*  ನಿರುದ್ಯೋಗಿಗಳಿಗೆ ಕಮಿಷನ್‌ ಆಸೆ ತೋರಿಸಿ ವ್ಯವಹಾರ*  ಕಿಂಗ್‌ಪಿನ್‌ಗಾಗಿ ಹುಡುಕಾಟ*  ಕೇರಳ ಮೂಲದ ನಾಲ್ವರು ಆರೋಪಿಗಳ ಸೆರೆ 

ಬೆಂಗಳೂರು(ಡಿ.03): ಬಹುಕೋಟಿ ಮೊತ್ತದ ಹವಾಲ ಜಾಲ(Hawala Racket) ಭೇದಿಸಿರುವ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳ(Kerala) ಮೂಲದ ಮಹಮದ್‌ ಸಾಹೀಲ್‌, ಫೈಸಲ್‌, ಫಜಲ್‌ ಹಾಗೂ ಅಬ್ದುಲ್‌ ಮನಾಸ್‌ ಬಂಧಿತರು(Arrest). ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ 25 ಬ್ಯಾಂಕ್‌ಗಳ(Banks) 2,656 ಖಾತೆಗಳಿಗೆ ನೂರಾರು ಕೋಟಿ ರೂಪಾಯಿ ಪಾವತಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರಿಂದ 21 ಲಕ್ಷ ನಗದು ಹಾಗೂ ಬ್ಯಾಂಕ್‌ ಖಾತೆಗಳ ವಿವರ ಜಪ್ತಿ ಮಾಡಲಾಗಿದೆ. ಈ ಜಾಲದ ಪ್ರಮುಖ ಕಿಂಗ್‌ಪಿನ್‌(Kingpin) ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

ಬಂಧಿತ ನಾಲ್ವರು ಆರೋಪಿಗಳ ಪೈಕಿ ಮೂವರು ಗಲ್ಫ್‌ನಲ್ಲಿ(Gulf) ಕೆಲಸ ಮಾಡುತ್ತಿದ್ದು, ಕೊರೋನಾ(Coronavirus) ಸಮಯದಲ್ಲಿ ಭಾರತಕ್ಕೆ(India) ವಾಪಸಾಗಿದ್ದರು. ಒಂದೂವರೆ ವರ್ಷದಿಂದ ನಿರುದ್ಯೋಗಿಗಳಾಗಿದ್ದ ಆರೋಪಿಗಳಿಗೆ ಹವಾಲ ದಂಧೆಕೋರರ ಪರಿಚಯವಾಗಿದೆ. ಬಳಿಕ ಆರೋಪಿಗಳು ನಗರದ ಜೆ.ಪಿ.ನಗರದ 6ನೇ ಹಂತದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿ ಈ ದಂಧೆ ಮುಂದುವರಿಸಿದ್ದರು.

ATM Robbery: ದರೋಡೆಗೆ ಲವರ್‌ ಸ್ಕೆಚ್‌, ಎಟಿಎಂ ಪಾಸ್‌ವರ್ಡ್‌ ನೀಡಿದ ಪ್ರೇಯಸಿ..!

ದಂಧೆಯ ಕಿಂಗ್‌ಪಿನ್‌ ಕಳುಹಿಸುತ್ತಿದ್ದ ಸ್ಥಳಕ್ಕೆ ಆರೋಪಿಗಳು(Accused) ತೆರಳುತ್ತಿದ್ದರು. ಬಳಿಕ ಕಿಂಗ್‌ಪಿನ್‌ ಕರೆ ಮಾಡಿ ಅಪರಿಚಿತ ವ್ಯಕ್ತಿಯ ಗುರುತು ಹೇಳುತ್ತಿದ್ದ. ಅಪರಿಚಿತ ಆರೋಪಿಗಳಿಗೆ 20 ಲಕ್ಷದಿಂದ 30 ಲಕ್ಷದ ರಟ್ಟಿನ ಬಾಕ್ಸ್‌ ಕೊಡುತ್ತಿದ್ದ. ಬಳಿಕ ಯಾವ ಖಾತೆಗೆ ಜಮೆಯಾಗಬೇಕು ಎಂಬ ವಿವರಗಳನ್ನು ತಲುಪಿಸುತ್ತಿದ್ದ. ಅದರಂತೆ ಆರೋಪಿಗಳು ಬ್ಯಾಂಕ್‌ಗಳ ನಗದು ಜಮೆ ಯಂತ್ರ(ಸಿಡಿಎಂ)ದಲ್ಲಿ 20 ಸಾವಿರದಿಂದ 50 ಸಾವಿರ ಜಮೆ ಮಾಡುತ್ತಿದ್ದರು. ಬಹುತೇಕ ಖಾತೆಗಳು ಕೇರಳ ಮೂಲದ ವ್ಯಾಪಾರಸ್ಥರಿಗೆ ಸೇರಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮಾಸಿಕ 60 ಸಾವಿರ ಕಮಿಷನ್‌:

ಈ ಕೆಲಸ ಮಾಡಲು ಬಾಸ್‌ ಮಾಸಿಕ ತಲಾ 60 ಸಾವಿರ ಕಮಿಷನ್‌ ಕೊಡುತ್ತಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಕಿಂಗ್‌ಪಿನ್‌ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ದಂಧೆಯ ಹಿಂದೆ ಸಂಘಟಿತ ಜಾಲವೊಂದು ಕಾರ್ಯ ನಿರ್ವಹಿಸುತ್ತಿರುವ ಅನುಮಾನವಿದೆ. ಆರೋಪಿಗಳು ಹೇಳುತ್ತಿರುವ ಕಿಂಗ್‌ಪಿನ್‌ ಮಾತ್ರವಲ್ಲದೆ ಇನ್ನೂ ಹಲವರು ಈ ದಂಧೆಯ ಹಿಂದೆ ಇರುವ ಶಂಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Crime News: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್​, ಪಾಠ ಮಾಡೋ ಪೋಲಿ ಶಿಕ್ಷಕನ ಪುರಾಣ ಬಯಲು

3 ತಿಂಗಳಲ್ಲಿ 185 ಖಾತೆಗೆ 31 ಕೋಟಿ ಜಮೆ!

ಆರೋಪಿಗಳು ತಂಗಿದ್ದ ಜೆ.ಪಿ.ನಗರ ಬಾಡಿಗೆ ಮನೆಯಲ್ಲಿ ಸಿಡಿಎಂ ಯಂತ್ರದಲ್ಲಿ ಹಣ ಪಾವತಿಸಿ ಪಡೆದಿರುವ ಚೀಟಿಗಳ ಬಂಡಲ್‌ ಸಿಕ್ಕಿವೆ. ಈ ಚೀಟಿಗಳ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 185 ಖಾತೆಗಳಿಗೆ ಬರೋಬ್ಬರಿ .31 ಕೋಟಿ ಜಮೆ ಮಾಡಲಾಗಿದೆ. ಇದಕ್ಕೂ ಮುನ್ನ ಜಮೆ ಮಾಡಿದ ಹಣದ ಚೀಟಿಗಳನ್ನು ಸುಟ್ಟಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ. ಅರೆಬರೆ ಸುಟ್ಟಿರುವ ಚೀಟಿಗಳನ್ನು ಸಂಗ್ರಹಿಸಿ ಪರಿಶೀಲಿಸಿದಾಗ 25 ವಿವಿಧ ಬ್ಯಾಂಕ್‌ಗಳ 2,656 ಖಾತೆಗಳ ವಿವರ ಸಿಕ್ಕಿದೆ. ಇದರ ಆಧಾರದ ಮೇಲೆ ಸಂಬಂಧಪಟ್ಟ ಬ್ಯಾಂಕ್‌ಗಳಿಂದ ಸ್ಟೇಟ್‌ಮೆಂಟ್‌(Bank Statment) ಕೇಳಿದ್ದು, ಈವರೆಗೆ 185 ಖಾತೆಗಳ ಮೂರು ತಿಂಗಳ ಸ್ಟೇಟ್‌ಮೆಂಟ್‌ ಬಂದಿದೆ. ಇದರ ಅನ್ವಯ .31 ಕೋಟಿ ಹವಾಲಾ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ. ಇನ್ನೂ 2,471 ಖಾತೆಗಳ ಸ್ಟೇಟ್‌ಮೆಂಟ್‌ ಬಾಕಿಯಿದ್ದು, ಹವಾಲಾ ಮೊತ್ತ ಸಾವಿರಾರು ಕೋಟಿ ರುಪಾಯಿ ದಾಟಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಚ್ಚು ಬೀಸಿ ಸಿಕ್ಕಿಬಿದ್ದ

ಆರೋಪಿ ಮಹಮದ್‌ ಸಾಹೀಲ್‌ ಅಕ್ಟೋಬರ್‌ 21ರ ಬೆಳಗ್ಗೆ 10ರಲ್ಲಿ ಜೆ.ಪಿ.ನಗರ 6ನೇ ಹಂತ ಜರಗನಹಳ್ಳಿಯ 16ನೇ ಕ್ರಾಸ್‌ ಸಮೀಪದ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂ ಬೂತ್‌ ಒಳಗೆ ಬೆನ್ನಿಗೆ ಬ್ಯಾಗ್‌ ಹಾಕಿಕೊಂಡು ನಿಂತಿದ್ದ. ಈ ವೇಳೆ ವ್ಯಕ್ತಿಯೊಬ್ಬರು ಎಟಿಎಂ ಯಂತ್ರ ಬಳಿ ನಿಂತಿದ್ದ ಸಹೀಲ್‌ ಬಗ್ಗೆ ಅನುಮಾನಗೊಂಡಿದ್ದಾರೆ. ಬಳಿಕ ಒಳಗೆ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿ ಸಾಹೀಲ್‌ ಗಾಬರಿಗೊಂಡಿದ್ದು, ಆ ವ್ಯಕ್ತಿಗೆ ಹಣ ಕೊಡಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಅನುಮಾನಗೊಂಡ ಆ ವ್ಯಕ್ತಿ, ಅಕ್ಕಪಕ್ಕದವರನ್ನು ಕರೆದಿದ್ದಾರೆ. ಇದರಿಂದ ವಿಚಲಿತನಾದ ಸಾಹೀಲ್‌ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಬೆನ್ನಟ್ಟಿದ ಜನರು ಆತನನ್ನು ಹಿಡಿಯಲು ಮುಂದಾದಾಗ ಬ್ಯಾಗ್‌ನಿಂದ ಮಚ್ಚು ತೆಗೆದು ಹಲ್ಲೆಗೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು(Police), ಆರೋಪಿಯನ್ನು ವಶಕ್ಕೆ ಪಡೆದು ಬ್ಯಾಗ್‌ ಪರಿಶೀಲಿಸಿದಾಗ .1 ಲಕ್ಷ ನಗದು ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ. ಬಳಿಕ ವಿಚಾರಣೆಗೆ ಒಳಪಡಿಸಿದಾಗ ದಂಧೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ.