Bengaluru Crime: ರಿವಾಲ್ವರ್ ತೋರಿಸಿ ಯುವತಿ ಮೇಲೆ ಮನೆ ಮಾಲೀಕನಿಂದ ರೇಪ್
* ಬಾಡಿಗೆಗಿದ್ದ ಬಂಗಾಳಿ ಯುವತಿ ಮೇಲೆ ಮನೆ ಮಾಲೀಕನಿಂದ ಕೃತ್ಯ
* ಈ ವಿಚಾರ ಪೋಷಕರ ಬಳಿ ಹೇಳದಂತೆ ಹೆದರಿಸಿದ್ದ ಮನೆ ಮಾಲೀಕ
* ಆರೋಪಿಯನ್ನ ಬಂಧಿಸಿದ ಪೊಲೀಸರು
ಬೆಂಗಳೂರು(ಮೇ.24): ರಿವಾಲ್ವರ್ ತೋರಿಸಿ ಬೆದರಿಸಿ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ 20 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್(46) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಬಿಹಾರ ಮೂಲದ ಆರೋಪಿ ಕೆಲ ವರ್ಷಗಳಿಂದ ನಗರದಲ್ಲಿ ಟೈಲ್ಸ್ ವ್ಯವಹಾರ ಮಾಡಿಕೊಂಡಿದ್ದಾನೆ. ಪತ್ನಿ ಹಾಗೂ ಮಕ್ಕಳೊಂದಿಗೆ ನೆಲೆಸಿದ್ದಾನೆ.
ಗುರುಗ್ರಾಮ್: 13 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದಲೇ ಅತ್ಯಾಚಾರ: ಕಾವಲು ನಿಂತ ಸ್ನೇಹಿತ
ನಗರದ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, ಆರೋಪಿ ಅನಿಲ್ ಮನೆಯನ್ನು ಬಾಡಿಗೆ ಪಡೆದಿದ್ದಳು. ಆಕೆಯ ಮನೆಗೆ ಹುಡುಗರು ಸೇರಿದಂತೆ ಹಲವು ಸ್ನೇಹಿತರು ಆಗಾಗ ಬರುತ್ತಿದ್ದರು. ಈ ವಿಚಾರವಾಗಿ ಆರೋಪಿ ಅನಿಲ್ ಯುವತಿ ಜತೆಗೆ ಗಲಾಟೆ ಮಾಡುತ್ತಿದ್ದ. ಈ ನಡುವೆ ಹುಡುಗನೊಬ್ಬ ಯುವತಿ ಮನೆಯಲ್ಲಿ ಉಳಿದುಕೊಂಡಿದ್ದ. ಈ ವೇಳೆ ಆರೋಪಿ ಅನಿಲ್ ಆತನ ದ್ವಿಚಕ್ರ ವಾಹನದ ಚಕ್ರಕ್ಕೆ ಚೈನ್ ಅಳವಡಿಸಿದ್ದ. ಬಳಿಕ ಯುವತಿ ಮನೆಗೆ ತೆರಳಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಅನುಮಾನದ ಮೇರೆಗೆ ಪೊಲೀಸರು ದ್ವಿಚಕ್ರ ವಾಹನಕ್ಕೆ ಚೈನ್ ಹಾಕಿದ್ದಾರೆ. ಈ ಸಂಬಂಧ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಲಿದ್ದಾರೆ ಎಂದು ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಹೆದರಿಸಿದ್ದ. ಬಳಿಕ ಯಾವುದೇ ದೂರು ದಾಖಲಾಗದಂತೆ ನಾನು ನೋಡಿಕೊಳ್ಳುವುದಾಗಿ ಆ ಯುವಕನನ್ನು ಕಳುಹಿಸಿದ್ದ ಎನ್ನಲಾಗಿದೆ.
ಏ.11ರಂದು ಅತ್ಯಾಚಾರ:
ಆರೋಪಿ ಅನಿಲ್ ಏ.11ರಂದು ಯುವತಿ ಮನೆಗೆ ನುಗ್ಗಿ ಆಕೆಗೆ ಹಣೆಗೆ ರಿವಾಲ್ವರ್ ಇರಿಸಿ ಬೆದರಿಸಿ, ಅತ್ಯಾಚಾರ ಮಾಡಿದ್ದ ಎನ್ನಲಾಗಿದೆ. ಬಳಿಕ ಈ ವಿಚಾರವನ್ನು ಪೋಷಕರ ಬಳಿ ಹೇಳದಂತೆ ಹೆದರಿಸಿದ್ದ. ಕೆಲ ದಿನಗಳ ಬಳಿಕ ಯುವತಿ ಅತ್ಯಾಚಾರದ ವಿಚಾರವನ್ನು ಪೋಷಕರ ಬಳಿ ಹೇಳಿಕೊಂಡಿದ್ದಳು. ಇದೀಗ ಪೋಷಕರ ಸಲಹೆ ಮೇರೆಗೆ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಅಶೋಕನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿ ಹಾಗೂ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಗಾಗಿ ಎದುರು ನೋಡುತ್ತಿದ್ದಾರೆ.