ಬೆಂಗಳೂರಿನಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 43 ಲಕ್ಷ ರೂ. ಮೌಲ್ಯದ 70 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರೆದಿದೆ.

ಬೆಂಗಳೂರು (ಮಾ.22) : ಮೊಬೈಲ್‌ ಫೋನ್‌ಗಳನ್ನು ಕಳವು ಮಾಡುತ್ತಿದ್ದ ನಾಲ್ವರನ್ನು ಆರ್‌ಎಂಸಿ ಯಾರ್ಡ್‌ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ₹43 ಲಕ್ಷ ಮೌಲ್ಯದ 70 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ.

ಸೋಲದೇವನಹಳ್ಳಿ ನಿವಾಸಿಗಳಾದ ಶಂಶೀರ್‌, ಮೊಹಮ್ಮದ್‌ ಮಿದಲಾಜ್‌, ಭದ್ರಾವತಿ ಮೂಲದ ಸುಬಿನ್‌ ಸುಹೇರ್‌ ಹಾಗೂ ತಮಿಳುನಾಡು ಮೂಲದ ಉದ್ಮಾನ್‌ ಫೈಜ್‌ ಬಂಧಿತರು. ಇತ್ತೀಚೆಗೆ ಯಶವಂತಪುರ ಮಾರ್ಕೆಟ್‌ ಬಳಿ ತರಕಾರಿ ತರಲು ಹೋಗಿದ್ದ ವ್ಯಕ್ತಿಯೊಬ್ಬರ ಐಫೋನ್‌ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಆರ್‌ಎಂಸಿ ಯಾರ್ಡ್‌ ಠಾಣಾ ವ್ಯಾಪ್ತಿಯ ಪ್ಲಾಟಿನಂ ಸಿಟಿ ಅಪಾರ್ಟ್‌ಮೆಂಟ್‌ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳನ್ನು 5 ಮೊಬೈಲ್‌ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಮ್ಮ ಬಳಿ ಇರುವುದು ಕಳ್ಳತನ ಮಾಡಿದ ಮೊಬೈಲ್‌ಗಳು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ವೇಳೆ ತಮ್ಮ ಸಹಚರ ಭದ್ರಾವತಿಯಲ್ಲಿ ಇದ್ದುಕೊಂಡು ಮೊಬೈಲ್‌ ಕಳವು ಮಾಡಿ ಮಾರಾಟ ಮಾಡಿಕೊಡಲು ತಮಗೆ ನೀಡುತ್ತಿದ್ದ. ಅಂತೆಯೆ ಈ ಮೊಬೈಲ್‌ಗಳನ್ನು ಖರೀದಿಸಲು ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಬರುವುದಾಗಿ ಹೇಳಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ಭದ್ರಾವತಿ ಮತ್ತು ತಮಿಳುನಾಡು ಮೂಲದ ಮತ್ತಿಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಆಧಾರ್ ಕೊಡದೇ ಹೋಟೆಲ್‌ ಕೆಲಸಕ್ಕೆ ಸೇರಿದ್ದ ಅಬ್ದುಲ್ ರೆಹಮಾನ್, ಬ್ಯಾಗ್ ತೆಗೆದು ನೋಡಿದಾಗ ಶಾಕ್, ಸ್ಫೋಟಕ ಪತ್ತೆ,, ಏನಿತ್ತು ಸಂಚು?

ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಒಟ್ಟು 70 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ದಾಖಲಾಗಿದ್ದ 1 ಮೊಬೈಲ್‌ ಕಳವು ಪ್ರಕರಣ ಪತ್ತೆಯಾಗಿದೆ. ಉಳಿದ 69 ಮೊಬೈಲ್‌ಗಳ ವಾರಸುದಾರರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.