ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಸುಪಾರಿ ಹಂತಕರ ಜೊತೆಗೂಡಿ ಪತಿಯನ್ನೇ ಮುಗಿಸಿರುವ ಸೋನಂ ಕೇಸ್​ಗೆ ಇದೀಗ ಭಾರಿ ಟ್ವಿಸ್ಟ್​ ಸಿಕ್ಕಿದೆ. ಲವರ್​ ರಾಜ್​ಗೂ ಕೈಕೊಟ್ಟು ಮತ್ತೊಬ್ಬನ ಜೊತೆ ಓಡಿಹೋಗುವ ಪ್ಲ್ಯಾನ್​ ಮಾಡಿದ್ದು ಬೆಳಕಿಗೆ ಬಂದಿದೆ! 

ಮಧ್ಯಪ್ರದೇಶದ ಇಂದೋರ್​ನ ರಾಜಾ ರಘುವಂಶಿ ಮರ್ಡರ್​ ಕೇಸ್​ ದೇಶಾದ್ಯಂತ ಹಲ್​ಚಲ್​ ಸೃಷ್ಟಿಸುತ್ತಿದೆ. ಮದುವೆಯೆಂದರೆ ಪುರುಷರ ನಡುಗುವ ಸ್ಥಿತಿಗೆ ಬಂದು ತಲುಪಿದೆ ಈ ಕೇಸ್​. ಮೊದಲೇ ಬೇರೊಬ್ಬನ ಜೊತೆ ಸಂಬಂಧ ಹೊಂದಿದ್ದ ಸೋನಂ ಹನಿಮೂನ್​ಗೆ ಗಂಡನನ್ನು ಕರೆದುಕೊಂಡು ಹೋಗಿ ಮುಗಿಸಿರುವುದು ಇದಾಗಲೇ ತಿಳಿದುಬಂದಿದೆ. ಆಕೆಯ ಪ್ರಿಯಕರ ರಾಜ್​ ಎಂಬಾತ ತಂದೆಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರಣ, ಮನೆಯವರು ಆ ಮದುವೆಗೆ ಒಪ್ಪಿರಲಿಲ್ಲ. ಇದಕ್ಕಾಗಿ ಬಲಿಯಾದದ್ದು ಅಮಾಯಕ ಯುವಕ! ಇದೀಗ ಈ ಕೇಸ್​ ಮಹತ್ವದ ತಿರುವು ಪಡೆದುಕೊಂಡಿದ್ದು, ಈಕೆಯ ಪ್ರಿಯಕರ ಎಂದು ನಂಬಲಾದ ರಾಜ್​ಗೂ ಕೈಕೊಟ್ಟು ಮತ್ತೊಬ್ಬ ವ್ಯಕ್ತಿಗಾಗಿ ಇಂದೋರ್​ನಲ್ಲಿಯೇ ಬಂಗ್ಲೆ ಖರೀದಿ ಮಾಡಿರುವ ವಿಷಯ ಬೆಳಕಿಗೆ ಬಂದಿದೆ! ಇದೀಗ ಈ ಸಾವಿನ ಹಿಂದೆ ಆತನ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಸುಪಾರಿ ಹಂತಕರ ಜೊತೆಗೂಡಿ ಪತಿಯನ್ನು ಮುಗಿಸಿದ ಬಳಿಕ, ಸೋನಂ ಇದೇ ಬಂಗಲೆಯಲ್ಲಿ ಬಚ್ಚಿಟ್ಟುಕೊಂಡಿದ್ದಳು ಎನ್ನುವುದು ಪೊಲೀಸರ ಶಂಕೆ. ಇನ್ನು ಈ ಕೇಸ್​ ಕುರಿತು ಹೇಳುವುದಾದರೆ, ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಇಬ್ಬರೂ ನಿಗೂಢರಾಗಿ ಕಾಣೆಯಾಗಿದ್ದರು. ಮೇ 23 ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದಲ್ಲಿ ರಜೆಗೆ ಹೋಗಿದ್ದ ಜೋಡಿ ಸಂಪರ್ಕಕ್ಕೆ ಸಿಗದಾಗ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಸಂದರ್ಭದಲ್ಲಿ ಡ್ರೋನ್​ ಬಳಸಲಾಗಿತ್ತು. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿತ್ತು. ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದು ಬಾಂಗ್ಲಾದೇಶದ ಗಡಿಯಾಗಿದ್ದ ಹಿನ್ನೆಲೆಯಲ್ಲಿ, ಬಾಂಗ್ಲಾಕ್ಕೆ ಸೋನಮ್​ಳನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಆಮೇಲೆ ತನಿಖೆಯ ಬಳಿಕ ಪ್ರಿಯಕರನ ಜೊತೆಗೂಡಿ ಸೋನಂ ಗಂಡನನ್ನು ಮುಗಿಸಿರುವುದು ತಿಳಿದಿದ್ದು, ಇದರ ಬಗ್ಗೆ ತನಿಖೆ ನಡೆಯುತ್ತಿದೆ.

ಇದರ ತನಿಖೆಯ ವೇಳೆ ಗಂಡನನ್ನು ಮುಗಿಸಿದ ಬಳಿಕ ಯಾವುದೇ ರೀತಿಯ ಸಂದೇಹ ಬರಬಾರದು ಎನ್ನುವ ಕಾರಣಕ್ಕೆ ಅತ್ತೆಗೆ ಕರೆ ಮಾಡಿದ್ದಳು ಹಂತಕಿ. ರಾಜಾಇನ್ನೂ ಮಲಗಿದ್ದಾರೆ ಎಂದಿದ್ದಳು. ಅವರು ಎದ್ದಾಗ ಕರೆ ಮಾಡಿಸುತ್ತೇನೆ ಎಂದಿದ್ದ ಆಕೆ. ಅಂದು ತನಗೆ ಉಪವಾಸ ಆಗಿದ್ದ ಬಗ್ಗೆ ತಿಳಿಸಿದ್ದಳು. ಆಗ ಅತ್ತೆ, ಹೌದು ನನಗೂ ಇವತ್ತು ತಿಂಡಿ ರೆಡಿ ಮಾಡುವ ಸಮಯದಲ್ಲಿ ನೀನು ಉಪವಾಸ ಇರುವುದು ನೆನಪಾಯ್ತು. ಬೆಟ್ಟ ಗುಡ್ಡ ಎಲ್ಲಾ ಹತ್ತಲು ಹೋಗುತ್ತಿ. ಹಸಿವೆಯಿಂದ ಹೋಗಬೇಡ, ಏನಾದರೂ ತಿಂದುಕೊಂಡು ಹೋಗು ಎಂದು ಅತ್ತೆ ಸೊಸೆಯ ಬಗ್ಗೆ ಕಾಳಜಿ ತೋರಿದ್ದರು. ಆಗ ಸೋನಂ... ಇಲ್ಲ ಇಲ್ಲ ಬೆಟ್ಟ ಗುಡ್ಡ ಹತ್ತಬೇಕು ಎನ್ನುವ ಕಾರಣಕ್ಕೆ ನನ್ನ ಉಪವಾಸವನ್ನು ಮುರಿಯುವುದಿಲ್ಲ ಎಂದಳು.

ಆಗ ರಾಜಾ ಅವರ ಅಮ್ಮ, ಸ್ವಲ್ಪ ಹಾಲು, ಲಸ್ಸಿಯನ್ನಾದರೂ ಕುಡಿದುಕೊಂಡು ಹೋಗು ಎಂದರು. ನೀನು ಉಪವಾಸ ಇರುತ್ತೀ ಎನ್ನುವ ಕಾರಣಕ್ಕೆ ಸ್ವಲ್ಪ ಒಣದ್ರಾಕ್ಷಿ ತೆಗೆದುಕೊಂಡು ಹೋಗುವಂತೆ ರಾಜನಿಗೆ ಹೇಳಿದ್ದೆ. ಅವನಿಗೆ ನೆನಪು ಇತ್ತೋ ಇಲ್ವೋ ಎಂದು ತಿಳಿಸುವ ಮೂಲಕ ಅತ್ತೆ, ಸೊಸೆಯ ಮೇಲೆ ಪ್ರೀತಿಯ ಧಾರೆಯನ್ನೇ ಎರೆದಿದ್ದಾರೆ. ಈಕೆಯನ್ನು ನಂಬಿದ ರಾಜ್​ ಕೂಡ ಮೋಸ ಹೋಗಿರುವುದು ಇದೀಗ ತಿಳಿದಿದೆ!