ರಾಣೇಬೆನ್ನೂರಿನ ಸಣ್ಣಸಂಗಾಪುರ ಗ್ರಾಮದಲ್ಲಿ 29 ವರ್ಷದ ಯುವಕ ಅವಿನಾಶ ಚಾವಡಿ ಮದುವೆ ಆಗದ ಖಿನ್ನತೆಯಿಂದ ನೇಣಿಗೆ ಶರಣಾಗಿದ್ದಾನೆ.ಈ ಘಟನೆ ಸಾಮಾಜಿಕ ಒತ್ತಡ ಮತ್ತು ಮಾನಸಿಕ ಆರೋಗ್ಯದ ಕುರಿತು ಚರ್ಚೆಗೆ ಕಾರಣವಾಗಿದೆ.
ಹಾವೇರಿ (ಜೂ.27): ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ 29 ವರ್ಷದ ಯುವಕ ಅವಿನಾಶ ಚಾವಡಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಅವಿನಾಶ್, ಮದುವೆಗೆ ಸೂಕ್ತ ಕನ್ಯೆ ಸಿಗದಿರುವ ಖಿನ್ನತೆಯಿಂದ ಈ ದುರಂತಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ತಮ್ಮ ವಯಸ್ಸಿನ ಇತರ ಯುವಕರೆಲ್ಲರೂ ಮದುವೆಯಾಗಿದ್ದು, ತನಗೆ ಮಾತ್ರ ಹುಡುಗಿ ಸಿಗದಿರುವ ಕಾರಣಕ್ಕೆ ಅವಿನಾಶ್ ಮಾನಸಿಕವಾಗಿ ಕುಗ್ಗಿದ್ದರು. ಈ ನೋವಿನಲ್ಲಿ ಆತ ನೇಣಿಗೆ ಶರಣಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯು ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಈ ಘಟನೆಯು ಗ್ರಾಮೀಣ ಪ್ರದೇಶಗಳಲ್ಲಿ ಮದುವೆಗೆ ಸಂಬಂಧಿಸಿದ ಸಾಮಾಜಿಕ ಒತ್ತಡಗಳು ಮತ್ತು ಮಾನಸಿಕ ಆರೋಗ್ಯದ ಕೊರತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಆಡಳಿತ ಮತ್ತು ಸಮಾಜಸೇವಾ ಸಂಸ್ಥೆಗಳು ಇಂತಹ ಘಟನೆಗಳನ್ನು ತಡೆಗಟ್ಟಲು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯ ಕೇಳಿಬಂದಿದೆ.
