ಹಾವೇರಿ: KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ: ಪಿಸ್ತೂಲ್ ಸಪ್ಲೈ ಮಾಡಿದ್ದ ಬಿಹಾರದ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಆರೋಪಿ ಕೊಟ್ಟ ಮಾಹಿತಿ ಆಧರಿಸಿ ಬಿಹಾರ್‌ನಲ್ಲಿ ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧಿಸಲಾಗಿದೆ
ಹಾವೇರಿ (ಮೇ 30): ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಏಪ್ರಿಲ್ 19 ರಂದು ರಾತ್ರಿ ಕೆ.ಜಿ.ಎಫ್ ಚಾಪ್ಟರ್-2 ವೀಕ್ಷಣೆ ವೇಳೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಅಂದು ಫೈರ್ ಮಾಡಿ ಎಸ್ಕೇಪ್ ಆಗಿದ್ದ ಐನಾತಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಿಗ್ಗಾವಿ ಶೂಟೌಟ್ ಪ್ರಕರಣದ ವಿಶೇಷ ತನಿಖಾ ತಂಡ ಈಗ ಭರ್ಜರಿ ಬೇಟೆ ನಡೆಸಿದೆ.
ಶಿಗ್ಗಾವಿ ರಾಜಶ್ರೀ ಥಿಯೇಟರ್‌ನಲ್ಲಿ ವಸಂತ್ ಎಂಬುವವರ ಮೇಲೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದ ಆರೋಪಿ ಮಲೀಕ್ ಪಾಟೀಲ್‌ಗೆ ಬಿಹಾರದ ಲಿಂಕ್ ಇರುವುದು ಬಹಿರಂಗಗೊಂಡಿದೆ. ಆರೋಪಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್‌ನನ್ನು ಕೆಲ ದಿನಗಳ ಹಿಂದಷ್ಟೇ ಬಂಧಿಸಲಾಗಿತ್ತು. ಈ ಬಳಿಕ ಕಂಟ್ರಿ ಮೇಡ್ ಪಿಸ್ತೂಲ್ ಶಿಗ್ಗಾವಿಗೆ ಹೇಗೆ ಬಂತು ಎಂದು ಪೊಲೀಸರು ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: KGF-2 ಪ್ರದರ್ಶನ ವೇಳೆ ಗುಂಡಿನ ದಾಳಿ, ಆರೋಪಿ ಅರೆಸ್ಟ್, 1 ತಿಂಗಳಿನಿಂದ ನಡೆದಿತ್ತು ಸರ್ಚ್ ಆಪರೇಷನ್
ವಿಚಾರಣೆ ವೇಳೆ ಕಂಟ್ರಿ ಮೇಡ್ ಪಿಸ್ತೂಲ್ ಲಿಂಕ್ ಬಗ್ಗೆ ಆರೋಪಿ ಮಲೀಕ್ ಪಾಟೀಲ್ ಮಾಹಿತಿ ನೀಡಿದ್ದ. ಈ ಬೆನ್ನಲ್ಲೇ ಆರೋಪಿ ಕೊಟ್ಟ ಮಾಹಿತಿ ಆಧರಿಸಿ ಬಿಹಾರ್‌ನಲ್ಲಿ ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧಿಸಲಾಗಿದೆ. ಬಿಹಾರ್‌ಗೆ ತೆರಳಿ ಸ್ಥಳೀಯ ಪೊಲೀಸರ ನೆರವಿನಿಂದ ಕಂಟ್ರಿ ಮೇಡ್ ಪಿಸ್ತೂಲ್ ತಯಾರಿಸುತ್ತಿದ್ದ ಮೂವರನ್ನು ಬಂಧಿಸಿ ಹಾವೇರಿಗೆ ಪೊಲೀಸರು ಕರೆತರುತ್ತಿರುತ್ತಿದ್ದಾರೆ.
ಆಸಿಫ್ ಆಲಮ್,ಸಾಹೀದ್ ಚಂದ್ ,ಶಮಶದ್ ಆಲಮ್ ಎಂಬುವವರನ್ನ ಪೋಲೀಸರು ಬಂಧಿಸಿದ್ದಾರೆ. ಇನ್ನು ಶಿಗ್ಗಾವಿ ವಿಶೇಷ ತನಿಖಾ ತಂಡದ ಕಾರ್ಯಾಚರಣೆ ಮೆಚ್ಚಿ ಡಿ.ಜಿ ಐಜಿಪಿ ಪ್ರವೀಣ್ ಸೂದ್ 1 ಲಕ್ಷ ಬಹುಮಾನ ಘೋಷಿಸಿದ್ದಾರೆ..
ಪ್ರಕರಣ ಏನು?: ಶಿಗ್ಗಾಂವಿಯ ರಾಜಶ್ರೀ ಚಿತ್ರಮಂದಿರದಲ್ಲಿ ರಾತ್ರಿ ಕೆಜಿಎಫ್-2 ಚಿತ್ರದ ಪ್ರದರ್ಶನದ ವೇಳೆ ಫೈರಿಂಗ್ ನಡೆದಿತ್ತು. ಮುಗಳಿ ಗ್ರಾಮದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಎಂಬಾತನ ಮೇಲೆ ಈ ಗುಂಡಿನ ದಾಳಿಯಾಗಿತ್ತು. ಎರಡು ಗುಂಡುಗಳು ಹೊಟ್ಟೆಯ ಭಾಗಕ್ಕೆ ಹೊಕ್ಕಿದ್ದರೆ, ಮತ್ತೊಂದು ತೋಳಿಗೆ ಸವರಿಕೊಂಡು ಹೋಗಿದ್ದವು. ಗಾಯಾಳು ವಸಂತಕುಮಾರ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಂದಿನಿಂದ ಪೊಲೀಸರ ಕೈಗೆ ಸಿಗದೇ ಎಸ್ಕೇಪ್ ಆಗಿದ್ದ ಆಸಾಮಿಯನ್ನು ಒಂದು ತಿಂಗಳ ಬಳಿಕ ಬಂಧಿಸಲಾಗಿತ್ತು.
ಇದನ್ನೂ ಓದಿ: ಉತ್ತರಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ 7 ಮಂದಿ ದುರ್ಮರಣ
"ಆರೋಪಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಅರೆಸ್ಟ್ ಮಾಡಿದ್ದೇವೆ. ಶಿಗ್ಗಾವಿಯ ರಾಜಶ್ರೀ ಥಿಯೇಟರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ವಸಂತ್ ಎಂಬ ಯುವಕನ ಮೇಲೆ ಆರೋಪಿ ಫೈರ್ ಮಾಡಿದ್ದ. ಎರಡು ರೌಂಡ್ ಫೈರ್ ಮಾಡಿದ್ದ.ಆಗ ಭಯಬೀತರಾಗಿ ಥಿಯೇಟರ್ ನಲ್ಲಿದ್ದ ಸುಮಾರು 70 ರಿಂದ 80 ಜನ ಓಡಿಹೋಗಿದ್ರು.ವಸಂತ್ ಕುಮಾರ್ ತೀವ್ರ ಗಾಯಗೊಂಡಿದ್ರು. ವಸಂತ್ ಕುಮಾರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು" ಎಂದು ಹಾವೇರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದರು.