Asianet Suvarna News Asianet Suvarna News

ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ದ ಲೈನ್ ಮನ್ ಉದ್ಯೋಗಿ ತಿಮ್ಮಣ್ಣ ಆತ್ಮಹತ್ಯೆ!

* ಬಾಗಲಕೋಟೆ ಜಿಲ್ಲೆಯ ಅಮಝಲರಿ ಗ್ರಾಮದ ತಿಮ್ಮಣ್ಣ ಗುರಡ್ಡಿ ಆತ್ಮಹತ್ಯೆ...

* ಹೊಲಕ್ಕೆ ಮಲಗಲು ತೆರಳುವುದಾಗಿ ಹೇಳಿ ಆತ್ಮಹತ್ಯೆಗೆ ಶರಣಾದ ತಿಮ್ಮಣ್ಣ...

* ಪ್ರತಿಭಾವಂತನಾಗಿದ್ದ ತಿಮ್ಮಣ್ಣ ಗುರಡ್ಡಿ ಆತ್ಮಹತ್ಯೆ

HESCOM linemen who attended the kannadada kotyadhipati program Commits suicide pod
Author
Bangalore, First Published May 6, 2022, 7:42 AM IST

ಬಾಗಲಕೋಟೆ(ಮೇ.06): ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಾಗಲಕೋಟೆ ಜಿಲ್ಲೆಯ ಅಮಝಲರಿ ಗ್ರಾಮದ ಲೈನ್ ಮನ್ ಉದ್ಯೋಗಿ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಲಕ್ಕೆ ಮಲಗಲು ತೆರಳುವುದಾಗಿ ಹೇಳಿ ಹೋಗಿದ್ದ ತಿಮ್ಮಣ್ಣ ಈ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

ಇನ್ನು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ವಾಸವಿದ್ದ ತನ್ನ ಪಾಲಕರು ಮತ್ತು ತಮ್ಮನ ಜತೆ ತಿಮ್ಮಣ್ಣ ವಾಸವಿದ್ದರು. ಪ್ರತಿಭಾವಂತನಾಗಿದ್ದ ತಿಮ್ಮಣ್ಣ ಗುರಡ್ಡಿ ಕನ್ನಡದ ಕೋಟ್ಯಾಧಿಪತಿ ಕಾಯ೯ಕ್ರಮದಲ್ಲಿ ಭಾಗಿಯಾಗಿ 6.40 ಲಕ್ಷ ಬಹುಮಾನ ಗೆದ್ದಿದ್ದರು. ಅಲ್ಲದೇ ಲೈನ್ ಮನ್ ಆಗಿದ್ದ ತಿಮ್ಮಣ್ಣ ಟಿಕ್ ಟಾಕ್, ಹಾಸ್ಯ, ಹಾಡುಗಳಿಂದ ಅಭಿಮಾನಿಗಳನ್ನ ಹೊಂದಿದ್ದರು. ಅತ್ಯುತ್ತಮ ಕ್ರೀಡಾಪಟುವೂ ಆಗಿದ್ದ ಅವರು ಖೋಖೋ ಆಟದಲ್ಲಿ ರಾಷ್ಟ್ರಮಟ್ಟದವರೆಗೆ ಪ್ರದಶ೯ನ ನೀಡಿದ್ದರು.    

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮೇ 5ರಂದು  ಅವರ ನೂತನ ಮನೆಯ ಗೃಹಪ್ರವೇಶ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಬೇಕಿತ್ತು. ಇದಕ್ಕೂ 2 ದಿನ ಮೊದಲೇ ತಿಮ್ಮಣ್ಣ ದುರಂತ ಅಂತ್ಯ ಕಂಡಿದ್ದಾರೆ.  ಅಮಲಝರಿ ಗ್ರಾಮದ ಹೊರವಲಯದ ಮುಧೋಳ ತಾಲೂಕಿನ ಮಂಟೂರ ವ್ಯಾಪ್ತಿಯ ತೋಟದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗೆ ಹಾಗೂ ಮನೆ ನಿರ್ಮಾಣಕ್ಕೆ ಮಾಡಿದ ಸಾಲದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆಯಾದರೂ, ಅವರ ಸ್ನೇಹಿತರು ಈ ವಿಚಾರವನ್ನು ಅಲ್ಲಗಳೆದಿದ್ದಾರೆ. 'ಗೃಹಪ್ರವೇಶಕ್ಕೆ ಮುನ್ನಾ ದಿನವೇ ನೀವೆಲ್ಲ ಬರಬೇಕು, ನೀವೆ ನಿಂತು ಉಸ್ತುವಾರಿ ವಹಿಸಿಕೊಂಡು ಮಾಡ್ರಪ್ಪ. ಪ್ರೋಗ್ರಾಂ ಚೆನ್ನಾಗಿ ಆಗ್ಬೇಕು ಅಂದ್ರೆ ನೀವೆಲ್ಲಾ ನನಗೆ ಬಲವಾಗಿ ನಿಲ್ಲಬೇಕು. ತಡ ಮಾಡ್ಬೇಡ್ರಪ್ಪಾ' ಎಂದು ತಿಮ್ಮಣ್ಣ ಸಾವಿಗೂ ಮುನ್ನ ಆಹ್ವಾನಿಸಿದ್ದ ಎಂದು ಗೆಳೆಯರು ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios