Kodagu: ಕಾಫಿ ತೋಟದ ಆಸ್ತಿಗಾಗಿ ಸಿನಿಮೀಯ ಸ್ಟೈಲ್‌ನಲ್ಲಿ ಗನ್ ಶೂಟೌಟ್: ಯುವಕ ಜಸ್ಟ್ ಮಿಸ್
ಗುಂಡು ಹಾರಿಸಿದವನ ಮಗನಿಗೆ ಹಿಗ್ಗಾಮುಗ್ಗ ಥಳಿತ
ಆಸ್ತಿ ದಾಖಲೆ ಹೆಸರಿಲ್ಲದ ಹಿನ್ನೆಲೆ ಎರಡು ಕುಟುಂಬಗಳಿಂದ ಹೊಡೆದಾಟ
ಬಂದೂಕಿನಿಂದ ಬಂದ ಗುಂಡು ಎದೆ ಸೀಳುವುದು ಜಸ್ಟ್ ಮಿಸ್
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
ಕೊಡಗು (ಡಿ.29): ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎನ್ನುವ ಮಾತಿದೆ. ಆದರೆ ಆ ದಾಯಾದಿತನ ಎಷ್ಟರ ಮಟ್ಟಿಗೆ ಮತ್ಸರ ಸಾಧಿಸಿದೆ ಎಂದರೆ ಒಬ್ಬರಿಗೊಬ್ಬರು ಬಂದೂಕುಗಳಿಂದ ಶೂಟ್ ಮಾಡಿ ಹತ್ಯೆ ಮಾಡುವ ಹಂತಕ್ಕೆ ತಲುಪಿದೆ.
ತನ್ನ ಕಾರಿನಿಂದ ಗನ್ ತೆಗೆದವನೇ ತನ್ನ ತಂದೆ ತಡೆದರೂ ಗನ್ ಗೆ ಲೋಡ್ ಮಾಡಿಯೇ ಬಿಡ್ತಿದ್ದಾನೆ ನೋಡಿ. ಅರೇ ಇದೇನು ಸಿನಿಮಾನಾ ಎಂದು ಕೊಳ್ಳಬೇಡಿ. ಅಷ್ಟಕ್ಕೂ ಹೀಗೆ ಸಿನಿಮಾ ಸ್ಟೈಲಿನಲ್ಲಿ ಗನ್ ತೆಗೆದು ಲೋಡ್ ಮಾಡುತ್ತಿರುವ ಈತ ನಿಶ್ಚಿಲ್. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಬಿಳಿಗೇರಿಯ ನಿವಾಸಿ ಭುಜಂಗಯ್ಯ ಅವರ ಮಗ. ನಿಶ್ಚಲ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವನು ಎನ್ನುವುದು ಮತ್ತೊಂದು ಇಂಟ್ರೆಸ್ಟಿಂಗ್ ವಿಷಯವಾಗಿದೆ.
ನಿಶ್ಚಲ್ ಮೂಲತಃ ಕೊಡಗು ಜಿಲ್ಲೆಯ ಬಿಳಿಗೆರೆಯವನಾದರೂ ಬೆಳೆದಿದ್ದೆಲ್ಲಾ, ಹಾಸನ ಮತ್ತು ಬೆಂಗಳೂರಿನಲ್ಲಿ. ಬೆಂಗಳೂರಿನಲ್ಲಿ ಸಿನಿಮಾ ಫೀಲ್ಡ್ ನೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ನಿಶ್ಚಲ್ ಸಂಕಷ್ಟಹರ ಗಣಪತಿ, ಫ್ಯಾಮಿಲಿ ಪ್ಯಾಕ್ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಸಾಹಿತ್ಯ ರಚನೆ ಮತ್ತು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ. ಅದೇ ಸಿನಿಮಾ ಸ್ಟೈಲಿನಲ್ಲಿಯೇ ಗನ್ ತೆಗೆದು ಲೋಡ್ ಮಾಡಿದ್ದಾರೆ. ಆದರೂ ತಂದೆ ಭುಜಂಗಯ್ಯ ಶೂಟ್ ಮಾಡದಂತೆ ನಿಶ್ಚಲ್ ನನ್ನು ತಡೆದಿದ್ದಾರೆ.
Bengaluru Crime: ಸಾಲ ಮರಳಿಸಿಲ್ಲವೆಂದು ಮನಸೋ ಇಚ್ಛೆ ಥಳಿಸಿ ಕೊಲೆ: ನರಕವನ್ನೂ ಮೀರಿಸುವಂತಿದೆ ಹಿಂಸೆ
ಪೊಲೀಸ್ ಠಾಣೆಗೆ ಹೋದವರು ಹೊಡೆದಾಡಿಕೊಂಡರು: ಇದಕ್ಕೂ ಮೊದಲೇ ಬುಧವಾರ ಬೆಳಿಗ್ಗೆ ಭುಜಂಗಯ್ಯ ಮತ್ತು ದಾಯಾದಿ ಗೋಪಾಲಯ್ಯ ಇಬ್ಬರು ಆಸ್ತಿ ವಿಷಯಕ್ಕಾಗಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರಂತೆ. ಈ ವೇಳೆ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಅವರು ಕರ್ತವ್ಯದ ನಿಮಿತ್ತ ಕಚೇರಿಯಿಂದ ಹೊರಗೆ ಇದ್ದಿದ್ದರಿಂದ ಸಂಜೆ ಐದು ಗಂಟೆವೆರೆಗೆ ಕಾಯುವಂತೆ ಸಿಬ್ಬಂದಿ ತಿಳಿಸಿದ್ದರಂತೆ. ಅದುವರೆಗೆ ಕಾಯಬೇಕಾಗಿದ್ದ ಎರಡು ಕುಟುಂಬಗಳು ವಾಪಸ್ ಬಿಳಿಗೇರಿಗೆ ಹೋಗಿ ಒಬ್ಬರಿಗೆ ಒಬ್ಬರು ಹೊಡೆದಾಡಿಕೊಂಡು ರಕ್ತಸಿಕ್ತವಾಗಿ ಬಂದು ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಡಿಕೇರಿ ಡಿವೈಎಸ್‍ಪಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ದಾಖಲೆ ಇಲ್ಲದ್ದರಿಂದ ದುರುಪಯೋಗ: ಅಷ್ಟಕ್ಕೂ ಇಬ್ಬರು ಹೊಡೆದಾಡಿಕೊಂಡಿರುವುದು 9 ಎಕರೆ ಕಾಫಿತೋಟದ ವಿಷಯಕ್ಕಾಗಿ. ಪಟ್ಟೆದಾರ್ ಕುಟುಂಬದಿಂದ ಬಂದ ಪಿತ್ರಾರ್ಜಿತ ಆಸ್ತಿಗೆ ಕಳೆದ 30 ವರ್ಷಗಳಿಂದ ನಾವೇ ಅನುಭೋಗದಾರರಾಗಿದ್ದೇವೆ. ಆಸ್ತಿ ಬಳಕೆಗೆ ಕಂದಾಯ ಕಟ್ಟುತ್ತಿದ್ದರೂ ನಮ್ಮ ಹೆಸರಿಗೆ ದಾಖಲೆಗಳು ಆಗಿರಲಿಲ್ಲ. ಇದನ್ನು ದುರುಪಯೋಗಪಡಿಸಿಕೊಂಡ ಭುಜಂಗಯ್ಯ ಪಟ್ಟೆದಾರ್ ಮಕ್ಕಳಿಂದ 6 ತಿಂಗಳ ಹಿಂದೆಯಷ್ಟೇ ಆಸ್ತಿಯನ್ನು ಖರೀದಿಸಿ 30 ವರ್ಷದಿಂದ ಉಳುಮೆ ಮಾಡುತ್ತಿರುವ ತೋಟವನ್ನು ಲಪಟಾಯಿಸಲು ಬಂದಿದ್ದಾರೆ ಎಂದು ಆಸ್ತಿ ಅನುಭೋಗದಾರರಾಗಿರುವ ಗೋಪಾಲಯ್ಯ ಆರೋಪಿಸಿದ್ದಾರೆ.
ಕಾಫಿ ಸಾಗಿಸಲು ಹೋದಾಗ ಶೂಟ್‌ಔಟ್: ಕೊಯ್ಲು ಮಾಡಿದ ಕಾಫಿ ಸಾಗಿಸಲು ಹೋದಾಗ ತೋಟ ತನ್ನದೆನ್ನುತ್ತಿರುವ ಭುಜಂಗಯ್ಯ ತೋಟಕ್ಕೆ ಏಕಾಏಕಿ ಬಂದು ಗಲಾಟೆ ಮಾಡಿ ಗನ್‍ನಿಂದ ಶೂಟ್ ಮಾಡಿದ್ದಾರೆ. ಅದೃಷ್ಟವ ಶಾಟ್ ಶೂಟ್ ಮಾಡುತ್ತಿದ್ದಂತೆ ನಾನು ಬಗ್ಗಿದ್ದರಿಂದ ನನ್ನ ಎದೆ ಸೀಳಬೇಕಾಗಿರುವ ಗುಂಡು ನಾನು ಡ್ರೈವ್ ಮಾಡುತ್ತಿದ್ದ ನನ್ನ ಹೊಸ ಪಿಕಪ್ ವಾಹನದ ಸೀಟು ಮತ್ತು ವಾಹನದ ಬಾಡಿಯನ್ನು ಸೀಳಿದೆ. ಇದು ನನ್ನನ್ನು ಕೊಲ್ಲುವುದಕ್ಕಾಗಿಯೇ ಮಾಡಿರುವ ಪ್ಲಾನ್ ಎಂದು ಗುಂಡೇಟಿನಿಂದ ಸ್ವಲ್ಪದರಲ್ಲೇ ಪಾರಾಗಿರುವ ತೀರ್ಥ ಹೇಳಿದ್ದಾರೆ.
ಕೊಡಗಿನ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ..!
ಭುಜಂಗಯ್ಯ ನಿಶ್ಚಲ್ ಮೇಲೆ ಥಳಿತ: ತೀರ್ಥನ ಮೇಲೆ ಶೂಟ್ ನಡೆಯುತ್ತಿದ್ದಂತೆ ಗೋಪಾಲಯ್ಯನ ಕಡೆಯವರು ಶೂಟ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಭುಜಂಗಯ್ಯ ಮತ್ತು ಅವರ ಮಗ ನಿಶ್ಚಲ್ ಮೇಲೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಹಲ್ಲೆಯಲ್ಲಿ ನಿಶ್ಚಲ್ ಅವರ ಬಲಗೈ ಮುರಿತಕ್ಕೆ ಒಳಗಾಗಿದ್ದರೆ, ತಲೆಗೂ ಗಂಭೀರ ಪೆಟ್ಟು ಬಿದ್ದಿದೆ. ಆದರೆ ನಿಶ್ಚಲ್ ಇದು ನಾವು ಕೊಂಡುಕೊಂಡಿರುವ ಆಸ್ತಿ. ಇದು ನಮ್ಮ ಹೆಸರಿನಲ್ಲಿದ್ದರೂ ಗೋಪಾಲಯ್ಯ ಅವರು ಬೇರೆಯವರಿಗೆ ಲೀಜಿಗೆ ನೀಡಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ: ಕೋರ್ಟಿನಲ್ಲಿ ತೀರ್ಮಾನ ಮಾಡಿಕೊಳ್ಳೋಣವೆಂದರೂ ಕೇಳದೆ ನಮ್ಮ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಜೊತೆಗೆ ಅವರೇ ನಮ್ಮ ಗನ್ ನಿಂದ ವಾಹನಕ್ಕೆ ಶೂಟ್ ಮಾಡಿಕೊಂಡು ನಮ್ಮ ಮೇಲೆ ಅಪಾದನೆ ಮಾಡುತ್ತಿದ್ದಾರೆ ಎಂದು ನಿಶ್ಚಲ್ ದೂರಿದ್ದಾರೆ. ಒಟ್ಟಿನಲ್ಲಿ ಆಸ್ತಿ ವಿಷಯಕ್ಕೆ ದಾಯಾದಿಗಳು ಒಬ್ಬರಿಗೊಬ್ಬರು ಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದು ಮಾತ್ರ ವಿಪರ್ಯಾಸ. ಗಂಭೀರವಾಗಿ ಗಾಯಗೊಂಡಿರುವ ನಿಶ್ಚಲ್ ಮತ್ತು ಗುಂಡೇಟಿನಿಂದ ಪಾರಾಗಿರುವ ತೀರ್ಥ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಎರಡು ಕುಟುಂಬಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.