ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಪತಿಯಿಂದ ಪತ್ನಿ ಮತ್ತು ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿ-ಮಗಳು.

ಹುಬ್ಬಳ್ಳಿ (ಜು.22): ಕೌಟುಂಬಿಕ ಕಲಹ ಹಿನ್ನೆಲೆ ವಿವಾಹ ವಿಚ್ಛೇದನಕ್ಕಾಗಿ ಸವದತ್ತಿ ಕೋರ್ಟ್‌ಗೆ ಬಂದಿದ್ದ ವೇಳೆ ಪತ್ನಿ, ಅತ್ತೆಯ ಮೇಲೆ ವ್ಯಕ್ತಿಯೊಬ್ಬ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪತ್ನಿ ಐಶ್ವರ್ಯ ಗಣಾಚಾರಿ (25) ಮತ್ತು ತಾಯಿ ಅನಸೂಯಾ (48) ಅವರ ಮೇಲೆ ಐಶ್ವರ್ಯ ಅವರ ಪತಿ ಮಾರಕಾಸ್ತ್ರವಾದ ಮಚ್ಚಿನಿಂದ ಮಾರಣಾಂತಿಕವಾಗಿ ಪತಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡ ತಾಯಿ-ಮಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಘಟನೆಯ ವಿವರ:

ಕಳೆದ ಒಂದು ವರ್ಷದ ಹಿಂದೆ ಐಶ್ವರ್ಯ ಮತ್ತು ಆಕೆಯ ಪತಿಯ ಮದುವೆಯಾಗಿತ್ತು. ಆದರೆ, ಕೌಟುಂಬಿಕ ಕಲಹದಿಂದ ದಂಪತಿಯ ನಡುವೆ ಬಿರುಕು ಉಂಟಾಗಿ, ಐಶ್ವರ್ಯ ವಿಚ್ಛೇದನಕ್ಕಾಗಿ ಸವದತ್ತಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನದ ಜೊತೆಗೆ ಮದುವೆ ಖರ್ಚಿನ 3.5 ಲಕ್ಷ ರೂಪಾಯಿಗಳನ್ನು ಪತಿಗೆ ಮರಳಿಸಲು ಐಶ್ವರ್ಯ ಕುಟುಂಬ ಸಿದ್ಧವಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

ಕೋರ್ಟ್‌ನಲ್ಲೇ ಏಕಾಏಕಿ ಹಲ್ಲೆ:

ವಿಚಾರಣೆಗಾಗಿ ಕೋರ್ಟ್‌ಗೆ ಆಗಮಿಸಿದ್ದ ವೇಳೆ, ಐಶ್ವರ್ಯ ಅವರ ಪತಿ ಏಕಾಏಕಿ ಮಚ್ಚಿನಿಂದ ಆಕೆಯ ತಲೆ ಮತ್ತು ಕೈ ಬೆರಳುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಡೆಯಲು ಮುಂದಾದ ಐಶ್ವರ್ಯ ಅವರ ತಾಯಿ ಅನಸೂಯಾ ಅವರ ತಲೆಗೂ ಗಂಭೀರವಾಗಿ ಹೊಡೆದಿದ್ದಾನೆ. ಈ ದಾಳಿಯಿಂದ ಐಶ್ವರ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಅನಸೂಯಾ ಅವರಿಗೂ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಕುಟುಂಬಸ್ಥರು ತಕ್ಷಣವೇ ಸವದತ್ತಿಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದ್ದಾರೆ.

ಕಠಿಣ ಶಿಕ್ಷೆಗೆ ಕುಟುಂಬಸ್ಥರು ಆಗ್ರಹ:

ಐಶ್ವರ್ಯ ಅವರ ದೊಡ್ಡಮ್ಮ ಸ್ವರ್ಣ, ಕಿಮ್ಸ್ ಆಸ್ಪತ್ರೆಯಲ್ಲಿ ಘಟನೆ ಬಗ್ಗೆ ಮಾತನಾಡಿ, 'ಕೋರ್ಟ್ ಆವರಣದಂತಹ ಸ್ಥಳದಲ್ಲಿ ಮಾರಕಾಸ್ತ್ರವನ್ನು ಹೇಗೆ ತಂದಿದ್ದಾನೆಂದು ಗೊತ್ತಿಲ್ಲ. ಯಾರ ಭಯವೂ ಇಲ್ಲದಂತೆ ಐಶ್ವರ್ಯ ಮತ್ತು ಅನಸೂಯಾ ಅವರ ಮೇಲೆ ದಾಳಿ ನಡೆಸಿದ್ದಾನೆ. ಇಂತಹ ಕೃತ್ಯಕ್ಕೆ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಶಿಕ್ಷೆಯಾಗಬೇಕು' ಎಂದು ಒತ್ತಾಯಿಸಿದ್ದಾರೆ.

ಪೊಲೀಸರಿಂದ ತನಿಖೆ ಆರಂಭ

ಈ ಘಟನೆ ಕುರಿತು ಸವದತ್ತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಕೋರ್ಟ್ ಆವರಣದಂತಹ ಸೂಕ್ಷ್ಮ ಸ್ಥಳದಲ್ಲಿ ಮಾರಕಾಸ್ತ್ರದೊಂದಿಗೆ ದಾಳಿ ನಡೆಸಿದ್ದು ಹೇಗೆ ಎಂಬುದರ ಕುರಿತು ತೀವ್ರ ತನಿಖೆ ನಡೆಸಲಾಗುತ್ತಿದೆ. ಗಾಯಾಳು ಐಶ್ವರ್ಯ ಮತ್ತು ಅನಸೂಯಾ ಚಿಕಿತ್ಸೆ ಪಡೆಯುತ್ತಿದ್ದಾರೆ.