ಸೆಕೆಂಡ್‌ ಹ್ಯಾಂಡ್‌ ಶೋ ರೂಂ ಮೂಲಕ ಮಾರಲು ಯತ್ನ, ಭೋಜೇಗೌಡ ಪಿಎಯಿಂದ ಭಾರೀ ಧೋಖಾ ಬೆಳಕಿಗೆ

ಬೆಂಗಳೂರು(ಫೆ.26): ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಅವರ ಕಾರಿನ ನೋಂದಣಿ ಸಂಖ್ಯೆಯನ್ನು ಕದ್ದ ಕಾರಿಗೆ ಅಳವಡಿಸಿ ಬಳಿಕ ನಕಲಿ ದಾಖಲೆ ಸೃಷ್ಟಿಸಿ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಹೈಗ್ರೌಂಡ್ಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಟ್ಟೂರು ಲೇಔಟ್‌ ಮುಖ್ಯರಸ್ತೆ ನಿವಾಸಿ ಮಂಜುನಾಥ್‌ (45), ಮೈಸೂರು ನಿವಾಸಿ ಶಾಬಾಜ್‌ ಖಾನ್‌(31) ಬಂಧಿತರು. ಆರೋಪಿಗಳಿಂದ ಇನ್ನೋವಾ ಕ್ರಿಸ್ಟಾಕಾರು ಹಾಗೂ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

ಏನಿದು ಪ್ರಕರಣ?:

ವಿಧಾನ ಪರಿಷತ್‌ ಸದಸ್ಯ ಭೋಜೇಗೌಡ ಅವರ ಖಾಸಗಿ ಆಪ್ತ ಸಹಾಯಕ ಮಾದೇಶ ಅವರು ಫೆ.22ರಂದು ಸಂಜೆ 4.30ರ ಸುಮಾರಿಗೆ ವಸಂತನಗರದ ಕ್ವೀನ್ಸ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದರು. ಈ ವೇಳೆ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟದ ‘ಐ-ಕಾರ್‌ ಶೋ ರೂಮ್‌’ ಎದುರು ಹಾದುಹೋಗುವಾಗ ಕೆಎ-18, ಝಡ್‌-5977 ನೋಂದಣಿ ಸಂಖ್ಯೆಯ ಇನ್ನೋವಾ ಕ್ರಿಸ್ಟಾಕಾರು ಇರುವುದನ್ನು ಗಮನಿಸಿದ್ದಾರೆ. ಭೋಜೇಗೌಡರ ಇನ್ನೋವಾ ಕ್ರಿಸ್ಟಾಕಾರಿನ ನೋಂದಣಿ ಸಂಖ್ಯೆ ಸಹ ಇದೇ ಆಗಿದ್ದರಿಂದ ಅನುಮಾನಗೊಂಡ ಮಾದೇಶ, ಶೋ ರೂಮ್‌ ಪ್ರವೇಶಿಸಿ ಕಾರಿನ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಶೋ ರೂಮ್‌ನ ಮಾಲೀಕ ಇಮ್ರಾನ್‌, ‘ಇದು ಮಾರಾಟಕ್ಕೆ ಇರಿಸಿರುವ ಕಾರು. ಟೆಸ್ಟ್‌ ಡ್ರೈವ್‌ ಮಾಡುವಿರಾ’ ಎಂದು ಕೇಳಿದ್ದಾನೆ.

ಕೊಡಗು: ವ್ಯಾಪಾರದಲ್ಲಿ ನಷ್ಟ; ಬಟ್ಟೆ ವ್ಯಾಪಾರಿ ಆತ್ಮಹತ್ಯೆ

ಇದರಿಂದ ಮತ್ತಷ್ಟು ಅನುಮಾನಗೊಂಡ ಮಾದೇಶ, ಆ ಕಾರಿನ ದಾಖಲೆ ಪಡೆದು ನೋಡಿದಾಗ, ಅದರಲ್ಲಿ ಭೋಜೇಗೌಡ ಹೆಸರಿರುವುದು ಗೊತ್ತಾಗಿದೆ. ಕೂಡಲೇ ಭೋಜೇಗೌಡರಿಗೆ ಕರೆ ಮಾಡಿರುವ ಮಾದೇಶ, ನಿಮ್ಮ ಕಾರನ್ನು ಮಾರಾಟಕ್ಕೆ ಇರಿಸಿದ್ದಾರೆ ಎಂದು ಕೇಳಿದ್ದಾರೆ. ಇದಕ್ಕೆ ಭೋಜೇಗೌಡರು ಇಲ್ಲ ಎಂದು, ಕಾರು ಮನೆ ಬಳಿಯೇ ಇದೆ ಎಂದು ಹೇಳಿದ್ದಾರೆ. ಬಳಿಕ ಶೋ ರೂಮ್‌ನಲ್ಲಿರುವ ಕಾರಿನ ಬಗ್ಗೆ ಭೋಜೇಗೌಡರಿಗೆ ಮಾಹಿತಿ ನೀಡಿದ ಮಾದೇಶ, ಹೈಗ್ರೌಂಡ್‌್ಸ ಠಾಣೆಗೆ ಬಂದು ನಕಲಿ ಕಾರಿನ ಬಗ್ಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರಲ್ಲಿ ಕದ್ದ ಕಾರು!:

ಐ-ಕಾರ್‌ ಶೋ ರೂಮ್‌ ಮಾಲೀಕ ಇಮ್ರಾನ್‌ನನ್ನು ಮೊದಲು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಮಂಜುನಾಥ್‌ ಮತ್ತು ಶಾಬಾಜ್‌ ಖಾನ್‌ ಎಂಬುವವರು ಈ ಕಾರನ್ನು ಮಾರಾಟ ಮಾಡಲು ನನಗೆ ನೀಡಿದ್ದಾರೆ ಎಂದು ತಿಳಿಸಿದ್ದಾನೆ. ಈ ಮಾಹಿತಿಯನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ, ಈ ಇನ್ನೋವಾ ಕ್ರಿಸ್ಟಾಕಾರನ್ನು ಮೈಸೂರಿನಲ್ಲಿ ಕದ್ದು ಭೋಜೇಗೌಡರ ಕಾರಿನ ನೋಂದಣಿ ಸಂಖ್ಯೆ ಅಳವಡಿಸಿ, ಅವರದೇ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಬಳಿಕ ಸೆಕೆಂಡ್‌ ಹ್ಯಾಂಡ್‌ ಕಾರುಗಳನ್ನು ಮಾರಾಟ ಮಾಡುವ ಇ-ಕಾರ್‌ ಶೋ ರೂಮ್‌ಗೆ ಆ ಕಾರನ್ನು ತಂದು ಬಿಟ್ಟಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.