ಕೆನಡಾದಲ್ಲಿ ಲೈಬ್ರರಿ ಬಾಯ್ ಕೆಲಸ ಕೊಡಿಸುವುದಾಗಿ ನಂಬಿಸಿ 3 ಲಕ್ಷ ರೂ. ಪಡೆದು ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ (ಜುಲೈ.23): ಕೆನಡಾದಲ್ಲಿ ಲೈಬ್ರೆರಿ ಬಾಯ್ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಬರೋಬ್ಬರಿ 3 ಲಕ್ಷ ರೂ. ಹಣ ಪಡೆದು ಯಾವುದೇ ಉದ್ಯೋಗ ಒದಗಿಸದೇ ಪಂಗನಾಮ ಹಾಕಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮಾವಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾವಳ್ಳಿ ಗ್ರಾಮದ ಅಂಥೋನಿ ಬಸ್ತಾಂವ ಲುವಿಸ್ (54) ವಂಚಿಸಿರುವ ಆರೋಪಿ. ಕಲಘಟಗಿ ತಾಲೂಕಿನ ತಂಬೂರ ಗ್ರಾಮದ ನಿವಾಸಿ ದರ್ಶನ್, ವಂಚನೆಗೊಳಗಾದವರು.
ಘಟನೆ ವಿವರ:
2024ರ ನವೆಂಬರ್ 22ರಂದು ಆರೋಪಿ ಅಂಥೋನಿ, ದರ್ಶನ್‌ನನ್ನು ಸಂಪರ್ಕಿಸಿ ಕೆನಡಾದಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿದ್ದ. ಬಳಿಕ, ಫೋನ್‌ಪೇ ಮೂಲಕ ಹಂತಹಂತವಾಗಿ 3,00,000 ರೂಪಾಯಿ ಸ್ವೀಕರಿಸಿದ್ದಾನೆ. ಆದರೆ, ಭರವಸೆ ನೀಡಿದಂತೆ ಯಾವುದೇ ಉದ್ಯೋಗ ಒದಗಿಸದೇ ವಂಚನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ವಿರುದ್ಧ ಎಫ್‌ಐಆರ್:
ಪ್ರಕರಣ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದ್ದರಿಂದ, ಕಲಘಟಗಿ ಪೊಲೀಸ್ ಠಾಣೆಯಲ್ಲಿ ಜೀರೋ ಎಫ್‌ಐಆರ್ ದಾಖಲಿಸಲಾಗಿದೆ. ಉತ್ತರ ಕನ್ನಡ ಜಿಲ್ಲಾ ಎಸ್‌ಪಿಯ ಸೂಚನೆಯಂತೆ, ಪ್ರಕರಣವನ್ನು ಮುಂದಿನ ಕ್ರಮಕ್ಕಾಗಿ ಮುರ್ಡೇಶ್ವರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.ಆರೋಪಿ ಅಂಥೋನಿ ಬಸ್ತಾಂವ ಲುವಿಸ್, ದಾಂಡೇಲಿ, ಮುರ್ಡೇಶ್ವರ ಸೇರಿದಂತೆ ಇತರೆಡೆಯೂ ಹಲವರಿಗೆ ನಕಲಿ ಉದ್ಯೋಗದ ಆಮಿಷವೊಡ್ಡಿ ವಂಚಿಸಿರುವ ಶಂಕೆಯಿದೆ. ಪ್ರಸ್ತುತ ತಲೆಮರೆಸಿಕೊಂಡಿರುವ ಆರೋಪಿಯನ್ನು ಹುಡುಕಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
