ಗುಳೇದಗುಡ್ಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ನವೀನ ಹೆಗಡೆ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹೊರತೆಗೆಯಲಾಯಿತು. ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರಿಂದ ಪೊಲೀಸರು ಈ ಕ್ರಮ ಕೈಗೊಂಡರು.

ಗುಳೇದಗುಡ್ಡ (ಮಾ.19): ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಎರಡೂವರೆ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಅಸುನೀಗಿದ್ದ ಸಾಫ್ಟವೇರ್‌ ಎಂಜಿನಿಯರ್‌ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮಂಗಳವಾರ ನಡೆಯಿತು.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಮೂಲದ, ಸಾಫ್ಟವೇರ್‌ ಎಂಜಿನಿಯರ್‌ ಆಗಿದ್ದ ನವೀನ ವೀರಭದ್ರಪ್ಪ ಹೆಗಡೆ (40) ಅವರ ಶವವನ್ನೇ ಹೊರತೆಗೆದು ಪರಿಶೀಲನೆ ನಡೆಸಲಾಯಿತು. ಮೃತ ನವೀನನ ತಂದೆ- ತಾಯಿ ತನ್ನ ಪುತ್ರ ಸಾವಿನ ಕುರಿತಾಗಿ ಸಂಶಯ ವ್ಯಕ್ತಪಡಿಸಿದ್ದರಿಂದ ಬೆಂಗಳೂರಿನಲ್ಲಿರುವ ತಿಲಕ್‌ನಗರ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದರು.

ಕಳೆದ ಎರಡೂವರೆ ತಿಂಗಳ ಹಿಂದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮರಣ ಹೊಂದಿದ್ದ ಗುಳೇದಗುಡ್ಡ ಮೂಲದ ಸಾಫ್ಟವೇರ್‌ ಎಂಜಿನಿಯರ್‌ ಮೃತದೇಹವನ್ನು ಗುಳೇದಗುಡ್ಡ ಪಟ್ಟಣಕ್ಕೆ ತಂದು ಅಂತ್ಯಸಂಸ್ಕಾರ ನಡೆಸಲಾಗಿತ್ತು. ಆದರೆ, ಸಾವಿನ ಬಗ್ಗೆ ತಂದೆ-ತಾಯಿ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಮಂಗಳವಾರ ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಇದನ್ನೂ ಓದಿ: ಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!

ಗುಳೇದಗುಡ್ಡ ಮೂಲದ ನವೀನ ವೀರಭದ್ರಪ್ಪ ಹೆಗಡೆ (40) ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟವೇರ್ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ 2015ರಲ್ಲಿ ಸ್ನೇಹಲತಾ ಜೊತೆಗೆ ವಿವಾಹವಾಗಿತ್ತು. ದಂಪತಿಗೆ 7 ವರ್ಷದ ಪುತ್ರನಿದ್ದಾನೆ. ಮೃತ ನವೀನನ ತಂದೆ-ತಾಯಿ ಗುಳೇದಗುಡ್ಡದಲ್ಲಿದ್ದಾರೆ. ನವೀನ್‌ ಬೆಂಗಳೂರಿಗೆ ಹೋಗುವ ಮುಂಚೆ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿನ ಕೆಲಸ ಬಿಟ್ಟು ದೇಶಕ್ಕೆ ವಾಪಸಾಗಿ ಒಂದು ವರ್ಷ ಗುಳೇದಗುಡ್ಡದಲ್ಲಿ ಕಳೆದ 2022 ರಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟವೇರ್‌ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. 

ಅನಾರೋಗ್ಯ ಹಿನ್ನೆಲೆ ನವೀನ ಕೆಲ ತಿಂಗಳಿಂದ ಆಗಾಗ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಜನವರಿ 5ರಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ. ಹೃದಯಾಘಾತದಿಂದ ಸಾವಿಗಿಡಾಗಿದ್ದಾನೆ ಎಂಬ ಮಾಹಿತಿ ಬಂತು. ಜನವರಿ 6ರಂದು ಗುಳೇದಗುಡ್ಡಕ್ಕೆ ಶವ ತಂದು ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ನಂತರ ನವೀನ ತಾಯಿ ಮಗನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಬೆಂಗಳೂರಿನ ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ ಮಂಗಳವಾರ ಗುಳೇದಗುಡ್ಡ ತಹಸೀಲ್ದಾರ್‌ ಅನುಮತಿ ಮೇರೆಗೆ ಶವ ಹೊರತೆಗೆದು ಪರೀಕ್ಷೆಗೆ ಒಳಪಡಿಸಲಾಯಿತು.

ಮೊದಲು ಸಿಕ್ಕಿದ್ದು ಮಹಿಳೆಯ ಶವ:

ಮೃತನ ಮನೆಯವರು ಸ್ಮಶಾನದಲ್ಲಿ ಹೊಳಿದ್ದ ಶವದ ಸ್ಥಳ ತೋರಿಸಿದ್ದು, ಆ ಸ್ಥಳ ಅಗೆದಾಗ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಪಕ್ಕದ ಸ್ಥಳವನ್ನು ಗುರುತಿಸಿ ದೃಢಪಡಿಸಿದ ನಂತರ ತಹಸೀಲ್ದಾರ ನೇತೃತ್ವದಲ್ಲಿ ಸ್ಥಳ ಅಗೆಯಲು ಮೌಖಿಕ ಆದೇಶ ನೀಡಬೇಕಾಯಿತು. ಎರಡನೇ ಬಾರಿ ಅಗೆದಾಗ ತಂದೆ-ತಾಯಿ ಹಾಗೂ ಸಂಬಂಧಿಕರು ಮೃತದೇಹ ಗುರುತು ಪತ್ತೆ ಹಚ್ಚಿದರು. ಶವವ ಜೊತೆಗಿದ್ದ ಹಾಸಿಗೆ, ಬಟ್ಟೆ, ಮೂಗು ಇವುಗಳಿಂದ ದೃಢಪಡಿಸಲಾಯಿತು. ದೇಹ ಇನ್ನೂ ಅಷ್ಟೊಂದು ಕೊಳೆತಿಲ್ಲದ ಸ್ಥಿತಿಯಲ್ಲಿತ್ತು. ನಂತರ ಬಾಗಲಕೋಟೆಯಿಂದ ಎಫ್ಎಸ್ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಜ್ಞರು ಆಗಮಿಸಿ ಮೃತದೇಹದ ಅಂಗಾಂಗಗಳ ಸ್ಯಾಂಪಲ್ ಸಂಗ್ರಹಿಸಿದರು. ಪಂಚನಾಮೆ, ಶವಪರೀಕ್ಷೆ ಬಳಿಕ ಮತ್ತೆ ಶವ ಹೂಳಲಾಯಿತು.

ಇದನ್ನೂ ಓದಿ: ದೃಶ್ಯಂ ಸಿನೆಮಾ ಸ್ಟೈಲ್‌ನಲ್ಲಿ ಬೆಂಗಳೂರು ಒಂಟಿ ಮಹಿಳೆ ಕೊಲೆ, 4 ತಿಂಗಳ ಬಳಿಕ ರಹಸ್ಯ ಭೇದಿಸಿದ ಪೊಲೀಸರು!

8 ತಾಸು ನಡೆದ ಕಾರ್ಯಾಚರಣೆ:

ಸ್ಮಶಾನದದಲ್ಲಿ ಶವ ಹುಡುಕಾಟದ ಕಾರ್ಯದಲ್ಲಿ ತಹಸೀಲ್ದಾರ ಮಂಗಳಾ ಎಂ, ವಿಶೇಷ ತಹಸೀಲ್ದಾರ ಮಹೇಶ ಗಸ್ತೆ, ಪಿಎಸೈ ಸಿದ್ದಪ್ಪ ಯಡಹಳ್ಳಿ, ಪುರಸಭೆ ಮುಖ್ಯಾಧಿಕಾರಿ ಎ.ಎಂ.ಮುಜಾವರ, ವಿಧಿವಿಜ್ಞಾನ ಪ್ರಯೋಗಾಲಯ ವಿಭಾಗದ ತಜ್ಞರು, ಹತ್ತಾರು ಪೌರ ಕಾರ್ಮಿಕರು, ಕಂದಾಯ ನಿರೀಕ್ಷಕರು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಬೆಳಗ್ಗೆ 9 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸಂಜೆ 5 ಗಂಟೆವರೆಗೆ ನಡೆಯಿತು.