ಕಾರವಾರದಲ್ಲಿ ವಿದ್ಯಾರ್ಥಿನಿ ಪರೀಕ್ಷಾ ಒತ್ತಡದಿಂದ  ಮಾಡಿಕೊಂಡರೆ, ಕೋಲಾರದಲ್ಲಿ ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷರು ನೇಣಿಗೆ ಶರಣಾಗಿದ್ದಾರೆ.

ಕಾರವಾರ (ಜು.24): ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿಯ ಪುತ್ರಿಯೊಬ್ಬಳು ನೇಣು ಬಿಗಿದು ಸಾವಿಗೆ ಶರಣಾದ ಘಟನೆ ನಡೆದಿದೆ. ಮೃತಳನ್ನು ರಕ್ಷಾ ಅರುಣ್ ನಾಯಕ್ (23) ಎಂದು ಗುರುತಿಸಲಾಗಿದೆ. ರಕ್ಷಾ, ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯಾಗಿದ್ದಳು.

ಪೊಲೀಸ್ ಮೂಲಗಳ ಪ್ರಕಾರ, ರಕ್ಷಾ ಬಿ.ಟೆಕ್ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದಳು. ಈ ಬಗ್ಗೆ ಪೋಷಕರು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ರಕ್ಷಾ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಯು ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ಕೋಲಾರ: ಫೈನಾನ್ಸ್ ಕಿರುಕುಳದಿಂದ ಹಮಾಲಿ ಸಂಘದ ಅಧ್ಯಕ್ಷ ಸಾವಿಗೆ ಶರಣು

ಕೋಲಾರ (ಜುಲೈ.24): ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಅಂಬೇಡ್ಕರ್ ಪಾಳ್ಯದಲ್ಲಿ ಹಮಾಲಿ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ. ಮೂರ್ತಿ (53) ಎಂಬುವವರು ನೇಣು ಬಿಗಿದುಕೊಂಡು ಸಾವಿಗೆ ಶರಣಾದ ದುರಂತ ಘಟನೆ ನಡೆದಿದೆ.

ಫೈನಾನ್ಸ್ ಕಿರುಕುಳದಿಂದ ಮೂರ್ತಿ ಈ ಕೃತ್ಯಕ್ಕೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರ ಪತ್ನಿ ಹೇಳಿಕೆಯ ಪ್ರಕಾರ, ಅವರು ವಾರಕ್ಕೆ 5 ಸಾವಿರ ರೂಪಾಯಿಗಳ ಫೈನಾನ್ಸ್ ಕಂತು ಕಟ್ಟುತ್ತಿದ್ದರು. ಆರ್ಥಿಕ ಒತ್ತಡದಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.