ಕೊಡಗು-ಮೈಸೂರು ಗಡಿಯಲ್ಲಿ ಮಧ್ಯರಾತ್ರಿ ಅನುಮಾನಾಸ್ಪದ ಓಡಾಡುತ್ತಿದ್ದ ಕಾರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದಾರೆ. ಕಾರಿನೊಳಗೆ ಇಬ್ಬರು ಯುವಕರ ನಡುವೆ ಮಹಿಳೆಯೊಬ್ಬರ ಶವ ಪತ್ತೆಯಾಗಿದ್ದು,zಮೂವರು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಇದು ಆತ್ಮ೧ಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಧಾಂಡಿಗರಂತಿರುವ ಆ ಮೂವರು ದಟ್ಟಾರಣ್ಯದ ಕಗ್ಗತ್ತಲ್ಲಲ್ಲಿ ಅದೊಂದೇ ರಸ್ತೆಯಲ್ಲಿ ಪದೇ ಪದೇ ಓಡಾಡುತ್ತಿದ್ದರು. ಆ ಕಾರನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲಿಸಿದ್ರು. ಕಾರಿನೊಳಗೆ ನೋಡಿದ ಅರಣ್ಯ ಇಲಾಖೆ ಸಿಬ್ಬಂದಿಯೇ ಶಾಕ್ ಆಗಿದ್ರು. ಹಾಗಾದರೆ ಕಾರಿನಲ್ಲಿ ಕಂಡಿದ್ದೇನು. ಆ ಮಧ್ಯರಾತ್ರಿ ನಡೆದಿದ್ದೇನು ನೋಡಿ.
ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಭಾಗವಾದ ವಿರಾಜಪೇಟೆ ತಾಲ್ಲೂಕಿನ ಲಿಂಗಾಪುರ ಅರಣ್ಯ ಚೆಕ್ಪೋಸ್ಟಿನಲ್ಲಿ ತಡರಾತ್ರಿ ಹರಿಯಾಣ ರಾಜ್ಯ ನೋಂದಣಿಯ ಕಾರೊಂದು ಪದೇ ಪದೇ ಓಡಾಡುತಿತ್ತು. ಅನುಮಾನಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದ್ದಾರೆ. ಕಾರಿನ ಹಿಂಬದಿಯ ಸೀಟಿನಲ್ಲಿ ಇಬ್ಬರು ಯುವಕರ ಮಧ್ಯದಲ್ಲಿ ಮಹಿಳೆಯೊಬ್ಬರು ಕುಳಿತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸುತ್ತಿದ್ದಂತೆ ಕಾರಿನೊಳಗೆ ಇದ್ದ ಯುವಕರು ಗಲಿಬಿಲಿಗೊಂಡಿದ್ದಾರೆ. ಆದರೆ ಮಧ್ಯದಲ್ಲಿ ಕುಳಿತಿದ್ದ ಮಹಿಳೆ ಮಾತ್ರ ಕಣ್ಣನ್ನು ಮಿಟಕಿಸದೆ, ಸ್ವಲ್ಪವೂ ಅಲುಗಾಡದೆ ಕುಳಿತಿದ್ದಾರೆ. ಇದು ಅರಣ್ಯ ಇಲಾಖೆ ಸಿಬ್ಬಂದಿಗೆ ಅನುಮಾನ ಮೂಡಿಸಿದೆ. ಹೀಗಾಗಿ ಕಾರಿನೊಳಗೆ ಬಗ್ಗಿ ನೋಡಿದ ಅರಣ್ಯ ಇಲಾಖೆ ಸಿಬ್ಬಂದಿ ಮಹಿಳೆಯನ್ನು ಮುಟ್ಟಿದ್ದಾರೆ. ಮಹಿಳೆಯಿಂದ ಶಬ್ಧವೂ ಇಲ್ಲ, ಉಸಿರೂ ಇಲ್ಲ. ಆಗಲೇ ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಕ್ ಆಗಿದೆ.
ಅಲ್ಲಿ ಕುಳಿತಿದ್ದು ಮಹಿಳೆಯಲ್ಲ, ಅದು ಶವ!
ಅಲ್ಲಿ ಕುಳಿತಿದ್ದು ಮಹಿಳೆಯಲ್ಲ, ಅದು ಶವ. ಕೂಡಲೇ ಅಲರ್ಟ್ ಆದ ಅರಣ್ಯ ಇಲಾಖೆ ಸಿಬ್ಬಂದಿ ಕಾರನ್ನು ಅಲ್ಲಿಯೇ ನಿಲ್ಲಿಸಿ ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ರಾತ್ರೋ ರಾತ್ರಿ ಸ್ಥಳಕ್ಕೆ ಬಂದ ಸಿದ್ದಾಪುರ ಠಾಣೆ ಎಸ್ಐ ಮಂಜುನಾಥ್ ಹಾಗೂ ಮಡಿಕೇರಿ ವೃತ್ತ ನಿರೀಕ್ಷಕ ರಾಜು ಮತ್ತು ಸಿಬ್ಬಂದಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗಲೇ ನೋಡಿ ಮೈಸೂರಿನಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ಮೂವರು ಮೈಸೂರಿನ ಮೇಟಗಳ್ಳಿಯ ಕುಂಬಾರ ಕೊಪ್ಪಲಿನಿಂದ ಈ ಶವವನ್ನು ಸಾಗಿಸಿರುವುದು ಗೊತ್ತಾಗಿದೆ. ಅಷ್ಟಕ್ಕೂ ಈ ಮೂವರು ಮಹಿಳೆಯ ಶವವನ್ನು ಸಾಗಿಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ.
ಹರಿಯಾಣದ ಮಹಿಳೆಯ ಶವ:
ಹೀಗೆ ಕಾರಿನಲ್ಲಿ ಕುಳಿತಂತೆ ಶವವಾಗಿರುವ ಈಕೆ ಮೂಲತಃ ಹರಿಯಾಣ ರಾಜ್ಯದವಳು. 44 ವಯಸ್ಸಿನ ಈಕೆಯ ಹೆಸರು ನಾನ್ಕಿದೇವಿ. ಈಗ ಪೊಲೀಸರ ಅತಿಥಿಯಾಗಿರುವ ರಾಕೇಶ್ ಕುಮಾರ್, ಸತ್ಬೀರ್ ಮತ್ತು ವಿಕಾಸ್ ಕುಮಾರ್ ಕೂಡ ಅದೇ ಹರಿಯಾಣದವರೇ. ಕೆಲವು ವರ್ಷಗಳಿಂದ ಮೈಸೂರಿನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ರಾಕೇಶ್ ಕುಮಾರ್ಗೆ ಇನ್ಸ್ಟಾದಲ್ಲಿ ಪರಿಚಯವಾಗಿದ್ದಳು. ಅದು ಪ್ರೇಮಕ್ಕೂ ತಿರುಗಿ ನಂತರ ಹರಿಯಾಣದಿಂದ ತನ್ನ ಕುಟುಂಬವನ್ನು ಬಿಟ್ಟು ಬಂದು ಇವನೊಂದಿಗೆ ಲಿವಿಂಗ್ ಟುಗೆದರ್ ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದಳಂತೆ ನಾನ್ಕಿದೇವಿ. ಕಳೆದ ಒಂದು ವರ್ಷದಿಂದ ರಾಕೇಶ್ ಕುಮಾರ್ ನೊಂದಿಗೆ ಇದ್ದಳಂತೆ. ಆದರೆ ಅದೇನಾಯಿತೋ, ಏನೋ. ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಳಂತೆ. ಇದು ಗೊತ್ತಾಗಿ ರಾಕೇಶ್ ಕುಮಾರ್ ತನ್ನ ಇಬ್ಬರು ಸ್ನೇಹಿತರಾದ ಸತ್ಬೀರ್ ಹಾಗೂ ವಿಕಾಸ್ ನೊಂದಿಗೆ ಸೇರಿ ಕಾರಿನಲ್ಲಿ ಮೃತದೇಹ ಸಾಗಿಸಿದ್ದಾರೆ.
ಕೊಡಗಿನ ಯಾವುದಾದರೂ ಭಾಗಕ್ಕೆ ಮೃತದೇಹವನ್ನು ಎಸೆದು ಹೋಗಲು ಬಂದಿದ್ದರೋ ಏನೋ. ಇವರ ಅದೃಷ್ಟ ಕೈಕೊಟ್ಟಿತ್ತೋ ಏನೋ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಿಬ್ಬಂದಿಗೆ ತಗಲಾಕಿಕೊಂಡಿದ್ದಾರೆ. ಹೀಗೆ ನಿನ್ನೆ ರಾತ್ರಿ ನಾನ್ಕಿದೇವಿಯ ಶವವನ್ನು ಸಾಗಿಸುತ್ತಿದ್ದ ಮೂವರು ಈಗ ಪೊಲೀಸರು ಅತಿಥಿಗಳಾಗಿದ್ದಾರೆ. ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಕೊಡಗಿನ ಪೊಲೀಸರು ಸ್ಥಳ ಮಹಜರು ಮಾಡಿ ಮೃತದೇಹವನ್ನು ಮೈಸೂರು ಕೆ.ಆರ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರೆ, ಈ ಮೂವರನ್ನು ಮೈಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ನಿಜವಾಗಿಯೂ ಆಕೆ ಆತ್ಮಹತ್ಯೆ ಮಾಡಿಕೊಂಡ್ಲಾ, ಇಲ್ಲ ಇವರೇ ಏನಾದರೂ ಮಾಡಿ ಶವವನ್ನು ಎಲ್ಲಾದರೂ ಎಸೆದು ಹೋಗುವುದಕ್ಕೆ ಬಂದ್ರಾ ಎನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಾಗಿದೆ.


