ಎನ್‌. ಲಕ್ಷ್ಮಣ್‌

ಬೆಂಗಳೂರು(ಸೆ.12): ಐಷಾರಾಮಿ ಪಾರ್ಟಿಗಳ ಆಯೋಜನೆಯ ದೆಹಲಿ ಮೂಲದ ಡ್ರಗ್ಸ್‌ ಕಿಂಗ್‌ಪಿನ್‌ ವೀರೇನ್‌ ಖನ್ನಾ ತನ್ನ ಪಾರ್ಟಿ ರಂಗೇರಿಸಲು ಯುವ ಸಮುದಾಯವನ್ನು ಆಕರ್ಷಿಸಲು ಉಚಿತ ಪ್ರವೇಶ, ಮದ್ಯ ಹಾಗೂ ಮತ್ತಿತ್ತರ ವ್ಯವಸ್ಥೆಯಂತಹ ಆಫರ್‌ ನೀಡುತ್ತಿದ್ದ!

"

ಹೌದು, ವೀರೇನ್‌ ಖನ್ನಾ ತನ್ನ ಪಾರ್ಟಿಗೆ ಯುವಜನರನ್ನು ಆಕರ್ಷಿಸಿ, ನಂತರ ಅವರನ್ನು ದುಶ್ಚಟಗಳಿಗೆ ದೂಡುವ ಕೃತ್ಯಕ್ಕೆ ಕೈಹಾಕಿದ್ದ ಎಂಬುದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆ ವೇಳೆ ಬೆಳಕಿಗೆ ಬಂದಿದೆ. ಪೇಜ್‌-ತ್ರಿ ಪಾರ್ಟಿಯಲ್ಲಿ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಆರೋಪಿ ಹೈಟೆಕ್‌ ವೇಶ್ಯಾವಾಟಿಕೆ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿದ ಸಿಸಿಬಿ ತನಿಖಾ ತಂಡ ಈತನ ಒಂದೊಂದೇ ರಹಸ್ಯ ಬಯಲಿಗೆ ಎಳೆಯುತ್ತಿದೆ. ಪಾರ್ಟಿ ಯಶಸ್ವಿಗೊಳಿಸಲು ಆರೋಪಿ ಹೆಣೆಯುತ್ತಿದ್ದ ತಂತ್ರಕ್ಕೆ ಸಿಸಿಬಿ ತನಿಖಾಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೀರೇನ್‌ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಯುವಕ-ಯುವತಿಯರಿಗೆ ಮೊದಲ ಬಾರಿ ಉಚಿತ ಪ್ರವೇಶ, ಉಚಿತ ಆಹಾರ ಹಾಗೂ ಮದ್ಯದ ಸರಬರಾಜು ಮಾಡಲಾಗುತ್ತಿತ್ತು. ಆಗಲೇ ಡ್ರಗ್ಸ್‌ನ ರುಚಿಯನ್ನೂ ತೋರಿಸಲಾಗುತ್ತಿತ್ತು. ಅಂತಹ ಯುವಕ-ಯುವತಿಯರು ನಂತರದ ದಿನಗಳಲ್ಲಿ ಹಣ ಕೊಟ್ಟು ನಶೆಗಾಗಿ ಪಾರ್ಟಿಗೆ ಬರುತ್ತಿದ್ದರು. ತಾನು ದೂರದಲ್ಲಿದ್ದುಕೊಂಡೇ ತನ್ನ ಸಹಚರರ ಮೂಲಕ ವೀರೇನ್‌ ಪಾರ್ಟಿ ಆಯೋಜಿಸುತ್ತಿದ್ದ ಎಂದು ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸನ್ನಿ, ಅನುಷ್ಕಾ, ಯುವರಾಜ್ ಎಲ್ಲರ  ಜತೆ 'ಟಚ್‌'ನಲ್ಲಿದ್ದ ಮೆಕ್ಯಾನಿಕ್ ಫಾಜಿಲ್!

ಹುಡುಗಿ ಜತೆ ಬಂದ್ರೆ ಮಾತ್ರ ಪ್ರವೇಶ:

ರೆಸಾರ್ಟ್‌, ಪಂಚತಾರಾ ಹೋಟೆಲ್‌, ಪಬ್‌, ಕ್ಲಬ್‌ ಸೇರಿದಂತೆ ಇತರೆಡೆ ಚಿತ್ರರಂಗದ ಸೆಲೆಬ್ರೆಟಿಗಳು, ಉದ್ಯಮಿ, ರಾಜಕಾರಣಿಗಳಿಗಾಗಿ ವೀರೇನ್‌ ಖನ್ನಾ ಐಷಾರಾಮಿ ಪೇಜ್‌-ತ್ರಿ ಪಾರ್ಟಿ ಆಯೋಜಿಸುತ್ತಿದ್ದ. ಉದಾಹರಣೆಗೆ ಪಾರ್ಟಿ ರಾತ್ರಿ ಎಂಟು ಗಂಟೆ ಸುಮಾರಿಗೆ ಪ್ರಾರಂಭವಾಗುತ್ತದೆ ಎಂದಾದರೆ, ಒಂದು ಗಂಟೆ ಮುಂಚಿತವಾಗಿ ಯುವಕ-ಯುವತಿಯರಿಗೆ ಐಷಾರಾಮಿ ಪಾರ್ಟಿಗೆ ಆಹ್ವಾನ ಹೋಗುತ್ತಿತ್ತು. ಅಲ್ಲದೆ, ಯುವಕರು ಪಾರ್ಟಿಗೆ ಯುವತಿಯರೊಂದಿಗೆ ಬಂದರೆ ಮಾತ್ರ ಉಚಿತ ಪ್ರವೇಶ ಇರುತ್ತಿತ್ತು. ಒಂದು ವೇಳೆ ಯುವಕನೊಬ್ಬನೇ ಪಾರ್ಟಿಗೆ ಬಂದರೆ ಪಾರ್ಟಿಗೆ ಪ್ರವೇಶ ಇರುತ್ತಿರಲಿಲ್ಲ. ಆದರೆ ಯುವತಿಯರು ಏಕಾಂಗಿಯಾಗಿ ಪಾರ್ಟಿಗೆ ಬಂದರೆ ಅವರಿಗೆ ಪ್ರವೇಶ ನೀಡಲಾಗುತ್ತಿತ್ತು. ಈ ಮೂಲಕ ಪಾರ್ಟಿಯ ಬೇಡಿಕೆ ಹೆಚ್ಚುವಂತೆ ನೋಡಿಕೊಂಡಿದ್ದ.

ಉದ್ಯಮಿ, ಪ್ರಭಾವಿಗಳು ಈತನ ಬಲೆಗೆ:

ಪಾರ್ಟಿಗೆ ಬರುತ್ತಿದ್ದ ಶ್ರೀಮಂತ ಹುಡುಗ-ಹುಡುಗಿಯರು ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಇತ್ತ ಯುವಕರಿಂದ ಪಾರ್ಟಿಗೆ ರಂಗೇರುತ್ತಿದ್ದಂತೆ ಉದ್ಯಮಿಗಳು, ಸೆಲೆಬ್ರೆಟಿಗಳ ಪ್ರವೇಶವಾಗುತ್ತಿತ್ತು. ಪಾರ್ಟಿಗಳು ಆಕರ್ಷಕವಾಗಿರುವಂತೆ ಅವನು ನೋಡಿಕೊಳ್ಳುತ್ತಿದ್ದ. ಹೀಗೆ ವೀರೇನ್‌ ಪೇಜ್‌-ತ್ರಿ ಪಾರ್ಟಿಯ ಮಾರುಕಟ್ಟೆಯನ್ನು ವಿಸ್ತರಿಸಿದ್ದ ಎಂದು ಸಿಸಿಬಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಅಲ್ಲದೆ, ತನ್ನ ಪಾರ್ಟಿಯಲ್ಲಿ ವಿಶೇಷವಾಗಿ ವಿದೇಶಿ ಹುಡುಗಿಯರು ಇರುವಂತೆ ಆರೋಪಿ ನೋಡಿಕೊಳ್ಳುತ್ತಿದ್ದ. ತುಂಡು ಬಟ್ಟೆತೊಟ್ಟು ವಿದೇಶಿ ಹುಡುಗಿಯರು ಡಿ.ಜೆ.ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರು. ಇದರೊಂದಿಗೆ ಯುವಕ-ಯುವತಿಯರು ಪಾರ್ಟಿಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಒಮ್ಮೆ ಐಷಾರಾಮಿ ಹೋಟೆಲ್‌ಗಳಲ್ಲಿ ಪಾರ್ಟಿ ಇದ್ದರೆ, ಇನ್ನೊಮ್ಮೆ ತೆರೆದ ಸ್ಥಳದಲ್ಲಿ ಈಜುಕೊಳ ಇರುವಂತಹ ಸ್ಥಳದಲ್ಲಿ ಆಯೋಜನೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ತನ್ನ ಪಾರ್ಟಿಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪ್ರಚಾರ ಮಾಡಿ ಯುವಕ-ಯುವತಿಯರನ್ನು ವೀರೇನ್‌ ಸೆಳೆಯುತ್ತಿದ್ದ. ಈತನ ಪಾರ್ಟಿಗಳಿಗೆ ರೆಗ್ಯುಲರ್‌ ಆಗಿ ಬರುವವರಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂಗಳಲ್ಲಿ ಗ್ರೂಪ್‌ಗಳನ್ನು ಮಾಡಿದ್ದ. ಅಲ್ಲೇ ಪಾರ್ಟಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಪಾರ್ಟಿಗಳಿಗೆ ಬರುವವರ ಮೊಬೈಲ್‌ ಸಂಖ್ಯೆ ಪಡೆದು ಮುಂದಿನ ಪಾರ್ಟಿಗಳಿಗೆ ಆಯೋಜಿಸುತ್ತಿದ್ದ ಎಂದು ಮೂಲಗಳು ಹೇಳಿವೆ.

ಅಣ್ಣನಿಂದ ಬಾಲಿವುಡ್‌ನಲ್ಲಿ ಪಾರ್ಟಿ

ವೀರೇನ್‌ ಖನ್ನಾ ಮಾತ್ರವಲ್ಲ, ಈತನ ಸಹೋದರ ರಾಜ್‌ ಖನ್ನಾ ಕೂಡ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಸಿಸಿಬಿ ತಂಡ ಶಂಕೆ ವ್ಯಕ್ತಪಡಿಸಿದೆ. ಇಬ್ಬರೂ ಮೊದಲಿಗೆ ಬೆಂಗಳೂರಿನಲ್ಲಿ ಒಟ್ಟಿಗೇ ಪಾರ್ಟಿ ಆಯೋಜಿಸುತ್ತಿದ್ದರು. ನಂತರ ರಾಜ್‌ ಖನ್ನಾ ಆಸ್ಪ್ರೇಲಿಯಾಕ್ಕೆ ಹೋಗಿ ನೆಲೆಸಿದ್ದಾನೆ. ಅಲ್ಲಿ ಹಾಗೂ ಬೇರೆ ಬೇರೆ ದೇಶಗಳಲ್ಲಿ ಎನ್‌ಆರ್‌ಗಳು ಮತ್ತು ಬಾಲಿವುಡ್‌ ನಟರಿಗೆ ಪಾರ್ಟಿ ಆಯೋಜಿಸುತ್ತಾನೆ. ಅಲ್ಲೂ ಡ್ರಗ್ಸ್‌ ದಂಧೆ ನಡೆಸುತ್ತಿರುವ ಶಂಕೆಯಿದೆ ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ವೀರನ್‌ ಖನ್ನಾ ಬಂಟ ಸಿಸಿಬಿ ಬಲೆಗೆ

"