ತ್ರಿಶೂರ್‌ನ ವಲಪಾಡ್‌ನಲ್ಲಿ ಜಿಮ್ ಮತ್ತು ಬ್ಯೂಟಿ ಸಲೂನ್ ಹೆಸರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಶ್ರೀಲಕ್ಷ್ಮಿ ಎಂಬ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಬಳಿಯಿಂದ 2.270 ಕಿಲೋಗ್ರಾಂ ಹ್ಯಾಶಿಶ್ ಆಯಿಲ್, ನಗದು ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ಖಾಲಿ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. 

ತ್ರಿಶೂರ್: ತ್ರಿಪ್ರಯಾರ್‌ನ ವಲಪಾಡ್‌ನಲ್ಲಿರುವ ಜಿಮ್ ಮತ್ತು ಬ್ಯೂಟಿ ಸಲೂನ್ ಹೆಸರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಯುವತಿಯನ್ನು ತ್ರಿಶೂರ್ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಪೆರಿಂಗೊಟ್ಟುಕರ ತಾನ್ನಿಯಂ ನಿವಾಸಿ, 30 ವರ್ಷದ ಶ್ರೀಲಕ್ಷ್ಮಿ ಬಂಧಿತ ಯುವತಿ. ಈಕೆ ತ್ರಿಪ್ರಯಾರ್‌ನ ಜಿಮ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು.

ಆಕೆಯ ಬಳಿಯಿಂದ ಪೊಲೀಸರು 2.270 ಕಿಲೋಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಡ್ರಗ್ಸ್ ಮಾರಾಟ ಮಾಡಿ ಅಕ್ರಮವಾಗಿ ಸಂಪಾದಿಸಿದ್ದ ₹90,500 ನಗದು ಹಾಗೂ ಹ್ಯಾಶಿಶ್ ಆಯಿಲ್ ಅನ್ನು ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡಲು ಬಳಸುತ್ತಿದ್ದ 50 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನೂ ಜಪ್ತಿ ಮಾಡಿದ್ದಾರೆ. ಕರಯಾಮುಟ್ಟಂ ಸೊಸೈಟಿ ಬಳಿಯ ಬಾಡಿಗೆ ಮನೆಯಲ್ಲಿ ತ್ರಿಶೂರ್ ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಸ್ಥರ ನೇತೃತ್ವದ ಡಾನ್‌ಸಾಫ್ ತಂಡ ಮತ್ತು ವಲಪಾಡ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಶ್ರೀಲಕ್ಷ್ಮಿ ಸಿಕ್ಕಿಬಿದ್ದಿದ್ದು ಹೇಗೆ?

ಕರಾವಳಿ ಭಾಗದ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿ. ಕೃಷ್ಣಕುಮಾರ್ ಐಪಿಎಸ್‌ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ, ಶಾಲೆಗಳನ್ನು ಕೇಂದ್ರವಾಗಿಟ್ಟುಕೊಂಡು ಡ್ರಗ್ಸ್ ಬಳಸುವ ಮಕ್ಕಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು. ಈ ತನಿಖೆಯಲ್ಲೇ ಡ್ರಗ್ಸ್ ಜಾಲದ ಮೂಲ ಪತ್ತೆಯಾಗಿದೆ. ಪೊಲೀಸ್ ಮತ್ತು ಅಬಕಾರಿ ಇಲಾಖೆಯ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಶ್ರೀಲಕ್ಷ್ಮಿ ತುಂಬಾನೇ ಜಾಗರೂಕಳಾಗಿದ್ದಳು. ತನ್ನ ನಂಬಿಕಸ್ಥ ಗ್ರಾಹಕರಿಗೆ ಮಾತ್ರವೇ ಆಕೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಳು. ಈ ಯುವತಿಗೆ ಡ್ರಗ್ಸ್ ಪೂರೈಸುತ್ತಿದ್ದ ವ್ಯಕ್ತಿಯ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ತ್ರಿಶೂರ್ ಗ್ರಾಮಾಂತರ ಜಿಲ್ಲಾ ಪೊಲೀಸ್ ಮುಖ್ಯಸ್ಥ ಬಿ. ಕೃಷ್ಣಕುಮಾರ್ ಐಪಿಎಸ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ನಾರ್ಕೋಟಿಕ್ ಸೆಲ್ ಡಿವೈಎಸ್‌ಪಿ ಅಬ್ದುಲ್ ಸಲಾಂ, ವಾಡಾನಪ್ಪಳ್ಳಿ ಐಎಸ್‌ಎಚ್‌ಒ ಮ್ಯಾಥ್ಯೂ, ವಲಪಾಡ್ ಎಸ್‌ಐ ಎಬಿನ್, ಡಾನ್‌ಸಾಫ್ ಎಸ್‌ಐಗಳಾದ ಸಿ.ಆರ್. ಪ್ರದೀಪ್, ಶೈನ್, ಎಎಸ್‌ಐ ಲಿಜು ಇಯ್ಯಾನಿ, ಎಸ್‌ಸಿಪಿಒ ಬಿಜು, ಸಿಪಿಒಗಳಾದ ನಿಶಾಂತ್, ಸುರ್ಜಿತ್ ಸಾಗರ್, ವಲಪಾಡ್ ಠಾಣೆಯ ಎಸ್‌ಐ ಉಣ್ಣಿ, ಸಿಯಾದ್, ಸೈನುದ್ದೀನ್ ಮತ್ತು ಸಿಪಿಒ ಶಾಲೀನಾ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸಿದೆ. ಈ ಬಗ್ಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಲಪಾಡ್ ಪೊಲೀಸರು ತಿಳಿಸಿದ್ದಾರೆ.