ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ 15 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯುವಕನ ತಾಯಿ ಹಾಗೂ ಬುಲೆಟ್ ಸವಾರರಾದ ಮೆಡಿಕಲ್ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರವಾರ ಉತ್ತರಕನ್ನಡ (ನ.13): ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಆರ್‌ಟಿಒ ಕಚೇರಿ ಬಳಿ ನಡೆದಿದೆ.
ತಲೆಗೆ ಗಂಭೀರ ಪೆಟ್ಟು, ಸ್ಥಳದಲ್ಲೇ ಯುವಕ ಸಾವು:
ಚಿರಂಜೀವಿ ಬ್ರಹ್ಮಾನಂದ ಕುಂಜಿ(15) ಮೃತ ದುರ್ದೈವಿ. ಮೂಲತಃ ಯಲ್ಲಾಪುರ ತಾಲೂಕಿನ ಇಡಗುಂದಿ ನಿವಾಸಿಗಳು. ತನ್ನ ತಾಯಿಯೊಂದಿಗೆ ಮಾಜಾಳಿಯ ಮನೆಯೊಂದರಲ್ಲಿ ಬಾಡಿಗೆಗಿದ್ದರು. ಇಂದು ಕಾರವಾರಕ್ಕೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಆರ್‌ಟಿಒ ಕಚೇರಿ ಬಳಿ ಹಿಂದಿನಿಂದ ಬಂದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್ ಬೈಕ್ ರಭಸವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಿರಂಜೀವ ತಲೆ ರಸ್ತೆಗೆ ಬಡಿದದ್ದರಿಂದ ತೀವ್ರ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.
ಸ್ಥಳೀಯ ಪ್ರಯಾಣಿಕರಿಂದ ಪೊಲೀಸರಿಗೆ ಮಾಹಿತಿ:
ಘಟನೆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಳಿಕ ಆಂಬುಲೆನ್ಸ್ ಮೂಲಕ ಚಿರಂಜೀವಿ ಮೃತದೇಹ ಹಾಗೂ ಗಾಯಗೊಂಡ ತಾಯಿ, ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೃತನ ತಾಯಿ ಹಾಗೂ ವಿದ್ಯಾರ್ಥಿಗಳನ್ನು ಗೋವಾದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
