ಬಡವರ ಮನೆ ಹುಡುಗಿಗೆ ಮೋಡಿ, ಉಡುಪಿಯಲ್ಲಿ ಲವ್ ಜಿಹಾದ್‌ಗೆ ಯುವತಿ ಬಲಿ?
* ಬಡವರ ಮನೆ ಹುಡುಗಿಗೆ ಮುಸ್ಲಿಂ ಹುಡುಗ ಮೋಡಿ
* ಉಡುಪಿಯಲ್ಲಿ ಲವ್ ಜಿಹಾದಿಗೆ ಯುವತಿ ಬಲಿ?
* ದೂರು ನೀಡಿರುವ ಸಹೋದರ
ವರದಿ -ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.26): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಬೆಳಕಿಗೆ ಬಂದಿದೆ. ಅಜೀಜ್ ಮೋಡಿಗೆ ಹಿಂದೂ ಯುವತಿ ಬಲಿಯಾಗಿದ್ದಳೆ. ಮೊದಲೇ ಮದುವೆಯಾಗಿದ್ದ ಮುಸ್ಲೀಂ ಯುವಕನೊಬ್ಬ ಈಕೆಯನ್ನು ವಂಚಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ. ಇದೊಂದು ಲವ್ ಜಿಹಾದ್ ಮತ್ತು ಒತ್ತಾಯದ ಮತಾಂತರ ಪ್ರಕರಣ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ.
ಬಡವರ ಮನೆ ಹುಡುಗಿಗೆ ಮೋಡಿ ಮಾಡಿದ ಹುಡುಗ
ಶಿಲ್ಪಾ ಬಡವರ ಮನೆಯ ಹುಡುಗಿ, ಈಕೆ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಕೆಲವರ್ಷಗಳ ಹಿಂದೆ ಟ್ಯುಟೋರಿಯಲ್ ನಲ್ಲಿ 10 ನೇ ತರಗತಿ ಕಲಿಯುತ್ತಿದ್ದಾಗ ಅಜೀಜ್ ಎಂಬಾತನ ಪರಿಚಯವಾಗುತ್ತೆ. ಇವರಿಬ್ಬರು ಪ್ರೀತಿಸಲು ಆರಂಭಿಸುತ್ತಾರೆ. ಇದೇ ಪ್ರೀತಿ ಇವಳಿಗೆ ಮುಳುವಾಗಿದೆ. ಅಜೀಜ್ ಗೆ ಈ ಮೊದಲೇ ಸಲ್ಮಾ ಎಂಬಾಕೆಯೊಂದಿಗೆ ಮದುವೆಯಾಗಿತ್ತು. ಆತನಿಗೊಂದು ಮಗು ಕೂಡ ಇದೆ. ಇಷ್ಟಾದರೂ ಶಿಲ್ಪಾಳನ್ನು ಮದುವೆಯಾಗುವುದಾಗಿ ನಂಬಿಸಿ ಅಜೀಜ್ ಮೋಸ ಮಾಡಿದ್ದ. ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಆತ ಕರೆದಾಗಲೆಲ್ಲ ಶಿಲ್ಪಾ ಆತ ವಾಸವಿರುವ ಕೋಟೇಶ್ವರದ ಫ್ಲ್ಯಾಟಿಗೆ ಹೋಗಿ ಬರುತ್ತಿದ್ದಳು. ಇವರ ನಡುವಿನ ಸಂಬಂಧ ಪತ್ನಿ ಸಲ್ಮಾಗೂ ಗೊತ್ತಿತ್ತು. ಆಕೆ ಕೂಡ ಈ ಸಂಬಂಧಕ್ಕೆ ಕುಮ್ಮಕ್ಕು ನೀಡಿದ್ದಳು ಎಂದು ಹೇಳಲಾಗುತ್ತಿದೆ.
ಕಲಬುರಗಿ: ಮುಸ್ಲಿಂ ಹುಡುಗಿ ಪ್ರೀತಿಸಿದ್ದಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ದಲಿತ ಯುವಕನ ಬರ್ಬರ ಹತ್ಯೆ
ಅಜೀಜ್ ಮತ್ತು ಶಿಲ್ಪಾ ಕಳೆದ ನಾಲ್ಕೈದು ವರ್ಷದಿಂದ ಒಡನಾಟ ಹೊಂದಿದ್ದರು. ಆದರೆ ಇತ್ತೀಚೆಗೆ ಅಜೀಜ್ ಶಿಲ್ಪಾಳನ್ನು ದೂರ ಮಾಡಿದ್ದ. ಕೆಲಸ ಮಾಡುವ ಬಟ್ಟೆ ಅಂಗಡಿಯ ಬಳಿ ಬಂದು ತನ್ನಿಂದ ದೂರವಾಗುವಂತೆ ಹೇಳಿದ್ದ. ನೀನು ಸತ್ತೇ ಹೋಗು ನನಗೆ ನೀನು ಬೇಡ ಎಂದು ಹೇಳಿದ್ದ. ಆ ಬೆನ್ನಲ್ಲೆ ಶಿಲ್ಪಾ ಆತ್ಮಹತ್ಯೆಗೆ ಮುಂದಾಗಿದ್ದಾಳೆ.
ಕಳೆದ 3 ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಈಕೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಕಾಲ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಶಿಲ್ಪಾ ಅಸುನೀಗಿದ್ದಾಳೆ.
ಇದು ಲವ್ ಜಿಹಾದ್ ಹಿಂದೂ ಸಂಘಟನೆಗಳ ಆರೋಪ
ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಸ್ನೇಹದಿಂದ ಸಲುಗೆಯಿಂದ ವರ್ತಿಸಿ ಆಕೆಯೊಂದಿಗೆ ಸಂಬಂಧ ಬೆಳೆಸಿ, ಇದೀಗ ಅಜೀಜ್ ದೂರ ಮಾಡಿದ್ದಾನೆ. ಆಕೆಯ ಜೊತೆಗಿರುವ ಖಾಸಗಿ ಫೋಟೋ ವೀಡಿಯೋಗಳನ್ನು ಇಟ್ಟುಕೊಂಡು ಬೆದರಿಸಿದ್ದಾನೆ. ಆಕೆಯ ಮತಾಂತರಕ್ಕೂ ಪ್ರಯತ್ನಿಸಿದ್ದಾನೆ. ಸ್ಪಷ್ಟವಾಗಿ ಇದೊಂದು ಲವ್ ಜಿಹಾದ್ ಪ್ರಕರಣ. ಆರೋಪಿ ಅಜೀಜ್ ಮತ್ತು ಈ ಸಂಬಂಧದ ಬಗ್ಗೆ ಅರಿವಿದ್ದು ಕುಮ್ಮಕ್ಕು ನೀಡಿದ ಆತನ ಪತ್ನಿ ಸಲ್ಮಾ ಇಬ್ಬರನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿವೆ. ಇವರಿಬ್ಬರ ಒಡನಾಟದ ಬಗ್ಗೆ ಈ ಹಿಂದೆಯೇ ಕುಟುಂಬದವರಿಗೆ ತಿಳಿಸಿದ್ದೆವು. ಆದರೂ ಪ್ರಯೋಜನವಾಗಿರಲಿಲ್ಲ ಎಂದು ಬಜರಂಗದಳ ಮುಖಂಡ ಸುರೇಂದ್ರ ಕೋಟೇಶ್ವರ ಹೇಳಿದ್ದಾರೆ.
ದೂರು ನೀಡಿದ ಸಹೋದರ
ಮೃತ ಶಿಲ್ಪಾಳ ಸಹೋದರ ಕುಂದಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ಮತಾಂತರದ ಒತ್ತಾಯ ಹಾಗೂ ಲವ್ ಜಿಹಾದಿಗೆ ತನ್ನ ಸಹೋದರಿ ಬಲಿಯಾಗಿರುವುದಾಗಿ ದೂರಿದ್ದಾರೆ. ಆತ ನೀಡಿರುವ ಲಿಖಿತ ದೂರಿನಲ್ಲಿ ಅಜೀಜ್ ಮತ್ತು ಸಲ್ಮಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯ ಆರೋಪ ಮಾಡಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಈ ಮೊದಲು ಗೊತ್ತಿರಲಿಲ್ಲ, ಮತಾಂತರಕ್ಕೆ ಒತ್ತಾಯಿಸಿರುವ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಸಹೋದರ ರಾಘವೇಂದ್ರ ಆಗ್ರಹಿಸಿದ್ದಾರೆ.