ಲಿ ಪತ್ನಿ ರೇಣುಕಮ್ಮನನ್ನ ಕೊಚ್ಚಿ ಕೊಲೆ ಮಾಡಿದ್ದ ಹನುಮಂತಪ್ಪ ಬಸ್‌ನಲ್ಲಿ ಸಾಗಿಸಿದ್ದ. ಗೋಣಿಚೀಲದಲ್ಲಿ ಮಹಿಳೆಯ ಶವ ತುಂಬಿ ಇದರಲ್ಲಿ ಲಗೇಜ್ ಇದೆಯೆಂದೂ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ಸರ್ಕಾರಿ ಬಸ್ಸಿನಲ್ಲಿ ಕಳುಹಿಸಿದ್ದ. ಆದರೆ, ಕಂಪ್ಲಿಗೆ ಹೋದ ಬಳಿಕ ಗೋಣಿ ಚೀಲದಲ್ಲಿ ಶವ ಕಂಡಿದ್ದ ಕಂಡಕ್ಟರ್, ಪೊಲೀಸ್ ಠಾಣೆಗೆ ಬಸ್ ತೆಗೆದುಕೊಂಡು ಹೋಗಿ ಗಂಗಾವತಿ ನಗರ ಠಾಣೆಯಲ್ಲಿ ದೂರು ನೀಡಿದ್ದ.
ಆದರೆ, ಅಷ್ಟರಲ್ಲಾಗಲೇ ಹನುಮಂತಪ್ಪ ತನ್ನ ಊರನ್ನು ಬಿಟ್ಟು, 23 ವರ್ಷಗಳಿಂದ ಅಲೆಮಾರಿಯ ರೀತಿ ಜೀವನ ಸಾಗಿಸುತ್ತಿದ್ದ. ಇತ್ತಿಚೆಗೆ ಸ್ವಗ್ರಾಮ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮಕ್ಕೆ ಬಂದಿದ್ದ ಹನುಮಂತಪ್ಪನನ್ನು ಗಂಗಾವತಿ ಪೊಲೀಸರು ಬಂಧಿಸಿದ್ದಾರೆ.
ಇಷ್ಟು ವರ್ಷ ಸಂಚಾರಿಯಾಗಿ ಜೀವನ ಸಾಗಿಸುತ್ತಿದ್ದ. 7-8 ತಿಂಗಳ ಹಿಂದೆ ಸ್ವಂತ ಊರು ಹಾಲದಾಳಕ್ಕೆ ಬಂದಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಆಧಾರದ ಮೇರೆಗೆ, ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ನಗರಠಾಣೆ ಪಿಐ ಪ್ರಕಾಶ್ ಮಾಳಿ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಸಿರವಾರ್ ತಾಲ್ಲೂಕಿನ ಆತನೂರ ಗ್ರಾಮದಲ್ಲಿ ಬಂಧಿಸಿದ್ದಾರೆ.
