PSI Recruitment Scam: ಅಕ್ರಮ ನೇಮಕಾತಿ ಪ್ರಕರಣ, ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನ
ADGP Amrit Paul Arrested: ಅಕ್ರಮ ಸಬ್ ಇನ್ಸ್‌ಪೆಕ್ಟರ್ ನೇಮಕ ಹಗರಣ ಸಂಬಂಧ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್‌ರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈ ಮೂಲಕ ಕರ್ನಾಟಕದ ಇತಿಹಾಸದಲ್ಲೇ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರು ಹಗರಣ ಸಂಬಂಧ ಬಂಧನಕ್ಕೊಳಗಾದಂತಾಗಿದೆ. ಎಸ್‌ಐ ನೇಮಕಾತಿ ಸಂಬಂಧ ಆಗಿರುವ ಬಂಧನಗಳಲ್ಲೇ ಇದು ದೊಡ್ಡ ಹುದ್ದೆಯ ಅಧಿಕಾರಿಯ ಬಂಧನವಾಗಿದೆ.
ವರದಿ: ರಮೇಶ್ ಕೆ.ಎಚ್, ಏಷ್ಯಾನೆಟ್ ಸುವರ್ಣ ನ್ಯೂಸ್
PSI Recruitment Scam Big Update: ಹಿರಿಯ ಐಪಿಎಸ್ ಅಧಿಕಾರಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್‌ರನ್ನು (Senior IPS officer ADGP Amrit Paul) ಸಿಐಡಿ ತಂಡ ಬಂಧನಕ್ಕೊಳಪಡಿಸಿದೆ. ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ನಡೆದ ಅಕ್ರಮ ಸಂಬಂಧ ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಅಕ್ರಮ ಹಗರಣವನ್ನು ಬಯಲಿಗೆಳೆದಿತ್ತು. ಈ ಹಗರಣದಲ್ಲಿ ಭಾಗಿಯಾಗಿದ್ದ ಆರೋಪ ಹೊತ್ತಿದ್ದ ಅಮೃತ್ ಪೌಲ್ ಬಂಧನಕ್ಕೊಳಗಾಗಿದ್ದಾರೆ. ಈ ಬಗ್ಗೆ ಏಷ್ಯಾನೆಟ್‌ಗೆ ಸಿಐಡಿ ಮೂಲಗಳು ಮಾಹಿತಿ ನೀಡಿದ್ದು, ಬಂಧನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.
ಅಮೃತ್ ಪೌಲ್ 1995 ಇಸವಿಯ ಐಪಿಎಸ್ ಅಧಿಕಾರಿ. ಪಂಜಾಬ್ ಮೂಲದವರಾಗಿದ್ದು, ಎಸ್‌ಐ ಹಗರಣ ಆಚೆ ಬಂದ ನಂತರ ಅವರಿಗೆ ಯಾವುದೇ ಹುದ್ದೇ ನೀಡದೇ ವರ್ಗಾವಣೆ ಮಾಡಲಾಗಿತ್ತು. ಇದೀಗ ಸಿಐಡಿ ತನಿಖಾ ತಂಡಕ್ಕೆ ಪ್ರಕರಣದ ವಿಚಾರಣೆಯಲ್ಲಿ ಅಮೃತ್ ಪೌಲ್ ವಿರುದ್ಧ ಸಾಕ್ಷಿ ದೊರಕಿದ್ದು ಬಂಧನ ಮಾಡಲಾಗಿದೆ.
ವಿಚಾರಣೆಗೆಂದು ಕರೆದು ಬಂಧನ:
ಅಮೃತ್ ಪೌಲ್‌ರನ್ನು ಐದನೇ ಸುತ್ತಿನ ವಿಚಾರಣೆಗೆಂದು ಇಂದು ಸಿಐಡಿ ಕೇಂದ್ರ ಕಚೇರಿಗೆ ಕರೆಯಲಾಗಿತ್ತು. ವಿಚಾರಣೆ ನೆಪ ಹೇಳಿ ಕರೆಸಿಕೊಂಡು ಅವರನ್ನು ಬಂಧಿಸಲಾಗಿದೆ. ಜತೆಗೆ ಈಗಾಗಲೇ ಮೆಡಿಕಲ್ ಚೆಕಪ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ಕೋರಲಾಗುತ್ತದೆ ಎಂದು ಸಿಐಡಿ ಮೂಲಗಳು ಮಾಹಿತಿ ನೀಡಿವೆ.
ಏನಿದು ಪಿಎಸ್‌ಐ ನೇಮಕಾತಿ ಹಗರಣ:
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷಾ ಅಕ್ರಮದಲ್ಲಿ ನೇಮಕಾತಿ ವ್ಯವಸ್ಥೆಯೇ ಪಾಲ್ಗೊಂಡಿರುವುದು ಖಚಿತವಾಗಿದ್ದು, ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳು ಹಾಗೂ ಇಬ್ಬರು ಮಧ್ಯವರ್ತಿಗಳು ಸೇರಿದಂತೆ ಒಟ್ಟು ಆರು ಮಂದಿ ಮಂಗಳವಾರ ಸಿಐಡಿ ಬಲೆಗೆ ಬಿದ್ದಿದ್ದಾರೆ.
ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹರ್ಷ, ಸಶಸ್ತ್ರ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಹೆಡ್ ಕಾನ್‌ಸ್ಟೇಬಲ್ ಲೋಕೇಶ್, ದ್ವಿತೀಯ ದರ್ಜೆ ಸಹಾಯಕ ಶ್ರೀಧರ್ ಹಾಗೂ ಮಧ್ಯವರ್ತಿಗಳಾದ ಮಂಜುನಾಥ್ ಮತ್ತು ಶರತ್ ಬಂಧಿತರಾಗಿದ್ದು, ಪರೀಕ್ಷೆ ಮುಗಿದ ಬಳಿಕ ನೇಮಕಾತಿ ವಿಭಾಗದ ಸ್ಟ್ರಾಂಗ್ ರೂಮ್‌ನಲ್ಲಿದ್ದ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಈ ಆರೋಪಿಗಳು ತಿದ್ದಿದ್ದಾರೆ. ಇದಕ್ಕೆ ತಲಾ ಅಭ್ಯರ್ಥಿಯಿಂದ 30 ರಿಂದ 40 ಲಕ್ಷ ರು. ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: PSI ಅಕ್ರಮ ಕೇಸ್, ವಿಚಾರಣೆ ವೇಳೆ ದಿವ್ಯಾ ಹಾಗರಗಿ ಪಶ್ಚಾತಾಪದ ಮಾತು
ಇದರೊಂದಿಗೆ ಪೊಲೀಸ್ ನೇಮಕಾತಿ ಹಗರಣದಲ್ಲಿ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಆಗಿದ್ದು, ಈ ಪ್ರಕರಣವು ರಾಜ್ಯ ಪೊಲೀಸ್ ಇತಿಹಾಸಕ್ಕೆ ರಾಷ್ಟ್ರ ಮಟ್ಟದಲ್ಲಿ ಭಾರಿ ಕಳಂಕ ತಂದಿದೆ. ಅಕ್ರಮ ಕೃತ್ಯ ಬೆಳಕಿಗೆ ಬಂದ ದಿನದಿಂದ ಇದುವರೆಗೆ ರಾಜಕಾರಣಿಗಳು, ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳನ್ನು ಸೆರೆಹಿಡಿದಿದ್ದ ಸಿಐಡಿ, ಈಗ ತನ್ನ ಕಾರ್ಯಾಚರಣೆಯನ್ನು ಎರಡನೇ ಘಟ್ಟಕ್ಕೆ ವಿಸ್ತರಿಸುತ್ತಿದ್ದಂತೆ ‘ಅಕ್ರಮ ಕೂಟ’ದ ಮೂಲ ಬೇರು ಎನ್ನಲಾದ ನೇಮಕಾತಿ ವಿಭಾಗದ ಬುಡಕ್ಕೆ ಕೊಡಲಿ ಪೆಟ್ಟು ಬಿದ್ದಿದೆ.
ಒಎಂಆರ್ ಶೀಟ್ ತಿದ್ದಿದ್ದರೇ?:
545 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಒಎಂಆರ್ ಶೀಟ್ ತಿದ್ದಿದ ಆರೋಪದ ಮೇರೆಗೆ 22 ಅಭ್ಯರ್ಥಿಗಳ ವಿರುದ್ಧ ನಗರ ಹೈಗ್ರೌಂಡ್‌್ಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಸಿಐಡಿ, ಈ ಅಭ್ಯರ್ಥಿಗಳ ಪೈಕಿ 16 ಮಂದಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರು ಮಂದಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆಸಿದೆ. ಬಂಧಿತ ಅಭ್ಯರ್ಥಿಗಳ ವಿಚಾರಣೆ ಹಾಗೂ ಪರೀಕ್ಷಾ ಕೇಂದ್ರದ ಸಾಂದರ್ಭಿಕ ಸಾಕ್ಷ್ಯ ಆಧರಿಸಿ ನೇಮಕಾತಿ ವಿಭಾಗದ ನಾಲ್ವರು ಹಾಗೂ ಈ ಅಕ್ರಮ ಕೂಟಕ್ಕೆ ಮಧ್ಯವರ್ತಿಗಳಾಗಿದ್ದ ಇಬ್ಬರು ಸಿಐಡಿ ಗಾಳಕ್ಕೆ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: PSI Recruitment Scam: 11 ಮಂದಿಗೆ ನ್ಯಾಯಾಂಗ ಬಂಧನ
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕ ಜಾಲಗಳು ಬಯಲಾಗಿದ್ದವು. ಕಲಬುರಗಿ ನಗರದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿದ ಬಳಿಕ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಲಾಗಿತ್ತು. ಹಣ ಕೊಟ್ಟಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಪರೀಕ್ಷಾ ಮೇಲ್ವಿಚಾರಕರಾಗಿದ್ದ ತನ್ನ ಶಾಲೆಯ ಶಿಕ್ಷಕರ ಮೂಲಕ ದಿವ್ಯಾ ತಿದ್ದಿಸಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆದರೆ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳ ತಪಾಸಣೆ ನಡೆಸಿದಾಗ ಅಕ್ರಮಕ್ಕೆ ಪುರಾವೆ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳನ್ನು ತೀವ್ರವಾಗಿ ಪ್ರಶ್ನಿಸಿದಾಗ ನೇಮಕಾತಿಯಲ್ಲಿದ್ದ ‘ಅಕ್ರಮ ಕೂಟ’ವು ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.
ಕಳೆದ 2021ರ ಅಕ್ಟೋಬರ್‌ನಲ್ಲಿ ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆ ಮುಗಿದ ಬಳಿಕ ಬೆಂಗಳೂರಿನ ಅರಮನೆ ರಸ್ತೆಯ ಸಿಐಡಿ ಕೇಂದ್ರ ಕಚೇರಿ ಆವರಣದಲ್ಲಿರುವ ರಾಜ್ಯ ಪೊಲೀಸ್ ನೇಮಕಾತಿ ವಿಭಾಗಕ್ಕೆ ಎಲ್ಲ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳು ರವಾನೆಯಾಗಿದ್ದವು. ಆಗ ಸ್ಟ್ರಾಂಗ್ ರೂಮ್‌ನಲ್ಲೇ ತಮಗೆ ಹಣ ಕೊಟ್ಟಿದ್ದ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ನೇಮಕಾತಿ ವಿಭಾಗದ ಅಧಿಕಾರಿಗಳು ತಿದ್ದಿರಬಹುದು ಎಂದು ಆರೋಪ ಬಂದಿದೆ.
ಇದನ್ನೂ ಓದಿ: PSI Recruitment Scam: ಕಿಂಗ್‌ಪಿನ್ ಸರ್ಕಾರದ ಒಳಗೂ ಇರಬಹುದು: ಪ್ರಿಯಾಂಕ್ ಖರ್ಗೆ
ಈ ಪ್ರಕರಣದ ಅನುಮಾನದ ಮೇರೆಗೆ ಮಂಗಳವಾರ ವಿಚಾರಣೆಗೆ ಹಾಜರಾಗಿದ್ದ ನೇಮಕಾತಿ ವಿಭಾಗದ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿ ಹೇಳಿಕೆ ಪಡೆದ ಸಿಐಡಿ ತಂಡ, ಬಳಿಕ ಸಂಜೆ ಅವರನ್ನು ಬಂಧನಕ್ಕೊಳಪಡಿಸಿದೆ ಎಂದು ಮೂಲಗಳು ಹೇಳಿವೆ.
15 ಪ್ರಶ್ನೆಗೆ ಮಾತ್ರ ಅಭ್ಯರ್ಥಿಗಳ ಉತ್ತರ!
ಪಿಎಸ್‌ಐ ಪರೀಕ್ಷೆಯಲ್ಲಿ 150 ಅಂಕಗಳ ಎರಡನೇ ಪತ್ರಿಕೆ (ಸಾಮಾನ್ಯ ಜ್ಞಾನ)ಯ ಒಎಂಆರ್ ಶೀಟ್‌ಗಳು ತಿದ್ದುಪಡಿಯಾಗಿವೆ. ಬೆಂಗಳೂರಿನಲ್ಲಿ ಅಕ್ರಮ ನಡೆಸಿದ್ದ ಅಭ್ಯರ್ಥಿಗಳು, 15 ರಿಂದ 20 ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಬಳಿಕ ಆ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ಕೆಲವರು ತಿದ್ದುಪಡಿ ಮಾಡಿ 120ಕ್ಕಿಂತ ಹೆಚ್ಚಿನ ಅಂಕ ಗಳಿಸಲು ನೆರವಾಗಿದ್ದಾರೆ. ಇದರಿಂದ 50 ಅಂಕಗಳ ಮೊದಲ ಪತ್ರಿಕೆಯಲ್ಲಿ 10 ರಿಂದ 15 ಅಂಕ ಪಡೆದವರು, ಎರಡನೇ ಪತ್ರಿಕೆಯಲ್ಲಿ ಅಧಿಕ ಅಂಕಗಳಿಸಿ ರಾರಯಂಕ್ ಪಡೆದಿದ್ದಾರೆ ಎನ್ನಲಾಗಿದೆ.
ಸ್ಟ್ರಾಂಗ್ ರೂಮ್ ಉಸ್ತುವಾರಿಯಲ್ಲಿದ್ದ ಆರೋಪಿಗಳು!
ಬಂಧಿತ ಹರ್ಷ, ಶ್ರೀಧರ್, ಲೋಕೇಶ್ ಹಾಗೂ ಶ್ರೀನಿವಾಸ್ ನೇಮಕಾತಿ ವಿಭಾಗದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನಿಟ್ಟಿದ್ದ ಸ್ಟ್ರಾಂಗ್ ರೂಮ್‌ನ ಉಸ್ತುವಾರಿಯಲ್ಲಿದ್ದರು. ರಾತ್ರಿ ವೇಳೆ ಆರೋಪಿಗಳು ಒಎಂಆರ್ ಶೀಟ್ ತಿದ್ದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಹಗರಣ ಬೆನ್ನಲ್ಲೇ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಕಠಿಣ ನಿಯಮ
ಹಿರಿಯ ಅಧಿಕಾರಿ ಬುಡಕ್ಕೆ ಬೆಂಕಿ..!
ಪೊಲೀಸ್ ನೇಮಕಾತಿ ಅಕ್ರಮದಲ್ಲಿ ಕೆಳ ಹಂತದ ಸಿಬ್ಬಂದಿ ಸಿಐಡಿ ಬಲೆಗೆ ಬಿದ್ದ ಬೆನ್ನಲ್ಲೇ ಈಗ ನೇಮಕಾತಿ ವಿಭಾಗದ ಹಿರಿಯ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಮೇಲಾಧಿಕಾರಿಗಳ ಕಣ್ತಪ್ಪಿಸಿ ಇಂಥ ದೊಡ್ಡ ಮಟ್ಟದ ಹಗರಣ ನಡೆದಿರಲು ಸಾಧ್ಯವಿಲ್ಲ. ಮುಂದಿನ ಹಂತದಲ್ಲಿ ಭರ್ಜರಿ ವಿಕೆಟ್ ಬೀಳಬಹುದು ಎನ್ನಲಾಗಿತ್ತು. ಅದೇ ರೀತಿ ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಬಂಧನವಾಗಿದೆ.