ಬೆಂಗಳೂರು [ಡಿ.14]:  ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಐಐಎಸ್‌ಸಿ ಹಿರಿಯ ತಾಂತ್ರಿಕ ಅಧಿಕಾರಿಯೊಬ್ಬರಿಗೆ 3.7 ಲಕ್ಷ ರು. ಹಣ ಪಡೆದು ಆನ್‌ಲೈನ್‌ ವಂಚಕರು ಟೋಪಿ ಹಾಕಿರುವ ಘಟನೆ ನಡೆದಿದೆ.

ಶೆಟ್ಟಿಹಳ್ಳಿಯ ಪ್ರಿನ್ಸ್‌ಟೌನ್‌ ಅಪಾರ್ಟ್‌ಮೆಂಟ್‌ ನಿವಾಸಿ ಡಾ.ವಿಜಯ್‌ ಮಿಶ್ರಾ ಹಣ ಕಳೆದುಕೊಂಡಿದ್ದು, ಕೆನಡಾದಲ್ಲಿ ಉದ್ಯೋಗದ ಆಸೆ ತೋರಿಸಿ ಕಿಡಿಗೇಡಿಗಳು ವಂಚಿಸಿದ್ದಾರೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಆರೋಪಿಗಳಾದ ಡೇವಿಡ್‌, ವಿಲಯಮ್‌ ಥಾಮಸ್‌, ಲೀಲಾ ಹಾಗೂ ತಿಂಗ್ರೇಲಾ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಡಾ.ವಿಜಯ್‌ ಮಿಶ್ರಾ ಅವರು ಮಲ್ಲೇಶ್ವರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮುಖ್ಯ ತಾಂತ್ರಿಕ ಅಧಿಕಾರಿ ಆಗಿದ್ದು, ತಮ್ಮ ಕುಟುಂಬದ ಜತೆ ಶೆಟ್ಟಿಹಳ್ಳಿಯಲ್ಲಿ ನೆಲೆಸಿದ್ದಾರೆ. ಮೊದಲಿನಿಂದಲೂ ಕೆನಡಾದಲ್ಲಿ ಸಂಶೋಧನೆ ಕೆಲಸ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದರು. ಇದಕ್ಕಾಗಿ ಹಲವು ಕಡೆಗೆ ಅವರು ಅರ್ಜಿ ಸಲ್ಲಿಸಿ ಪ್ರಯತ್ನಿಸಿದ್ದರು. ಈ ವಿಚಾರ ತಿಳಿದ ಡೇವಿಡ್‌ ಎಂಬಾತ, ಕೆಲ ದಿನಗಳ ಹಿಂದೆ ಮಿಶ್ರಾ ಅವರಿಗೆ ಇ-ಮೇಲ್‌ ಮೂಲಕ ಸಂಪರ್ಕಿಸಿದ್ದಾನೆ. ‘ಕೆನಡಾದಲ್ಲಿ ಕಂಪನಿ ಹೊಂದಿದ್ದು, ನಮ್ಮ ಸಂಸ್ಥೆಯಲ್ಲಿ ನಿಮಗೆ ಉದ್ಯೋಗ ನೀಡಲು ಇಚ್ಚಿಸಿದ್ದೇನೆ. ಹಾಗೆಯೇ ಉತ್ತಮ ವೇತನ ಸೇರಿದಂತೆ ಸಕಲ ಸೌಲಭ್ಯ’ಗಳನ್ನು ಕಲ್ಪಿಸುವುದಾಗಿ ಆಫರ್‌ ನೀಡಿದ್ದ. ಈ ಪ್ರಸ್ತಾವನೆಯಿಂದ ಮಿಶ್ರ ಖುಷಿಗೊಂಡಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಗ ಡೇವಿಡ್‌, ನೀವು ವೀಸಾ ಪಡೆಯಲು ದೆಹಲಿಯಲ್ಲಿ ಕೆನಡಾ ರಾಯಭಾರಿ ಕಚೇರಿಯ ಅಧಿಕಾರಿ ವಿಲಿಯಮ್‌ನನ್ನು ಸಂಪರ್ಕಿಸುವಂತೆ ಸೂಚಿಸಿದ್ದ. ಇದಾದ ಎರಡು ದಿನಗಳ ಬಳಿಕ ವಿಲಿಯಮ್‌ನಿಂದ ಮಿಶ್ರಾ ಅವರಿಗೆ ಇ-ಮೇಲ್‌ ಬಂದಿತ್ತು. ಆಗ ತನ್ನ ರಾಯಭಾರಿ ಕಚೇರಿ ಅಧಿಕಾರಿ ಎಂದು ಪರಿಚಯಿಸಿಕೊಂಡ ಆತ, ವೀಸಾ ಪಡೆಯಲು ಸಹಾಯ ಮಾಡುತ್ತೇನೆ ಎಂದಿದ್ದ. ಇದಕ್ಕಾಗಿ ಶುಲ್ಕ ರೂಪದಲ್ಲಿ .3.7 ಲಕ್ಷ ಪಾವತಿಸಬೇಕಿದೆ ಎಂದ ವಿಲಿಯಮ್‌, ಹಣ ಜಮಾವಣೆಗೆ ಬ್ಯಾಂಕ್‌ ಖಾತೆಯ ವಿವರನ್ನು ನೀಡಿದ್ದ. ಈ ಮಾತು ನಂಬಿದ ಮಿಶ್ರಾ ಅವರು, ವಿಲಿಯಮ್‌ ಸೂಚನೆ ಮೇರೆಗೆ ಲೀಲಾ ಎಂಬಾಕೆಯ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಹಣ ಸಂದಾಯದ ಬಳಿಕ ಆರೋಪಿಗಳು ಸಂಪರ್ಕ ಕಡಿದುಕೊಂಡಿದ್ದಾರೆ. ಕೊನೆಗೆ ತಾವು ವಂಚನೆಗೊಳಗಾಗಿರುವುದರಿತ ಮಿಶ್ರಾ ಅವರು, ಕೆನಡಾದಲ್ಲಿ ಉದ್ಯೋಗದ ಆಸೆ ತೋರಿಸ ಹಣ ಪಡೆದು ಮೋಸ ಮಾಡಿರುವ ಆರೋಪಿಗಳು ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಬಾಗಲಗುಂಟೆ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.