Chamarajanagar: ವರದಕ್ಷಿಣೆ ನೀಡಿಲ್ಲವೆಂದು ಅತ್ತೆಯ ಕೈ ಮುರಿದು ಬೈಕ್ಗಳಿಗೆ ಬೆಂಕಿ ಹಚ್ಚಿದ ಅಳಿಯ!
ಆಕೆ ಮದುವೆಯಾಗಿ ಎಂಟು ತಿಂಗಳಾಗಿದೆ. ತವರು ಮನೆಯಿಂದ ಆಗಾಗ ದುಡ್ಡು ತರುವಂತೆ ಪತ್ನಿಯನ್ನು ಪತಿ ಪೀಡಿಸುತ್ತಿದ್ದಾನೆ. ಇದರಿಂದ ಮನನೊಂದು ಪತ್ನಿ ತವರು ಮನೆ ಸೇರಿದ್ದಾಳೆ.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜೂ.20): ಆಕೆ ಮದುವೆಯಾಗಿ ಎಂಟು ತಿಂಗಳಾಗಿದೆ. ತವರು ಮನೆಯಿಂದ ಆಗಾಗ ದುಡ್ಡು ತರುವಂತೆ ಪತ್ನಿಯನ್ನು ಪತಿ ಪೀಡಿಸುತ್ತಿದ್ದಾನೆ. ಇದರಿಂದ ಮನನೊಂದು ಪತ್ನಿ ತವರು ಮನೆ ಸೇರಿದ್ದಾಳೆ. ಹೀಗಿರುವಾಗ ನಿನ್ನೆ ರಾತ್ರಿ ಪತ್ನಿ ಮನೆಗೆ ಬಂದ ಪತಿ ಎರಡು ಬೈಕ್ ಗಳನ್ನು ಪೆಟ್ರೋಲ್ ಹಾಕಿ ಸುಟ್ಟಿದ್ದಲ್ಲದೇ ಅತ್ತೆಯ ಕೈಯನ್ನು ಮುರಿದು ಹಾಕಿದ್ದಾನೆ. ದೂರು ಕೊಟ್ರು ಪೊಲೀಸರಿಗೆ ಯಾವುದೇ ಪ್ರಯೋಜನವಾಗ್ತಿಲ್ಲ ಅಂತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
ಪತ್ನಿಗೆ ವರದಕ್ಷಿಣೆ ತರುವಂತೆ ಪತಿಯೊಬ್ಬ ಪದೇ ಪದೇ ಪೀಡಿಸುತ್ತಿದ್ದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ವರದಕ್ಷಿಣೆಗಾಗಿ ಮಾವನ ಮನೆಯವರ ಜೊತೆ ಅಳಿಯ ಜಗಳ ಮಾಡಿಕೊಂಡು ಅತ್ತೆಯ ಕೈ ಮುರಿದು ಬೈಕ್ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಚಾಮರಾಜನಗರದ ಗಾಳಿಪುರ ಬಡಾವಣೆಯಲ್ಲಿ ನಡೆದಿದೆ. ಕಳೆದ 8 ತಿಂಗಳ ಹಿಂದೆ ಗಾಳಿಪುರ ಬಡಾವಣೆಯ ಹತೀಜಾ ಖೂಬ್ರಾಳನ್ನು ಚಾಮರಾಜನಗರ ತಾಲೂಕಿನ ಸರಗೂರಿನ ಸಲ್ಮಾನ್ ಅಹಮದ್ ಷರೀಪ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು.
ಆದರೆ ಕೆಲವು ದಿನಗಳ ನಂತರ ಪತ್ನಿಗೆ ವರದಕ್ಷಿಣೆ ತರುವಂತೆ ಸಲ್ಮಾನ್ ಅಹಮದ್ ಷರೀಪ್ ದೈಹಿಕ ಹಾಗು ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಾವನ ಮನೆಯವರು ವರದಕ್ಷಿಣೆ ಕಿರುಕುಳದ ಬಗ್ಗೆ ಕೆಲ ತಿಂಗಳ ಹಿಂದೆ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದರು ಯಾವುದೇ ನ್ಯಾಯ ಸಿಗಲಿಲ್ಲ ಎಂದು ಹತೀಜಾ ಖೂಬ್ರಾ ಆರೋಪಿಸಿದ್ದಾರೆ. ಇನ್ನೂ ನಿನ್ನೆ ರಾತ್ರಿ ಪತ್ನಿಯ ಮನೆಗೆ ಬಂದಿದ್ದ ಸಲ್ಮಾನ್ ಅಹಮದ್ ಷರೀಪ್ ಹಣ ಕೊಡುವಂತೆ ಪತಿಯ ಕುಟುಂಬಸ್ಥರನ್ನು ಕೇಳಿದ್ದಾನೆ. ನಮ್ಮ ಬಳಿ ಯಾವುದೇ ಹಣವಿಲ್ಲವೆಂದು ಪತ್ನಿಯ ಮನೆಯವರು ಹೇಳುತ್ತಿದ್ದಂತೆ ಜಗಳ ತೆಗೆದು ಮನೆಯ ಮುಂದೆ ನಿಲ್ಲಿಸಲಾಗಿದ್ದ ಎರಡು ಬೈಕ್ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.
ಕರಾರಿನಂತೆ ಸಂಸ್ಕರಿಸಿದ ನೀರನ್ನು ಕೋಲಾರಕ್ಕೆ ಹರಿಸಿ: ಸಚಿವ ಬೈರತಿ ಸುರೇಶ್
ಮಾವ ಹಾಗು ಅತ್ತೆಯೊಂದಿಗೆ ಗಲಾಟೆ ಮಾಡಿದ್ದಲ್ಲದೇ ದೊಣ್ಣೆಯಲ್ಲಿ ಹೊಡೆದು ಒಂದೇ ಏಟಿಗೆ ಅತ್ತೆಯ ಕೈ ಮುರಿದಿದ್ದಾನಂತೆ. ಪದೇ ಪದೇ ಮನೆಯ ಹತ್ತಿರ ಬಂದು ಕಿರುಕುಳ ಕೊಡ್ತಿರುವ ಈತನ ವಿರುದ್ಧ ಹಿಂದೆಯೂ ದೂರು ದಾಖಲಿಸಿದ್ದು, ಪೊಲೀಸರು ಸೂಕ್ತ ಕ್ರಮ ವಹಿಸಿಲ್ಲ ಅಂತಾ ಆರೋಪ ಮಾಡ್ತಿದ್ದಾರೆ. ಒಟ್ನಲ್ಲಿ ಮದುವೆಯಾದ ಎಂಟು ತಿಂಗಳಲ್ಲಿ ಸಂಸಾರದಲ್ಲಿ ಬಿರುಕು ಮೂಡಿದ್ದು ಪತ್ನಿ ತವರು ಮನೆಗೆ ಬಂದರು, ಅಲ್ಲಿಗೂ ಬಂದ ಪತಿ ಹಣ ಕೊಡುವಂತೆ ಪೀಡಿಸುತ್ತಿದ್ದಾನೆ. ಪತಿಯ ದರ್ಪದ ಬಗ್ಗೆ ಪತ್ನಿಯೆ ದೂರು ಕೊಟ್ರು ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿ ಪೆಟ್ರೋಲ್ ತಂದು ಎರಡು ಬೈಕ್ ಬೇರೆ ಸುಟ್ಟು ಹಾಕಿದ್ದಾನೆ. ನಮ್ಮ ಪತಿಯ ಕಿರುಕುಳ ತಪ್ಪಿಸಿ ಅಂತಾ ಮನವಿ ಮಾಡಿಕೊಂಡಿದ್ದಾರೆ.