ಬೆಂಗಳೂರು: KAS ಅಧಿಕಾರಿ ಎಲ್ ಸಿ ನಾಗರಾಜ್ ವಿರುದ್ಧ ಲಂಚ ಕೇಸ್ ರದ್ದು
KAS L C Nagaraj Case: ಲಂಚ ಪಡೆದ ಆರೋಪ ಸಂಬಂಧ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಮೇಲೆ ದಾಖಲಾಗಿದ್ದ ಎಫ್‌ಐಆರ್ (FIR) ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ
ಬೆಂಗಳೂರು (ನ. 01): ಜಮೀನು ವ್ಯಾಜ್ಯವೊಂದರಲ್ಲಿ ಅನುಕೂಲಕರ ತೀರ್ಪು ನೀಡಲು ಲಂಚ ಪಡೆದ ಆರೋಪ ಸಂಬಂಧ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ (L C Nagaraj) ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ್ದ ಎಫ್‌ಐಆರ್ (FIR) ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸಿಬಿ ದಾಖಲಿಸಿದ್ದ ಎಫ್‌ಐಆರ್ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಸ್ತುತ ‘ಸಕಾಲ ಮಿಷನ್’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಅರ್ಜಿದಾರರಿಗೆ 2015ರಲ್ಲಿ ಲಂಚ ನೀಡಲಾಗಿತ್ತು ಎಂದು ಆರೋಪಿಸಿ ದೂರುದಾರರು ಎಸಿಬಿಗೆ 2022ರ ಫೆಬ್ರವರಿಯಲ್ಲಿ ದೂರು ದಾಖಲಿಸಿದ್ದಾರೆ. 2015ರಿಂದ ಸುಮ್ಮನಿದ್ದು, ಏಳು ವರ್ಷಗಳ ಬಳಿಕ ದೂರು ನೀಡಿರುವ ಕ್ರಮ ಸಂಶಯಕ್ಕೆ ಕಾರಣವಾಗಲಿದೆ. ಅಧಿಕಾರಿಯ ವಿರುದ್ಧ ದುರುದ್ದೇಶಪೂರ್ವಕವಾಗಿ ದೂರು ದಾಖಲಿಸಲಾಗಿದೆ ಎಂಬ ಬಗ್ಗೆ ಬಲವಾದ ಅನುಮಾನ ಮೂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಟ್ಟಿದೆ.
ಇದನ್ನೂ ಓದಿ: ಕಳೆದಿದ್ದ ಮೊಬೈಲ್ ಹುಡುಕಿಕೊಡೋಕೆ 5000 ರೂ. ಲಂಚ ; ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೇಬಲ್
ಪ್ರಕರಣದ ವಿವರ: ನಾಗರಾಜ್ ವಿರುದ್ಧ 2022ರ ಫೆ.16ರಂದು ಎಸಿಬಿಗೆ ದೂರು ದಾಖಲಿಸಿದ್ದ ಎಂ.ಬಸವರಾಜು ಎಂಬುವವರು, ಬೆಂಗಳೂರು ದಕ್ಷಿಣ ತಾಲೂಕಿನ ವಡ್ಡರಪಾಳ್ಯ ಗ್ರಾಮದಲ್ಲಿ ಜಮೀನಿನ ವ್ಯಾಜ್ಯವೊಂದರ ಸಂಬಂಧ ಸಹಾಯಕ ಆಯುಕ್ತರ ಮುಂದೆ ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳುವಂತೆ 2014ರಲ್ಲಿ ಹೈಕೋರ್ಟ್‌ನಲ್ಲಿ ಸೂಚಿಸಿತ್ತು. ಅದರಂತೆ 2014ರಲ್ಲಿ ಸಹಾಯಕ ಆಯುಕ್ತರಾಗಿದ್ದ ನಾಗರಾಜ್ ಅವರ ಮುಂದೆ ದೂರು ಸಲ್ಲಿಸಲಾಗಿತ್ತು. ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಬರುವಂತೆ ಮಾಡಲು .6 ಲಕ್ಷ ಲಂಚ ನೀಡಬೇಕು ಎಂದು ನಾಗರಾಜ್ ಬೇಡಿಕೆ ಇಟ್ಟಿದ್ದರು. ಅದರಂತೆ 2015ರ ಮಾ.15ರಂದು .2 ಲಕ್ಷ ಲಂಚ ನೀಡಲಾಗಿತ್ತು ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಎಸಿಬಿ, ಭ್ರಷ್ಟಾಚಾರ ಆರೋಪ ಕುರಿತು ಅರ್ಜಿದಾರ ನಾಗರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದತ್ತು. ಪ್ರಕರಣದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿತ್ತು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್ ಹಾಗೂ ವಿಶೇಷ ನ್ಯಾಯಾಲಯದ ದೂರು ರದ್ದುಪಡಿಸುವಂತೆ ಕೋರಿ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು.