ಬಸವನಗುಡಿ ನಿವಾಸಿ ಕಮ್ರಾನ್‌ ಖಾನ್‌ ನೀಡಿದ ದೂರಿನ ಮೇರೆಗೆ ಆತನ ಪತ್ನಿ ಆಯೇಷಾ ಫರೀನ್‌, ಮಾವ ಆರೀಫ್‌ ಪಾಷಾ, ಅತ್ತೆ ಹೀನಾ ಕೌಸರ್‌, ಬಾವಮೈದುನಾ ಮೊಹಮ್ಮದ್‌ ಮೋಯಿನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡ ಅಧಿಕಾರಿಗಳು. 

ಬೆಂಗಳೂರು(ಮಾ.14):  ಪತ್ನಿ ರಾತ್ರಿ ಮಲಗಿ ಮಾರನೇ ದಿನ ಮಧ್ಯಾಹ್ನ ಏಳುತ್ತಾಳೆ. ಅಡುಗೆ ಮಾಡು ಎಂದರೆ ಜಗಳ ಮಾಡುತ್ತಾಳೆ. ಕಳೆದ ಐದು ವರ್ಷದಿಂದ ನರಕಯಾತನೆಗೆ ಕಾರಣರಾದ ಪತ್ನಿ ಹಾಗೂ ಆಕೆಯ ತವರು ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವ್ಯಕ್ತಿಯೊಬ್ಬರು ಬಸವನಗುಡಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಸವನಗುಡಿ ನಿವಾಸಿ ಕಮ್ರಾನ್‌ ಖಾನ್‌(39) ನೀಡಿದ ದೂರಿನ ಮೇರೆಗೆ ಆತನ ಪತ್ನಿ ಆಯೇಷಾ ಫರೀನ್‌, ಮಾವ ಆರೀಫ್‌ ಪಾಷಾ, ಅತ್ತೆ ಹೀನಾ ಕೌಸರ್‌, ಬಾವಮೈದುನಾ ಮೊಹಮ್ಮದ್‌ ಮೋಯಿನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

‘ಇಲಿಯಾಜ್‌ ನಗರದ ಆಯೇಷಾ ಫರೀನ್‌ನನ್ನು 2017ರಲ್ಲಿ ಇಸ್ಲಾಂ ಧರ್ಮದ ಪ್ರಕಾರ ಮದುವೆಯಾಗಿದ್ದೇನೆ. ಈಕೆ ಅನಾರೋಗ್ಯ ಕಾರಣ ಹೇಳಿಕೊಂಡು ರಾತ್ರಿ ಮಲಗಿದರೆ ಮಾರನೇ ದಿನ ಮಧ್ಯಾಹ್ನ 12ಕ್ಕೆ ಏಳುತ್ತಾಳೆ. ಆಕೆಗೆ ಟೈಫಾಯಿಡ್‌, ಥೈರಾಯಿಡ್‌, ಕಣ್ಣಿಗೆ ಸಂಬಂಧಿಸಿದ ಖಾಯಿಲೆಗಳು ಇದ್ದು, ಮದುವೆ ಸಮಯದಲ್ಲಿ ಈ ಬಗ್ಗೆ ನನಗೆ ತಿಳಿಸಿಲ್ಲ. ನಾನು ಪ್ರತಿ ದಿನ ಕಚೇರಿಗೆ ಹೋಗುವಾಗ ನನ್ನ ತಾಯಿ ಅಡುಗೆ ಮಾಡಿಕೊಡುತ್ತಾರೆ. ಮಧ್ಯಾಹ್ನ ನಿದ್ದೆಯಿಂದ ಎದ್ದೇಳುವ ಪತ್ನಿ ಸಂಜೆವರೆಗೂ ಕಾಲಾಹರಣ ಮಾಡಿ ಸಂಜೆ 5ಕ್ಕೆ ಮತ್ತೆ ಮಲಗುತ್ತಾಳೆ. ರಾತ್ರಿ 9.30ಕ್ಕೆ ಎದ್ದು ಊಟ ಮಾಡಿ ಮತ್ತೆ ಮಲಗುತ್ತಾಳೆ’ ಎಂದು ದೂರುದಾರ ಕಮ್ರಾನ್‌ ಖಾನ್‌ ಆರೋಪಿಸಿದ್ದಾರೆ.

ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

ಬೆದರಿಕೆ, ಹಲ್ಲೆ

‘ಪತ್ನಿ ಆಯೇಷಾ ಹುಷಾರಿಲ್ಲ ಎಂದು ತವರು ಮನೆಗೆ ಹೋಗುತ್ತೇನೆ ಎನ್ನುತ್ತಾಳೆ. ನಾನೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದರೂ ಕೇಳುವುದಿಲ್ಲ. ನೀನು ನನ್ನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ನನ್ನ ಫ್ಯಾಮಿಲಿ ಬಗ್ಗೆ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕುತ್ತಾಳೆ. ಒಮ್ಮೆ ತವರು ಮನೆಗೆ ಹೋಗಿ 20 ದಿನ ವಾಪಾಸ್‌ ಬಂದಿರಲಿಲ್ಲ. ಕಳೆದ ಅಕ್ಟೋಬರ್‌ 6ರಂದು ತವರು ಮನೆಗೆ ಹೋಗುತ್ತೇನೆ ಎಂದಾಗ, ಎರಡು ದಿನದಲ್ಲಿ ಹಬ್ಬ ಇರುವುದರಿಂದ ಮುಗಿಸಿಕೊಂಡು ಬಳಿಕ ಹೋಗು ಎಂದೆ. ಅಷ್ಟೇ ಆಕೆ ಅಂದು ರಾತ್ರಿ ಸುಮಾರು 25 ಜನರನ್ನು ಮನೆಗೆ ಕರೆಸಿ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಮೇಲೆ ಹಲ್ಲೆ ಮಾಡಿಸಿದ್ದಳು. ಮನೆಯ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿದ್ದರು’ ಎಂದು ದೂರಿದ್ದಾರೆ.

ಬಾಯ್‌ಫ್ರೆಂಡ್‌ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್‌, ರೂಮ್‌ಅಲ್ಲಿ ಆಗಿದ್ದೇನು?

ಐಷಾರಾಮಿ ಜೀವನ ಬಯಕೆ

‘ನನ್ನ ತಾಯಿ ಪಾರ್ಕಿನ್‌ ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಡುಗೆ ಮಾಡುವಂತೆ ಪತ್ನಿಗೆ ಹೇಳಿದರೆ, ಆಕೆ ಯಾವುದೇ ಕೆಲಸ ಮಾಡದೆ ಜಗಳ ತೆಗೆಯುತ್ತಾಳೆ. ನಾನು ಆಕೆಗೆ ಏನಾದರೂ ಕೆಲಸ ಹೇಳಿದರೆ, ನನ್ನ ಮೇಲೆ ಇಲ್ಲ ಸಲ್ಲದ ಕಾರಣ ಹೇಳಿ ಕೂಗಾಡುತ್ತಾಳೆ. ಪೊಲೀಸ್‌ ಠಾಣೆಗೆ ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾಳೆ. ಆಕೆ ನನ್ನಿಂದ ಹಣ ಹಾಗೂ ಆಸ್ತಿ ಲಪಟಾಯಿಸುವ ಉದ್ದೇಶದಿಂದ ನನ್ನನ್ನು ಮದುವೆಯಾಗಿದ್ದಾಳೆ. ಆಕೆ ಸದಾ ರಾಯಲ್‌ ಲೈಫ್‌ ಲೀಡ್‌ ಮಾಡಲು ಯೋಚಿಸುತ್ತಾಳೆ’ ಎಂದು ಪತಿ ಆರೋಪಿಸಿದ್ದಾರೆ.

5 ವರ್ಷದಿಂದ ಜೀವನ ನರಕ

‘ಪತ್ನಿಗೆ ನನ್ನ ಬಗ್ಗೆ ಯಾವುದೇ ಅನುಕಂಪ, ಮಮತೆ ಇಲ್ಲ. ಆಕೆಯ ಮನೆಯವರು ನನ್ನಿಂದ ಹಣ ಪಡೆದುಕೊಳ್ಳುವ ದುರುದ್ದೇಶದಿಂದ ಆಕೆಯನ್ನು ನನಗೆ ಮದುವೆ ಮಾಡಿಕೊಟ್ಟು ನನ್ನ ಜೀವನವನ್ನು ನರಕಯಾತನೆ ಮಾಡಿದ್ದಾರೆ. ಹೀಗಾಗಿ ನನ್ನ ಪತ್ನಿ ಹಾಗೂ ಆಕೆಯ ತವರು ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ’ ಎಂದು ಸಂತ್ರಸ್ತ ಕಮ್ರಾನ್‌ ಖಾನ್‌ ದೂರಿನಲ್ಲಿ ಕೋರಿದ್ದಾರೆ. ಈ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಬಸವನಗುಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.