200 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೆಹಲಿಯ ಆರ್ಥಿಕ ಅಪರಾಧ ವಿಭಾಗ ಸಮನ್ಸ್ ಜಾರಿ ಮಾಡಿದೆ. ಸೆಪ್ಟಂಬರ್ 14 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್‌ ಅವರನ್ನು ಆರೋಪಿ ಎಂದು ಹೆಸರಿಸಿ ಜಾರಿ ನಿರ್ದೇಶನಾಲಯ (Enforcement Directorate) (ಇಡಿ) ಆರೋಪಟ್ಟಿ ಸಲ್ಲಿಸಿದೆ. ಹಾಗೂ, ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ನಡೆಸಿರುವ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣ (Extortion Case) ಸಂಬಂಧ ದೆಹಲಿ ಪೊಲೀಸರು ಸಮನ್ಸ್‌ ನೀಡಿದ್ದು, ಇಂದು ಅಂದರೆ ಸೆಪ್ಟೆಂಬರ್ 14 ರಂದು ವಿಚಾರಣೆಗೆ ಹಾಜರಾಗಿದ್ದಾರೆ. ಇದು ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (Economic Offences Wing) ಸಲ್ಲಿಸಿರುವ ಮೂರನೇ ಸಮನ್ಸ್‌ ಆಗಿದೆ. ಈ ಹಿಂದೆ 2 ಬಾರಿ ಸಮನ್ಸ್‌ ನೀಡಿದ್ದರೂ ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ವಿಚಾರಣೆಗೆ ಹಾಜರಾಗಿರಲಿಲ್ಲ. 

ಬೆಂಗಳೂರು ಮೂಲದ ಸುಕೇಶ್‌ ಚಂದ್ರಶೇಖರ್‌ ನಡೆಸಿರುವ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್‌ 10 ಕೋಟಿ ಮೌಲ್ಯದ ಉಡುಗೊರೆ (Gifts) ನೀಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಸುಕೇಶ್ ಚಂದ್ರಶೇಖರ್, ರಾನ್‌ಬಾಕ್ಸಿಯ (Ranbaxy) ಮಾಜಿ ಪ್ರವರ್ತಕ ಅದಿತಿ ಸಿಂಗ್ ಮತ್ತು ಶಿವಿಂದರ್ ಸಿಂಗ್ ಅವರಿಗೆ ವಂಚನೆ ಮಾಡಿದ ಆರೋಪದ ಮೇರೆಗೆ ದೆಹಲಿ ಪೊಲೀಸರು ಸುಕೇಶ್‌ನನ್ನು ಈಗಾಗಲೇ ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನು ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ನಟಿ ಜಾಕ್ವೆಲಿನ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ

ಈ ಹಿಂದೆ ಆಗಸ್ಟ್‌ 29 ಹಾಗೂ ಸೆಪ್ಟೆಂಬರ್ 12 ರಂದು 2 ಬಾರಿ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದ್ದರು. ಇಂದೂ ಸಹ ಸಮನ್ಸ್‌ ನೀಡಿದ್ದು, ಸುಕೇಶ್‌ ಚಂದ್ರಶೇಖರ್‌ ಜತೆಗಿನ ಸಂಬಂಧ ಹಾಗೂ ಆತನಿಂದ ನಟಿ ಪಡೆದಿರುವ ಉಡುಗೊರೆಗಳ ಸಂಬಂಧ ಪ್ರಶ್ನೆ ಕೇಳಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸುಕೇಶ್‌ ಚಂದ್ರಶೇಖರ್‌ನನ್ನು ಎಷ್ಟು ಬಾರಿ ವೈಯಕ್ತಿಕವಾಗಿ ಭೇಟಿಯಾಗಿದ್ರಿ ಹಾಗೂ ಎಷ್ಟು ಬಾರಿ ಫೋನ್‌ ಮೂಲಕ ಸಂಭಾಷಣೆ ನಡೆಸಿದ್ರಿ ಎಂಬ ಪ್ರಶ್ನೆಗಳನ್ನೂ ದೆಹಲಿ ಪೊಲೀಸರ ಆರ್ಥಿಕ ವಿಭಾಗ ಕೇಳಲಿದೆ ಎಂದು ತಿಳಿದುಬಂದಿದೆ. 

ಜಾಕ್ವೆಲಿನ್‌ ಫರ್ನಾಂಡೀಸ್‌ ಜತೆಗೆ, ಸುಕೇಶ್‌ನನ್ನು ನಟಿಯ ಜತೆಗೆ ಪರಿಚಯ ಮಾಡಿಸಿದ ಪಿಂಕಿ ಇರಾನಿಗೂ ಸಹ ನೋಟಿಸ್‌ ನೀಡಲಾಗಿದೆ. ಹಾಗೂ, ಜಾಕ್ವೆಲಿನ್, ಪಿಂಕಿ ಇಬ್ಬರನ್ನೂ ಎದುರು ಬದುರು ಕೂರಿಸಿಕಂಡು ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ. ಜಾಕ್ವೆಲಿನ್‌ ಫರ್ನಾಂಡೀಸ್‌ ಅವರನ್ನು ಹಲವು ಗಂಟೆಗಳ ಕಾಲ ದೆಹಲಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಹಾಗೂ, ಇಂದು ವಿಚಾರಣೆಗೆ ಹಾಜರಾದ ಬಳಿಕ ಮತ್ತೆ ನಾಳೆ ಅಂದರೆ ಸೆಪ್ಟೆಂಬರ್ 15 ರಂದು ಸಹ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ. 

ಸನ್ ಟಿವಿ ಮಾಲಿಕ, ಜಯಲಲಿತಾ ಅಳಿಯ ಎಂದು ಹೇಳಿದ್ದ; ಸುಕೇಶ್ ಚಂದ್ರಶೇಖರ್ ಬಗ್ಗೆ ಬಾಯ್ಬಿಟ್ಟ ನಟಿ ಜಾಕ್ವೇಲಿನ್

ಇದೇ ಪ್ರಕರಣ ಸಂಬಂಧ ದೆಹಲಿ ಪೊಲೀಸರು ಕೆಲ ದಿನಗಳ ಹಿಂದೆ ಬಾಲಿವುಡ್‌ ನಟಿ ನೋರಾ ಫತೇಹಿ ಅವರನ್ನೂ 6 ಗಂಟೆಗಳ ಕಾಲ ವಿಚಾರಣೆ ಮಾಡಲಾಗಿದೆ. ಈ ಮಧ್ಯೆ, ಜಾಕ್ವೆಲಿನ್ ಫರ್ನಾಂಡೀಸ್‌ ಅವರನ್ನು ಪ್ರಶ್ನಿಸುವ ಅಧಿಕಾರಿಗಳ ಪೈಕಿ ಆರ್ಥಿಕ ಅಪರಾಧ ವಿಭಾಗದ ಜಂಟಿ ಆಯುಕ್ತ (Joint Commissioner) ಛಾಯಾ ಶರ್ಮಾ ಮತ್ತು ವಿಶೇಷ ಆಯುಕ್ತ ರವೀಂದ್ರ ಯಾದವ್ ಸೇರಿದ್ದಾರೆ. ಹಾಗೂ, ನಟಿಯನ್ನು ವಿಚಾರಣೆಗೆ ಒಳಪಡಿಸುವ ತಂಡದಲ್ಲಿ ಸುಮಾರು 5-6 ಅಧಿಕಾರಿಗಳು ಇರಲಿದ್ದಾರೆ ಎಂದೂ ತಿಳಿದುಬಂದಿದೆ.