Asianet Suvarna News Asianet Suvarna News

ಮಂಗ್ಳೂರು ಬಾಂಬರ್‌ ಬಳಿ ಇದ್ದ ಭಾರೀ ಸ್ಫೋಟಕ ಕಂಡು ದಂಗಾದ ಪೊಲೀಸರು..!

ಮೈಸೂರಿನ ಬಾಡಿಗೆ ಮನೆಯಿಂದ ಭಾರೀ ಸ್ಫೋಟಕ ದಾಸ್ತಾನು ವಶಕ್ಕೆ ಪಡೆದ ಪೊಲೀಸರು, ಕೆಲವು ಆನ್‌ಲೈನ್‌ನಲ್ಲಿ, ಕೆಲವು ಸ್ಥಳೀಯ ಅಂಗಡಿಗಳಿಂದ ಖರೀದಿ: ಎಡಿಜಿಪಿ ಅಲೋಕ್‌

Huge Stock of Explosives Found with the Suspected Terrorist of Mangaluru Blast grg
Author
First Published Nov 22, 2022, 6:45 AM IST

ಮಂಗಳೂರು(ನ.22):  ನಗರದ ನಾಗುರಿ ಸಮೀಪ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದ ಶಂಕಿತ ಉಗ್ರನ ಬಳಿ ಭಾರೀ ಪ್ರಮಾಣದ ಸ್ಫೋಟಕಗಳ ದಾಸ್ತಾನು ಪತ್ತೆಯಾಗಿದೆ. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೈಸೂರಿನಲ್ಲಿ ಈತ ವಾಸವಿದ್ದ ಬಾಡಿಗೆ ರೂಮ್‌ಗೆ ತೆರಳಿದ ಪೊಲೀಸರು ಅಲ್ಲಿದ್ದ ಸ್ಫೋಟಕ ಸಾಮಗ್ರಿಗಳನ್ನು ಕಂಡು ದಂಗಾಗಿದ್ದಾರೆ. ಸಲ್ಪೆಕ್ಸ್‌ ಸಲ್ಫರ್‌ ಪೌಡರ್‌, ನಟ್‌ ಬೋಲ್ಟ್‌ಗಳು, ಸ್ಫೋಟಕಕ್ಕೆ ಬಳಸುವ ಸಲ್ಫರ್‌, ಆಟಿಕೆ ಎಕೆ-47, ರಂಜಕ ಸೇರಿದಂತೆ ಸ್ಫೋಟಕ್ಕೆ ಬಳಸುವ ಅಪಾರ ಪ್ರಮಾಣದ ಸಾಮಗ್ರಿಗಳು, ಕೆಮಿಕಲ್‌ಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಕೆಲವನ್ನು ಆತ ಆನ್‌ಲೈನ್‌ನಲ್ಲಿ ಖರೀದಿಸಿದ್ದರೆ, ಉಳಿದವುಗಳನ್ನು ಸ್ಥಳೀಯ ಅಂಗಡಿಗಳಿಂದ ಖರೀದಿಸಿದ್ದ. ಬೆಂಕಿಕಡ್ಡಿಯ ಮದ್ದನ್ನು ಸ್ಫೋಟಕಕ್ಕೆ ಕಚ್ಚಾವಸ್ತುವಾಗಿ ಬಳಸುವ ಪ್ಲ್ಯಾನ್‌ ಮಾಡಿಕೊಂಡಿದ್ದ ಎಂಬುದು ತನಿಖೆ ವೇಳೆ ಕಂಡು ಬಂದಿದೆ.

ಪೊಲೀಸರಿಂದ ಶಂಕಿತ ಉಗ್ರ ಶಾರೀಕ್‌ ಮನೆ ಸೇರಿ 4 ಮನೆಗಳ ತಪಾಸಣೆ

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಡಿಜಿಪಿ ಅಲೋಕ್‌ ಕುಮಾರ್‌ ಈ ಬಗ್ಗೆ ಮಾಹಿತಿ ನೀಡಿದರು. ನ.19ರಂದು ಬಾಂಬ್‌ ಸ್ಫೋಟ ನಡೆಯುವುದಕ್ಕೂ ಹತ್ತು ದಿನಗಳ ಮೊದಲೇ ಶಾರೀಕ್‌ ಮಂಗಳೂರಿಗೆ ಬಂದು ಹೋಗಿದ್ದ. ಈತ ಬಾಂಬ್‌ ಸ್ಫೋಟದಲ್ಲಿ ಎಕ್ಸ್‌ಪರ್ಚ್‌ ಆಗಿಲ್ಲ. ಹೀಗಾಗಿ, ಉದ್ದೇಶಿತ ಸ್ಥಳಕ್ಕಿಂತ ಮೊದಲೇ ಬಾಂಬ್‌ ಸ್ಫೋಟವಾಗಿದೆ. ಒಂದು ವೇಳೆ ಸರಿಯಾದ ಕ್ರಮದಲ್ಲಿ ಬಾಂಬ್‌ ಸ್ಫೋಟಕ್ಕೆ ತಯಾರಿ ನಡೆಸಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು ಎಂದು ತಿಳಿಸಿದರು.

ಮೈಸೂರಿನಲ್ಲಿ ಪತ್ತೆಯಾಗಿರುವ ಸ್ಫೋಟಕ ಸಾಮಗ್ರಿ:

ಸಲ್ಪೆಕ್ಸ್‌ ಸಲ್ಫರ್‌ ಪೌಡರ್‌, ನಟ್‌ ಬೋಲ್ಟ್‌ಗಳು, ಸಕ್ರ್ಯೂಟ್‌ಗಳು, ಮಲ್ಟಿಫಂಕ್ಷನ್‌ ಡಿಲೆ ಟೈಮರ್‌, ಗ್ರೈಂಡರ್‌, ಮಿಕ್ಸರ್‌, ಮ್ಯಾಚ್‌ ಬಾಕ್ಸ್‌, ಬ್ಯಾಟರಿ, ಮೈಕ್ಯಾನಿಕಲ್‌ ಟೈಮರ್‌, ಆಧಾರ್‌ ಕಾರ್ಡ್‌, ಅಲ್ಯೂಮಿನಿಯಂ ಫೈಲ್‌ ಸಿಮ್‌ ಕಾರ್ಡ್‌ಗಳು, ಸರ್ಜಿಕಲ್‌ ಗ್ಲೌಸ್‌ಗಳು, ಮೊಬೈಲ್‌ನ ಡಿಸ್ಪೆ$್ಲಗಳು, ಸ್ಫೋಟಕಕ್ಕೆ ಬಳಸುವ ಸಲ್ಫರ್‌, ರಂಜಕ, ಆಟಿಕೆ ಎಕೆ-47, 150 ಬೆಂಕಿ ಪೊಟ್ಟಣಗಳು.

ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವಾಗಿ ಕುಕ್ಕರ್‌ ಬಾಂಬ್‌ ಸ್ಫೋಟ?

ಬಾಂಬ್‌ ಸ್ಫೋಟಿಸಿದ್ದು ತೀರ್ಥಹಳ್ಳಿಯ ಶಾರೀಕ್‌

ಮಂಗಳೂರು: ಚಲಿಸುವ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದು ತೀರ್ಥಹಳ್ಳಿಯ ಶಂಕಿತ ಉಗ್ರ ಶಾರೀಕ್‌ (24) ಎಂಬುದು ದೃಢಪಟ್ಟಿದೆ. ಸ್ಫೋಟ ನಡೆದ ಕೆಲವೇ ಗಂಟೆಗಳಲ್ಲಿ ಇದು ಶಾರೀಕ್‌ನ ಕೃತ್ಯ ಎಂದು ಪೊಲೀಸರಿಗೆ ಗೊತ್ತಾಗಿತ್ತು. ಆದರೆ, ಅವನ ಮುಖಕ್ಕೆ ಸುಟ್ಟಗಾಯಗಳಾಗಿದ್ದರಿಂದ ಗುರುತು ಪತ್ತೆಹಚ್ಚಲು ಸಮಸ್ಯೆಯಾಗಿತ್ತು. ಹೀಗಾಗಿ ಭಾನುವಾರ ಬೆಳಿಗ್ಗೆ ತೀರ್ಥಹಳ್ಳಿಯಿಂದ ಶಾರೀಕ್‌ನ ಮಲತಾಯಿ, ಸಹೋದರಿ ಮತ್ತು ತಾಯಿಯ ತಂಗಿಯನ್ನು ಆಸ್ಪತ್ರೆಗೆ ಕರೆತಂದು ತೋರಿಸಿದಾಗ ಅವರು ಈತ ಶಾರೀಕ್‌ ಎಂದು ಗುರುತು ನೀಡಿದ್ದಾರೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

7 ಕಡೆ ಶೋಧ, 6 ಮಂದಿ ವಶ

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಶಿವಮೊಗ್ಗದಲ್ಲಿ ಶಾರೀಕ್‌ ಮನೆ, ಸಹಚರರ ಮನೆ ಸೇರಿ ನಾಲ್ಕು ಕಡೆ, ಮಂಗಳೂರಿನಲ್ಲಿ ಒಂದು ಕಡೆ, ಮೈಸೂರಿನಲ್ಲಿ 2 ಕಡೆ ಸೇರಿ ಒಟ್ಟು 7 ಕಡೆಗಳಲ್ಲಿ ಸೋಮವಾರ ಶೋಧ ನಡೆಸಿದ್ದಾರೆ. ಈ ವೇಳೆ, ಮೈಸೂರಿನಲ್ಲಿ ಮೂವರು, ಮಂಗಳೂರು ನಗರದ ಒಬ್ಬ, ಕೊಯಮತ್ತೂರು ಹಾಗೂ ಊಟಿಯಿಂದ ತಲಾ ಒಬ್ಬ ಸೇರಿ ಒಟ್ಟು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 

Follow Us:
Download App:
  • android
  • ios