ರಾಜಕೀಯ ನಾಯಕನ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಗಾಂಜಾ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಚಂಡೀಗಡ್: ಇತ್ತೀಚೆಗೆ ಶಾಲಾ ವಿಧ್ಯಾರ್ಥಿಗಳು, ಸಣ್ಣ ಸಣ್ಣ ಮಕ್ಕಳು ಗಾಂಜಾಗೆ ದಾಸರಾಗಿ ಬೀದಿ ಸುತ್ತುವಂತಹ ಅಥವಾ ಪಾತಕ ಕೃತ್ಯಗಳಲ್ಲಿ ಭಾಗಿಯಾಗುವಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಆದರೆ ಇಂತಹವುಗಳನ್ನು ಮಟ್ಟ ಹಾಕಬೇಕಾದ ಪೊಲೀಸ್ ಅಧಿಕಾರಿಗಳೇ ಗಾಂಜಾ ಎಳೆದರೆ ಸಮಾಜವನ್ನು ರಕ್ಷಿಸುವವರು ಯಾರು? ಹೇಳಿ ಕೇಳಿ ಪಂಜಾಬ್ ರಾಜ್ಯವೂ ಗಾಂಜಾ ದಂಧೆಯಿಂದ ವ್ಯಾಪಕವಾಗಿ ತೊಂದರೆಗೊಳಗಾಗಿದೆ.

ಗಾಂಜಾ ಎಳೆದ ಪೊಲೀಸ್

ಪುಟ್ಟ ಮಕ್ಕಳು ದೊಡ್ಡವರು, ಪ್ರಾಯದವರು ಎಂಬ ಬೇಧವಿಲ್ಲದೇ ಅನೇಕರು ಗಾಂಜಾದ ಅಮಲಿನಲ್ಲಿ ತೇಲುತ್ತಿರುವ ಹಲವು ವೀಡಿಯೋಗಳು ಈ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಪಾಕಿಸ್ತಾನದ ಗಡಿಗೆ ಸಮೀಪವಿರುವ ಪಂಜಾಬ್‌ಗೆ ಗಾಂಜಾ ಅದೆಲ್ಲಿಂದ ಅದೆಷ್ಟು ಸುಲಭವಾಗಿ ಬರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ, ಪಂಜಾಬ್‌ನ ಇದೇ ಸ್ಥಿತಿಯನ್ನು ಆಧರಿಸಿ ಉಡ್ತಾ ಪಂಜಾಬ್ ಸಿನಿಮಾ ಬಂದಿದ್ದು, ಗೊತ್ತೆ ಇದೆ. ಹೀಗಿರುವಾಗ ಈ ದಂಧೆಯನ್ನು ನಿಯಂತ್ರಿಸಬೇಕಾದ ಪೊಲೀಸರೇ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದಾಗಲೇ ಗಾಂಜಾ ಎಳೆದಿರುವ ಘಟನೆಯೊಂದು ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗ್ತಿದೆ.

ಗನ್‌ಮ್ಯಾನ್ ಆಗಿ ಕೆಲಸ ಮಾಡ್ತಿದ್ದ ಪ್ರವೀಣ್

ಇತ್ತ ರಾಜ್ಯ ಸರ್ಕಾರವೂ ರಾಜ್ಯದಲ್ಲಿ ಡ್ರಗ್ ಸೇವನೆ ಕಳ್ಳಸಾಗಣೆಯನ್ನು ನಿಯಂತ್ರಿಸುವುದಕ್ಕೆ ಕಠಿಣ ಕಾನೂನುಗಳ ಜೊತೆ ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಹೀಗಿರುವಾಗ ಪಂಜಾಬ್‌ನ ಹೋಶಿಯರ್ ಪುರದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ಗಾಂಜಾ ಎಳೆಯುತ್ತಿರುವ ವೀಡಿಯೋ ವೈರಲ್ ಆಗಿದೆ. ಹೀಗೆ ಗಾಂಜಾ ಎಳೆದ ಪೊಲೀಸ್‌ನನ್ನು ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಹೋಶಿಯಾರ್‌ಪುರದ ರಾಜಕೀಯ ನಾಯಕನೋರ್ವನ ಗನ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ವ್ಯಸನಮುಕ್ತ ಕೇಂದ್ರಕ್ಕೆ ಸೇರಿಸಿದ್ದ ಕುಟುಂಬ

ವೀಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಹೊಶಿಯಾರ್‌ಪುರದ ವಿಶೇಷ ಸೂಪರಿಟೆಂಡೆಂಟ್ ಆಫ್ ಪೊಲೀಸ್, ಹೀಗೆ ಗಾಂಜಾ ಸೇದಿ ಸಿಕ್ಕಿಬಿದ್ದ ಪೊಲೀಸ್‌ನನ್ನು ಭದ್ರತಾ ಕರ್ತವ್ಯದಿಂದ ಪೊಲೀಸ್‌ ಲೇನ್‌ಗೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ ಆತನ ವಿರುದ್ಧ ಇಲಾಖಾ ತನಿಖೆಗೆ ಸೂಚಿಸಲಾಗಿದೆ. ಈ ಬಗ್ಗೆ ಮತ್ತು ಹೆಚ್ಚಿನ ತನಿಖೆಯನ್ನು ಆರಂಭಿಸಿದ್ದೇವೆ. ಪ್ರಾಥಮಿಕ ತನಿಖೆಯಲ್ಲಿ ಈತನನ್ನು ಈತನ ಕುಟುಂಬ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸಿದ್ದರು ಎಂದು ಅವರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸುಮಾರು ಎರಡು ದಶಕಗಳಿಂದ ಮಾದಕ ವಸ್ತುಗಳ ವಿರುದ್ಧದ ಹೋರಾಟ ನಡೆಯುತ್ತಿದೆ. ಈ ಅವಧಿಯಲ್ಲಿ ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಆಡಳಿತಕ್ಕೆ ಬಂದಿದ್ದರು ಈ ಪಿಡುಗು ಮಾತ್ರ ನಿರಂತರವಾಗಿ ಮುಂದುವರೆದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವುದಕ್ಕೆ ಪಕ್ಷಗಳು ಪರಸ್ಪರ ಬೆರಳು ತೋರಿಸುತ್ತಿವೆ.

ಈ ವರ್ಷದ ಮಾರ್ಚ್ 1 ರಿಂದ ಪಂಜಾಬ್‌ನಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ 'ಯುದ್ಧ ನಾಶಿಯಾನ್ ವಿರುಧ್' ಅಭಿಯಾನದಡಿಯಲ್ಲಿ, 13,665 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, 18,424 ಜನರನ್ನು ಬಂಧಿಸಲಾಗಿದೆ ಮತ್ತು 900 ಕೆಜಿ ಹೆರಾಯಿನ್, 332 ಕೆಜಿ ಅಫೀಮು, 13 ಕೆಜಿ ಚರಸ್, 6 ಕೆಜಿ ಕ್ರಿಸ್ಟಲ್ ಮೆಥಾಂಫೆಟಮೈನ್ (ಐಸ್) ಮತ್ತು 11.5 ಕೋಟಿ ರೂ. ಮಾದಕ ದ್ರವ್ಯದಿಂದ ಗಳಿಸಿದದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ವರ್ಷಗಳಲ್ಲಿ, ಪೊಲೀಸರು ಈ ಡ್ರಗ್‌ನ ಅಂತಿಮ ಬಳಕೆದಾರರ ಮೇಲೆ ಗಮನ ಕೇಂದ್ರೀಕರಿಸಿದ್ದು, ಅವರನ್ನು ಜೈಲಿನ ಬದಲು ವ್ಯಸನ ಮುಕ್ತ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ. 10,000 ಕ್ಕೂ ಹೆಚ್ಚು ಡ್ರಗ್ ಬಳಕೆದಾರರನ್ನು ವಸತಿ ಪುನರ್ವಸತಿ ಕಾರ್ಯಕ್ರಮಗಳಿಗೆ ಸೇರಿಸಲು ಚಿಕಿತ್ಸಾಲಯಗಳಲ್ಲಿ ನೋಂದಾಯಿಸಲು ಮನವೊಲಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಆದರೆ ಈಗ ಪೊಲೀಸೇ ಡ್ರಗ್ ಸೇವಿಸುತ್ತಿರುವುದು ಆತಂಕ ಹೆಚ್ಚಿಸಿದೆ.

Scroll to load tweet…