* ಜ್ಯುಬಿಲಿ ಹಿಲ್ಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ* ಆರೋಪಿಗಳ ಬಳಿ ಕಾಂಡೋಮ್ ಪತ್ತೆ* ಹೈದರಾಬಾದ್ ಗ್ಯಾಂಗ್ ರೇಪ್ ಯೋಜಿತ ಕೃತ್ಯ?
ಹೈದರಾಬಾದ್(ಜೂ.14): ಇಲ್ಲಿನ ಜ್ಯುಬಿಲಿ ಹಿಲ್ಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಪೂರ್ವ ನಿಯೋಜಿತ ಕೃತ್ಯವಾಗಿತ್ತು ಎಂದು ಪ್ರಾಥಮಿಕ ಸಾಕ್ಷಿಗಳಿಂದ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಬಳಿ ಕಾಂಡೋಮ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಅಪ್ರಾಪ್ತರು ಮತ್ತು ಓರ್ವ ವಯಸ್ಕ ಸೇರಿದಂತೆ ಈ ಪ್ರಕರಣದ 5 ಆರೋಪಿಗಳು ಅತ್ಯಾಚಾರ ಎಸಗುವ ಮೊದಲು ಕಾಂಡೋಮ್ ಬಳಕೆ ಮಾಡಿದ್ದರು. ಹಾಗಾಗಿ ಇದೊಂದು ಪೂರ್ವ ಯೋಜಿತ ಕೃತ್ಯದಂತೆ ಕಾಣುತ್ತದೆ. ಆದರೆ ಆರೋಪಿಗಳು ಕಾಂಡೋಮ್ ಅನ್ನು ಪಬ್‌ಗೆ ಹೋಗುವ ಮೊದಲೇ ಖರೀದಿಸಿದ್ದರಾ ಅಥವಾ ಮಾರ್ಗಮಧ್ಯದಲ್ಲಿ ಖರೀಸಿದ್ದಾ ಎಂಬುದರ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಎಲ್ಲಾ ಆರೋಪಿಗಳ ಫೋನ್ ರೆಕಾರ್ಡ್‌ಗಳನ್ನು ಸಂಗ್ರಹಿಸಲಾಗಿದೆ. ಇದರ ಆಧಾರದ ಮೇಲೆ ಆರೋಪಿಗಳನ್ನು ಮತ್ತೊಮ್ಮೆ ವಿಚಾರಣೆ ನಡೆಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರದಲ್ಲಿ ಭಾಗಿಯಾಗದ ಅಪ್ರಾಪ್ತ ಆರೋಪಿ ಸೇರಿದಂತೆ 6 ಆರೋಪಿಗಳನ್ನು ಪೊಲೀಸರು ಭಾನುವಾರ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಅಪರಾಧ ಕೃತ್ಯವನ್ನು ಮರುಸೃಷ್ಟಿಸಿದ್ದಾರೆ. ಈ ಮೂಲಕ ಘಟನೆಯ ಪ್ರಸಂಗದ ಎಳೆಗಳನ್ನು ತನಿಖೆ ನಡೆಸಿದ್ದಾರೆ. ವಿಚಾರಣೆ ವೇಳೆ ಬಾಲಕಿಯ ಸ್ನೇಹಪರತೆಯ ಲಾಭ ಪಡೆದು ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಕಳೆದ ಶನಿವಾರ ಅಪ್ತಾಪ್ತೆ ತನ್ನ ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದರು. ಆದರೆ ಸ್ನೇಹಿತ ಬೇಗನೆ ತೆರಳಿದ ಬಳಿಕ ಪಬ್‌ನಲ್ಲಿ ಯುವತಿಗೆ ಕೆಲ ಯುವಕರ ಪರಿಚಯವಾಗಿದೆ. ಅವರು ಆಕೆಗೆ ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿ ಕಾರಿನಲ್ಲಿ ಕರೆದೊಯಿದ್ದಾರೆ. ಹೀಗೆ ಪಬ್‌ನಿಂದ ಹೊರಟ ನಾಲ್ವರು, ನಗರದ ಐಷಾರಾಮಿ ಪ್ರದೇಶವಾದ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಕಾರನ್ನು ಪಾರ್ಕ್ ಮಾಡಿ ಅಲ್ಲೇ, ಒಬ್ಬರಾದ ಮೇಲೆ ಒಬ್ಬರಂತೆ ಅತ್ಯಾಚಾರ ಮಾಡಿ, ಬಳಿಕ ಆಕೆಯನ್ನು ಪಬ್ ಬಳಿ ಇಳಿಸಿ ಪರಾರಿಯಾಗಿದ್ದಾರೆ.
ಬಳಿಕ ಬಾಲಕಿ ತನ್ನ ತಂದೆಗೆ ಕರೆ ಮಾಡಿ ಅವರ ವಾಹನದಲ್ಲಿ ಮನೆಗೆ ತೆರಳಿದ್ದಾಳೆ. ಈ ವೇಳೆ ಪುತ್ರಿಯ ಮೈ ಮೇಲಿನ ಗಾಯದ ಬಗ್ಗೆ ತಂದೆ ಪ್ರಶ್ನಿಸಿದಾಗ, ಆಕೆ ಕೆಲ ಯುವಕರು ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಬಾಲಕಿ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ವೇಳೆ ಮಹಿಳಾ ಅಧಿಕಾರಿ ಬಳಿ, ಬಾಲಕಿ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಸಂಪೂರ್ಣ ಮಾಹಿತಿ ನೀಡಿದ್ದಾಳೆ. ಅನಂತರ ಸರಣಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
