ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ಮಗನೊಬ್ಬ, ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಗೆ ಪೀಡಿಸಿ ದೊಣ್ಣೆಯಿಂದ ಭೀಕರವಾಗಿ ಹಲ್ಲೆ. ತಾಯಿಯನ್ನು ರಕ್ಷಿಸಲು ಬಂದ ನಾದಿನಿಯ ಮೇಲೂ ದಾಳಿ ನಡೆಸಿದ್ದು, ಈ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೋಲಾರ (ಡಿ.28): ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ಮಗನೊಬ್ಬ ತನ್ನನ್ನು ಹೆತ್ತು ಪೋಷಿಸಿದ ತಾಯಿಯ ಮೇಲೆಯೇ ದೊಣ್ಣೆಯಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾನೆ.
ಹಡೆದ ತಾಯಿಯ ಮೇಲೆ ಮಗನಿಂದಲೇ ಹಲ್ಲೆ
ದೇವರಾಯಸಮುದ್ರದ ಸುಬ್ರಮಣ್ಯಂ ಎಂಬಾತನೇ ತನ್ನ ತಾಯಿ ನಾರಾಯಣಮ್ಮ ಎಂಬುವವರ ಮೇಲೆ ಹಲ್ಲೆ ಮಾಡಿದ ಪಾಪಿ ಮಗ. ತಾಯಿಯ ಹೆಸರಿನಲ್ಲಿರುವ ಜಮೀನು, ಮನೆ ಹಾಗೂ ಫ್ಲೋರ್ ಮಿಲ್ ತನ್ನ ಹೆಸರಿಗೆ ವರ್ಗಾಯಿಸಬೇಕು ಎಂದು ಪೀಡಿಸುತ್ತಿದ್ದ ಸುಬ್ರಮಣ್ಯಂ, ಗಲಾಟೆ ವಿಕೋಪಕ್ಕೆ ಹೋದಾಗ ಅಮಾನವೀಯವಾಗಿ ನಡೆದುಕೊಂಡಿದ್ದಾನೆ. ತಾಯಿಯನ್ನು ಎಳೆದಾಡಿ ದೊಣ್ಣೆಯಿಂದ ಹಲ್ಲೆ ಮಾಡಿರುವ ದೃಶ್ಯಗಳು ಎಂಥವರನ್ನೂ ಬೆಚ್ಚಿಬೀಳಿಸುವಂತಿದೆ.
ನೆರವಿಗೆ ಬಂದ ನಾದಿನಿ ಮೇಲೆಯೂ ದಾಳಿ!
ಮಗನ ಅಟ್ಟಹಾಸಕ್ಕೆ ತಾಯಿ ನಾರಾಯಣಮ್ಮ ರಕ್ತಸಿಕ್ತವಾಗಿ ನರಳುತ್ತಿದ್ದರೆ, ಅವರನ್ನು ರಕ್ಷಿಸಲು ಬಂದ ನಾದಿನಿ ಸ್ವಾತಿ ಎಂಬುವವರ ಮೇಲೆಯೂ ಸುಬ್ರಮಣ್ಯಂ ಹಲ್ಲೆ ನಡೆಸಿದ್ದಾನೆ. ಈ ಇಡೀ ಕ್ರೌರ್ಯದ ದೃಶ್ಯಗಳು ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಆಸ್ತಿಗಾಗಿ ಮಗ ಹೆತ್ತ ತಾಯಿಯ ರಕ್ತವನ್ನೇ ಹರಿಸುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸರ್ಕಾರಿ ನೌಕರರಿದ್ದರೂ ತಣಿಯದ ಆಸ್ತಿ ದಾಹ
ನಾರಾಯಣಮ್ಮ ಅವರಿಗೆ ನಾಲ್ವರು ಮಕ್ಕಳಿದ್ದು, ಅವರಲ್ಲಿ ಒಬ್ಬ ಮಗಳು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಸುಬ್ರಮಣ್ಯಂ ಹೊರತುಪಡಿಸಿ ಉಳಿದ ಇಬ್ಬರು ಗಂಡು ಮಕ್ಕಳು ಗೌರವಾನ್ವಿತ ಸರ್ಕಾರಿ ಹುದ್ದೆಯಲ್ಲಿದ್ದಾರೆ. ಒಬ್ಬ ಮಗ ಬೆಸ್ಕಾಂನಲ್ಲಿ ಹಾಗೂ ಮತ್ತೊಬ್ಬ ಮಗ ಸಾರಿಗೆ ಇಲಾಖೆಯಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೂ ಸುಬ್ರಮಣ್ಯಂ ಮಾತ್ರ ಫ್ಲೋರ್ ಮಿಲ್ ಹಾಗೂ ಮನೆ ತನಗೇ ಬೇಕೆಂದು ಪದೇ ಪದೇ ತಾಯಿಗೆ ಕಿರುಕುಳ ನೀಡುತ್ತಾ ಬಂದಿದ್ದಾನೆ.
ಪೊಲೀಸರ ಎಚ್ಚರಿಕೆಗೂ ಕ್ಯಾರೆ ಎನ್ನದ ಪಾಪಿ
ಈ ಆಸ್ತಿ ಕಲಹ ಹೊಸತೇನಲ್ಲ. ಈ ಹಿಂದೆ ಕೂಡ ಸುಬ್ರಮಣ್ಯಂ ತಾಯಿಯ ಮೇಲೆ ಕೈ ಮಾಡಿದ್ದಕ್ಕಾಗಿ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪೊಲೀಸರು ಆತನನ್ನು ಕರೆಸಿ ಹಲವು ಬಾರಿ ವಾರ್ನಿಂಗ್ ನೀಡಿ ಕಳುಹಿಸಿದ್ದರು. ಆದರೆ ಪೊಲೀಸರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸುಬ್ರಹ್ಮಣ್ಯ, ಮತ್ತೆ ತನ್ನ ವಿಕೃತಿಯನ್ನು ಮೆರೆದಿದ್ದಾನೆ.
ಸದ್ಯ ಸದ್ಯ ಹಲ್ಲೆಗೊಳಗಾದ ನಾರಾಯಣಮ್ಮ ಹಾಗೂ ನಾದಿನಿ ಸ್ವಾತಿ ಅವರು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಸಿಸಿಟಿವಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.


