* ಎಸಿಬಿಯ ಮಾಹಿತಿ ಕಲೆ ಹಾಕಿದ ಏಷ್ಯಾನೆಟ್ ಸುವರ್ಣ ನ್ಯೂಸ್* ಬಿ ರಿಪೋರ್ಟ್ ಹಾಕೋದೆ ಎಸಿಬಿ ಕಾರ್ಯ ಆಗ್ತಿದ್ಯಾ..? * ಅಚ್ಚರಿ ಮೂಡಿಸುತ್ತಿದೆ ದಾಖಲೆಯಲ್ಲಿರುವ ಮಾಹಿತಿ
ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಜು.10): ಭ್ರಷ್ಟಾಚಾರ ನಿಗ್ರಹ ದಳದ ವಿರುದ್ದ ನ್ಯಾಯಾಧೀಶರು ತರಾಟೆ ತೆಗೆದುಕೊಂಡ ಮೇಲೆ ಎಸಿಬಿ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಬರುವುದಕ್ಕೆ ಶುರುವಾಗಿದೆ. ಸರ್ಕಾರಿ ಅಧಿಕಾರಿಗಳ ವಿರುದ್ಧ ನಡೆದ ದಾಳಿಗಳು ಏನಾಗ್ತಿದೆ..? ಎಸಿಬಿ ಅಧಿಕಾರಿಗಳ ತನಿಖೆ ಎತ್ತ ಸಾಗುತ್ತಿದೆ ಎಂಬುದು ಬಯಲಾಗುವುದಕ್ಕೆ ಶುರುವಾಗಿದೆ. ಸರ್ಕಾರಿ ಅಧಿಕಾರಿಗಳ ಮೇಲಿನ ಎಸಿಬಿ ತನಿಖೆಗಳು ಹಳ್ಳ ಹಿಡಿಯುತ್ತಿವೆಯಾ ಎಂಬ ಅನುಮಾನ ಕೂಡ ಮೂಡುತ್ತಿದೆ. ನ್ಯಾಯಾಧೀಶರು ಎಸಿಬಿ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಆಗ್ತಿರುವ ವಿಚಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ದಾಖಲೆ ಕಲೆ ಹಾಕುವ ಕೆಲಸ ಮಾಡಿದೆ.
ಕಳೆದ 5 ವರ್ಷಗಳಲ್ಲಿ ಸರ್ಕಾರಿ ಅಧಿಕಾರಿಗಳು/ನೌಕರರ ಮೇಲೆ ಎಷ್ಟು ಕೇಸ್ ಹಾಕಿದೆ ಎಂಬ ಮಾಹಿತಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ಕಲೆ ಹಾಕಿದೆ.ಕಳೆದ ಐದು ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳು/ನೌಕರರ ವಿರುದ್ಧದ 310 ಪ್ರಕರಣಗಳ ಪೈಕಿ 63 ಕೇಸ್ ಗಳನ್ನ ಇತ್ಯರ್ಥಗೊಳಿಸಿದೆ. ಈ 63 ಪ್ರಕರಣಗಳ ಪೈಕಿ 23 ಕೇಸ್ ಗಳಲ್ಲಿ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಕೆ ಆಗಿದೆ. ಈ ಪ್ರಮಾಣದಲ್ಲಿ ಬಿ ರಿಪೋರ್ಟ್ ಸಲ್ಲಿಸುತ್ತಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗ್ತಿದೆ.
5 ವರ್ಷದಲ್ಲಿ 310 ಕೇಸ್ ದಾಖಲು: ಕಳೆದ ಐದು ವರ್ಷಗಳಲ್ಲಿ ಎಸಿಬಿ ಅಧಿಕಾರಿಗಳು 371 ಮಂದಿ ಸರ್ಕಾರಿ ಅಧಿಕಾರಿ/ನೌಕರರ ಮೇಲೆ ದಾಳಿ ನಡೆಸಿದೆ. ಸರ್ಕಾರಿ ಅಧಿಕಾರಿಗಳು/ನೌಕರರ ವಿರುದ್ಧ ಒಟ್ಟು 310 ಪ್ರಕರಣಗಳನ್ನ ದಾಖಲಿಸಿದೆ. ಬೆಂಗಳೂರಿನಲ್ಲಿ 54 ಪ್ರಕರಣ ದಾಖಲಾಗಿದೆ. 223 ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ. ಇದರಲ್ಲಿ 23 ಕೇಸ್ ಗಳಲ್ಲಿ ಎಸಿಬಿ ಬಿ ರಿಪೋರ್ಟ್ ಸಲ್ಲಿಸಿದೆ. ಸರ್ಕಾರಿ ಅಧಿಕಾರಿಗಳು/ನೌಕರರ ಪ್ರಕರಣಗಳ ಪೈಕಿ ಶೇ.36 ರಷ್ಟು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ.
ಎಸಿಬಿ ವಿರುದ್ಧ ಹೈಕೋರ್ಟ್ ಮತ್ತೆ ಹಿಗ್ಗಾಮುಗ್ಗಾ ತರಾಟೆ
ಹೈಕೋರ್ಟ್ ತರಾಟೆ: ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ (ಲೋಕಾಯುಕ್ತ ವಿಶೇಷ ನ್ಯಾಯಾಲಯ) ಸಲ್ಲಿಸಿರುವ ‘ಬಿ ವರದಿ’ಗಳ ಬಗ್ಗೆ ಅಪೂರ್ಣ ಮಾಹಿತಿ ನೀಡಿರುವ ‘ಭ್ರಷ್ಟಾಚಾರ ನಿಗ್ರಹ ದಳ’ (ಎಸಿಬಿ) ಕಾರ್ಯ ವೈಖರಿಯನ್ನು ಹೈಕೋರ್ಟ್ ಮತ್ತೆ ತರಾಟೆಗೆ ತೆಗೆದುಕೊಂಡಿದ್ದು, 2016ರಿಂದ ಈವರೆಗೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ‘ಬಿ ವರದಿ’ಗಳ ವರ್ಷವಾರು ಮಾಹಿತಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ಗೆ (ನ್ಯಾಯಾಂಗ) ನಿರ್ದೇಶಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಲಂಚ ಪ್ರಕರಣದ ಆರೋಪಿ ಉಪ ತಹಶೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ಈ ಆದೇಶ ಮಾಡಿದ್ದಾರೆ.
ಅಲ್ಲದೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2013ರ ಏ.5ರಂದು ಅಂದಿನ ಬಳ್ಳಾರಿ ಜಿಲ್ಲಾ ಎಸ್ಪಿ ಆಗಿದ್ದ, ಹಾಲಿ ಎಸಿಬಿ ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಪ್ರಕರಣದ ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿದರು.
