ಎರಡನೇ ಪತ್ನಿಯ ಮಗುವನ್ನು ಕೊಂದು ತೋಟದಲ್ಲಿ ಹೂತಿಟ್ಟಿದ್ದ ವ್ಯಕ್ತಿಯ ಕ್ರೌರ್ಯ, ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮತ್ತೊಂದು ಬಾಲಕಿಯಿಂದ ಬಯಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಜುಲೈ.23): ಆತ ತಿಂಗಳ ಹಿಂದೆ ತನ್ನ ಎರಡನೇ ಪತ್ನಿಯ ಮಗುವನ್ನು ಬರ್ಭರವಾಗಿ ಹತ್ಯೆ ಮಾಡಿ ತೋಟದೊಳಗೆ ಹೂತು ಹಾಕಿದ್ದ. ಇದಾದ ಒಂದೇ ತಿಂಗಳಿಗೆ ತೀವ್ರ ಸುಟ್ಟ ಗಾಯಗಳಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಬಾಲಕಿ ತನ್ನ ತಂದೆಯ ಕ್ರೌರ್ಯವನ್ನು ಪೊಲೀಸರಿಗೆ ಬಿಚ್ಚಿಟ್ಟಿದ್ದಳು. ಹಾಗಾದರೆ ಹೆತ್ತ ಮಗುವನ್ನೇ ಕೊಂದಿದ್ದೇಕೆ ಪಾಪಿ ತಂದೆ. ತಂದೆಯ ಕೌರ್ಯಕ್ರವನ್ನು ಬಾಲಕಿ ಪೊಲೀಸರಿಗೆ ಬಿಚ್ಚಿಟ್ಟ ಸತ್ಯವೇನು. ಕೇಳಿದ್ರೆ ನೀವು ಭಯಗೊಳ್ತೀರಾ.

ಅಂದು ಜುಲೈ 11 ಮಧ್ಯಾಹ್ನದ ಸಮಯದಲ್ಲೇ ಮಡಿಕೇರಿ ತಾಲ್ಲೂಕಿನ ಬಿಳಿಗೆರೆಯ ತೋಟದ ಸಮೀಪದ ರಸ್ತೆ ಬದಿಯಲ್ಲಿ ಐದು ವರ್ಷದ ಪುಟ್ಟ ಬಾಲಕಿಯೊಬ್ಬಳು ಗಂಭೀರವಾಗಿ ಸುಟ್ಟ ಗಾಯಗಳಿಂದ ಅಳುತ್ತಾ ನಿಂತಿದ್ದಳು. ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿದ್ದ ಸ್ಥಳೀಯರು ಬಾಲಕಿ ನಿಂತಿರುವ ಬಗ್ಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರು ಬಾಲಕಿಯನ್ನು ನೋಡಿ ಯಾರದ್ದೆಂದು ತಿಳಿಯದೆ ಕರೆದೊಯ್ದು ಕೊಡಗು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಮೂರ್ನಾಲ್ಕು ದಿನಗಳು ಕಳೆದು ಮಗು ಚೇತರಿಸಿಕೊಂಡ ಬಳಿಕ ಮಡಿಕೇರಿಯ ಮಹಿಳಾ ಪೊಲೀಸ್ ಸಿಬ್ಬಂದಿ ಮಗುವನ್ನು ಮುದ್ದಿಸಿ, ನಿನ್ನ ಮೇಲೆ ಈ ರೀತಿ ಹಲ್ಲೆ ಮಾಡಿದವರು ಯಾರು ಎಂದು ವಿಚಾರಿಸಿದ್ದರು.

ಆಗಲೇ ನೋಡಿ ಪಾಪಿ ತಂದೆಯ ಭಯಾನಕೃತ್ಯ ಬಯಲಾಗಿತ್ತು. ಮೂಲತಃ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯವನಾದ ರವಿ, ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ರಗುಪ್ಪೆ ಗ್ರಾಮದ ನಿವಾಸಿಯಾದ ಸೋಮಯ್ಯ ಅವರ ಲೈನುಮನೆಯಲಿ ವಾಸವಿದ್ದ. ಇದೇ ವೇಳೆ ಭಾಗ್ಯ ಎಂಬ ಮಹಿಳೆಯೊಂದಿಗೆ ಎರಡನೇ ಸಂಬಂಧ ಬೆಳಸಿಕೊಂಡು ಅಲ್ಲಿಂದ ಮಂಚಳ್ಳಿ ಗ್ರಾಮ ಲೈನ್ ಮನೆಯಲ್ಲಿ ಭಾಗ್ಯಳೊಂದಿಗೆ ಜೀವನ ಶುರು ಮಾಡಿದ್ದ. ಲೈನುಮನೆಯಲ್ಲಿ ವಾಸವಿದ್ದಾಗ ಭಾಗ್ಯ ಅವರ ಮೊದಲನೇ ಗಂಡನ ಹೆಣ್ಣು ಮಗು ಗೌರಿಯನ್ನು ಸುಮಾರು ಒಂದು ತಿಂಗಳ ಹಿಂದೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ತೋಟವೊಂದರಲ್ಲಿ ಹೂತು ಹಾಕಿದ್ದ.

ತನ್ನ ಎರಡನೇ ಹೆಂಡತಿ ಭಾಗ್ಯಳಿಗೂ ಚಿತ್ರ ಹಿಂಸೆ ಕೊಡುತ್ತಿದ್ದ. ಹೀಗಾಗಿ ಭಾಗ್ಯ ಇವನ ಸಹವಾಸವೇ ಬೇಡ ಎಂದು ಅಲ್ಲಿಂದ ಹೊರಟು ಹೋಗಿದ್ದಳು. ಈ ಎಲ್ಲಾ ಸತ್ಯ ಈಗ ಬಯಲಾಗಿದೆ ಎನ್ನುತ್ತಾರೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್. ಮಂಚಳ್ಳಿಯ ಸೋಮಯ್ಯ ಅವರ ಲೈನ್ ಮನೆ ಬಿಟ್ಟು ಬಿಳಿಗೆರೆ ಕಡೆಗೆ ಬಂದಿದ್ದ ಪಾಪಿ ರವಿ ಇಲ್ಲಿಯೂ ಸುಮ್ಮನಿರಲಿಲ್ಲ. ಇಲ್ಲಿಯೂ ತೋಟವೊಂದರಲ್ಲಿ ಕೆಲಸ ಮಾಡುತ್ತಾ ಲೈನ್ ಮನೆಯಲ್ಲಿ ಇದ್ದವನು ತನ್ನ ಮೊದಲನೇ ಹೆಂಡತಿಯ ಮಗುವಿಗೂ ಮನಸ್ಸೋ ಇಚ್ಛೆ ಥಳಿಸಿದ್ದ. ಮುಖ, ಮೈ, ಕೈ ಕಾಲುಗಳಿಗೆ ಬೀಡಿ ಸಿಗರೇಟಿನ ಬೆಂಕಿಯಿಂದ ಮನಸ್ಸೋ ಇಚ್ಛೆ ಸುಟ್ಟಿದ್ದ. ಕೊನೆಗೆ ದೊಣ್ಣೆಯಿಂದಲೂ ಬಡಿದು ನಿನ್ನನ್ನು ಸಾಯಿಸುತ್ತೇನೆ ಎಂದು ತುಂಬಿ ಹರಿಯುವ ಹಳ್ಳವೊಂದಕ್ಕೆ ಎಸೆದು ಹೋಗಿದ್ದ. ಆ ಮಗುವಿನ ಯಾತನೆಯನ್ನು ಆ ದೇವರೇ ಗಮನಿಸಿದ್ದನೋ ಏನೋ, ತುಂಬಿ ಹರಿಯುವ ಹಳ್ಳದಿಂದಲೂ ಮಗು ಬದುಕಿ ಬಂದಿತ್ತು. ಹೀಗೆ ರಸ್ತೆಗೆ ಬಂದು ಅಳುತ್ತಾ ನಿಂತಿರುವಾಗಲೇ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಹೀಗಾಗಿ ಪೊಲೀಸರಿಗೆ ದೊರೆತ್ತಿದ್ದ ಆ ಪುಟ್ಟ ಬಾಲಕಿ ತನ್ನ ತಂದೆ ಮಾಡಿದ ಎಲ್ಲಾ ಕೌರ್ಯ, ತನ್ನ ಮೇಲೆ ನಡೆಸಿದ ಅಮಾನವೀಯ ಹಲ್ಲೆಯನ್ನು ಹೇಳಿದಳು. ವಿಷಯ ತಿಳಿದ ಪೊಲೀಸರು ಪಾಪಿ ರವಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಒಟ್ಟಿನಲ್ಲಿ ಪಾಪಿಯ ಪಾಪದ ಕೊಡ ತುಂಬಿದ್ದರಿಂದಲೋ ಏನೋ ಒಂದು ಮಗುವನ್ನು ಹತ್ಯೆ ಮಾಡಿ ಏನೂ ಗೊತ್ತಿಲ್ಲದಂತೆ ಇದ್ದವನು ಎರಡನೇ ಮಗುವನ್ನು ಹತ್ಯೆ ಮಾಡಲು ಯತ್ನಿಸಿ ಪೊಲೀಸರ ಅಥಿತಿಯಾಗಿದ್ದಾನೆ. ಸದ್ಯ ಮಗುವನ್ನು ರಕ್ಷಿಸಿರುವ ಪೊಲೀಸರು ಮಡಿಕೇರಿಯ ಸರ್ಕಾರಿ ಮಡಿಲು ಕೇಂದ್ರದಕ್ಕೆ ಸೇರಿಸಿದ್ದಾರೆ. ಇಂತಹ ಪಾಪಿಗಳಿಗೆ ಅದ್ಯಾವ ಶಿಕ್ಷೆ ಕಡಿಮೆಯೇ.