ಬೆಂಗಳೂರು : ಸರ್ಕಾರಿ ಅಧಿಕಾರಿ ಪ್ರತಿಮಾ ಕಗ್ಗೊಲೆ ಪ್ರಕರಣ, ಆರೋಪಿ ಬಂಧನ, ದ್ವೇಷದಿಂದಲೇ ಆಯ್ತು ಕೊಲೆ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಕಾರು ಚಾಲಕನಿಂದ ಪ್ರತಿಮಾ ಕೊಲೆಯಾಗಿದೆ.

ಬೆಂಗಳೂರು (ನ.6): ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದ್ದು, ಹಳೇ ಡ್ರೈವರ್ ಕಿರಣ್ ಎಂಬಾತ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುದು ಬಹಿರಂಗವಾಗಿದೆ.
ಕೊಲೆ ಮಾಡಿ ಆರೋಪಿ ಕಿರಣ್ ಚಾಮರಾಜನಗರಕ್ಕೆ ಪರಾರಿಯಾಗಿದ್ದ. ಮೊಬೈಲ್ ಲೋಕೆಷನ್ ಆಧರಿಸಿ ಆರೋಪಿ ಪತ್ತೆ ಮಾಡಿದ್ದಾರೆ. ಆರೋಪಿ ಕಿರಣ್ ಚಾಮರಾಜನಗರದ ಮಹಾದೇಶ್ವರ ಬೆಟ್ಟದಲ್ಲಿ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತ್ರ ಚಾಮರಾಜನಗರ ಪೊಲೀಸರು ಮಹಾದೇಶ್ವರ ಬೆಟ್ಟಕ್ಕೆ ಹೋಗಿ ಕಿರಣ್ ಹಿಡಿದಿದ್ದರು. ಬಳಿಕ ಬೆಂಗಳೂರು ಸುಬ್ರಮಣ್ಯ ಪುರ ಪೊಲೀಸರಿಗೆ ಒಪ್ಪಿಸಿದರು. ಸದ್ಯ ಆತನನ್ನು ಬೆಂಗಳೂರಿಗೆ ಕರೆ ತಂದಿದ್ದಾರೆ.
ಬೆಂಗಳೂರಿನಲ್ಲಿ ಸರ್ಕಾರಿ ಮಹಿಳಾ ಅಧಿಕಾರಿ ಭೀಕರ ಹತ್ಯೆ!
ಕಳೆದ ಐದು ವರ್ಷಗಳಿಂದ ಕಿರಣ್ ಕಾಂಟ್ರಾಕ್ಟ್ ಬೇಸಿಸ್ ನಲ್ಲಿ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ, ಕಿರಣ್ ತಂದೆ ಸುರೇಶ್ ಸಹ ಇಲಾಖೆಯಲ್ಲಿ ಚಾಲಕರಿದ್ದರು. ವಿಚಾರಣೆ ವೇಳೆ ಆರೋಪಿ ಕಿರಣ್ ತಪ್ಪೊಪ್ಪಿಕೊಂಡಿದ್ದು, 10 ದಿನದ ಹಿಂದೆ ಕೆಲಸದಿಂದ ತೆಗೆದಿದಕ್ಕೆ ಕುಪಿತಗೊಂಡಿದ್ದ. ಸದ್ಯ ಸುಬ್ರಮಣ್ಯಪುರ ಠಾಣೆಯಲ್ಲಿ ಇಟ್ಟು ಆರೋಪಿ ಕಿರಣ್ ವಿಚಾರಣೆ ನಡೆಸಲಾಗುತ್ತಿದೆ. ನಂತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಆತನನ್ನು ಪ್ರತಿಮಾ ಕೆಲಸದಿಂದ ತೆಗೆದು ಹಾಕಿದ್ದರು. ಈ ಬಗ್ಗೆ ಪ್ರತಿಮಾ ಮೇಲೆ ಕಿರಣ್ ಕೋಪಗೊಂಡಿದ್ದ, ಹೀಗಾಗಿ ಮನೆಗೆ ಬಂದು ಕೊಲೆ ಮಾಡಿ ತೆರಳಿದ್ದ, ಸದ್ಯ ಬಂಧನವಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಪ್ರತಿಮಾ ಕೊಲೆಗೆ ಕೌಟುಂಬಿಕ ಕಾರಣವೆಂದು, ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂದು, ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು ಕಾರಣವೆಂದು ಸುದ್ದಿ ಇತ್ತು. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆದಿತ್ತು. ಇದೀಗ ಚಾಲಕನೇ ಕೊಲೆಗೆ ಕಾರಣ ಎಂದು ಸ್ಪಷ್ಟವಾಗಿದೆ. ಪ್ರತಿಮಾ ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದರು.