ಮೂವರು ಮಕ್ಕಳು ಮನಸ್ತಾಪ ಮಾಡಿಕೊಂಡು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ ಕೊಲೆಯಾದ ಪುಟ್ಟಯ್ಯ 

ಬೆಂಗಳೂರು(ಆ.21): ತನಗೆ ಹಣ ಕೊಡಲಿಲ್ಲವೆಂಬ ಕಾರಣಕ್ಕೆ ಕೋಪಗೊಂಡು ತಾತನನ್ನು ಕೊಂದು ಪರಾರಿಯಾಗಿದ್ದ ಮೊಮ್ಮಗ ಹಾಗೂ ಆತನ ಸ್ನೇಹಿತನನ್ನು ಯಲಹಂಕ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಮೈಸೂರಿನ ಕುವೆಂಪು ನಗರದ ಜಯಂತ್‌ ಅಲಿಯಾಸ್‌ ಬಳ್ಳೆ ಹಾಗೂ ಆತನ ಸ್ನೇಹಿತ ಹಾಸನ ಜಿಲ್ಲೆ ಗೊರೂರಿನ ಯಾಸೀನ್‌ ಬಂಧಿತರಾಗಿದ್ದು, ಮೂರು ದಿನಗಳ ಹಿಂದೆ ಯಲಹಂಕದ ಸುರಭಿ ಲೇಔಟ್‌ನ 2ನೇ ಮುಖ್ಯರಸ್ತೆಯ ನಿವಾಸಿ ಸಿ.ಪುಟ್ಟಯ್ಯ (70) ಅವರನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ಎಸಿಪಿ ಆರ್‌.ಮಂಜುನಾಥ್‌ ಹಾಗೂ ಇನ್‌ಸ್ಪೆಕ್ಟರ್‌ ಬಾಲಾಜಿ ನೇತೃತ್ವದ ತಂಡ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿತಿಳಿಸಿದ್ದಾರೆ.

ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

ಹಣ-ಆಸ್ತಿಗೆ ತಾತನ ಕೊಂದ:

ಸರ್ಕಾರಿ ಕೆಲಸದಲ್ಲಿದ್ದ ಸಿ.ಪುಟ್ಟಯ್ಯ ಅವರು, ನಿವೃತ್ತರಾದ ಬಳಿಕ ಸುರಭಿ ಲೇಔಟ್‌ನಲ್ಲಿ ನೆಲೆಸಿದ್ದರು. ಮೂರು ವರ್ಷಗಳ ಹಿಂದೆ ಅವರ ಪತ್ನಿ ನಿಧನದ ಬಳಿಕ ಏಕಾಂಗಿಯಾಗಿದ್ದರು. ಮೂವರು ಮಕ್ಕಳು ಮನಸ್ತಾಪ ಮಾಡಿಕೊಂಡು ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದಾರೆ. ನಿವೃತ್ತಿ ಬಳಿಕ ಪುಟ್ಟಯ್ಯ ಅವರಿಗೆ .20 ಲಕ್ಷ ಬಂದಿತ್ತು. ಅಲ್ಲದೆ ಕನಕಪುರ ರಸ್ತೆಯಲ್ಲಿ ಅವರಿಗೆ ಸೇರಿ ನಿವೇಶನ ಸಹ ಇತ್ತು.

ಮೈಸೂರಿನಲ್ಲಿದ್ದ ಒಬ್ಬ ಮಗ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಮಗನೇ ಆರೋಪಿ ಜಯಂತ್‌. ಡಿಪ್ಲೋಮಾ ಓದಿದ್ದ ಜಯಂತ್‌, ಕೆಲಸವಿಲ್ಲದೆ ಅಲೆಯುತ್ತಿದ್ದ. ತನ್ನ ತಂದೆ ಬಿಟ್ಟು ಇನ್ನುಳಿದ ಮಕ್ಕಳಿಗೆ ತಾತ ಆರ್ಥಿಕ ನೆರವು ನೀಡಿದ್ದಾರೆ ಎಂದು ಭಾವಿಸಿದ್ದ ಜಯಂತ್‌, ವಾರದ ಹಿಂದೆ ತಾತನ ಮನೆಗೆ ಬಂದು ಹಣ ಅಥವಾ ಕನಕಪುರ ರಸ್ತೆಯಲ್ಲಿ ಭೂಮಿ ಅಡಮಾನ ಮಾಡಿ ಬ್ಯಾಂಕ್‌ನಲ್ಲಿ ಸಾಲ ಕೊಡಿಸುವಂತೆ ಒತ್ತಾಯಿಸಿದ್ದ. ಆಗ ಬೈದು ಆತನನ್ನು ಮನೆಯಿಂದ ಪುಟ್ಟಯ್ಯ ಹೊರ ಕಳುಹಿಸಿದ್ದರು.

ಬೆಂಗಳೂರು: ಹಣಕ್ಕಾಗಿ ಪ್ರಯಾಣಿಕಳನ್ನೇ ಕೊಂದ ಚಾಲಕನ ಸುಳಿವು ನೀಡಿದ ಚಪ್ಪಲಿ!

ಆ.17ರಂದು ರಾತ್ರಿ 11ಕ್ಕೆ ತನ್ನ ಸ್ನೇಹಿತ ಯಾಸೀನ್‌ ಜತೆ ಮತ್ತೆ ತಾತನ ಮನೆಗೆ ಜಯಂತ್‌ ಬಂದಿದ್ದಾನೆ, ಆಗ ಪುಟ್ಟಯ್ಯ ಸಿಟ್ಟಾಗಿ ‘ಮನೆಗೆ ಬರಬೇಡ, ಬಿಡಿಗಾಸು ಕೊಡುವುದಿಲ್ಲ’ ಎಂದು ಬೈದು ಬಾಗಿಲು ಮುಚ್ಚಲು ಮುಂದಾಗಿದ್ದಾರೆ. ಆಗ ಬಲವಂತವಾಗಿ ಬಾಗಿಲು ದೂಡಿಕೊಂಡು ಮತ್ತೆ ದುಡ್ಡು ಕೊಡುವಂತೆ ಒತ್ತಾಯಿಸಿದ್ದಾನೆ. ಅದಕ್ಕೆ ಒಪ್ಪದೇ ಇದ್ದಾಗ ತಾತನ ಮುಖಕ್ಕೆ ಬಲವಾಗಿ ಗುದ್ದಿದಾಗ ಪುಟ್ಟಯ್ಯ ಮಂಚದ ಮೇಲೆ ಬಿದ್ದಿದ್ದಾರೆ. ನಂತರ ತಾತನನ್ನು ಉಸಿರುಗಟ್ಟಿಸಿ ಕೊಂದು ಮೃತದೇಹವನ್ನು ಮಂಚದ ಕೆಳಕ್ಕೆ ತಳ್ಳಿದ್ದಾನೆ. ಮರುದಿನ ಮೃತರ ಮನೆಗೆ ನೆರೆಹೊರೆಯರು ಬಂದಾಗ ಕೊಲೆ ಕೃತ್ಯ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೊಂದು ಹಾಸನಕ್ಕೆ ಪರಾರಿ

ಡಿಪ್ಲೋಮಾ ಓದುವಾಗ ಯಾಸಿನ್‌ ಹಾಗೂ ಜಯಂತ್‌ ಸಹಪಾಠಿಗಳಾಗಿದ್ದರು. ಈ ಹತ್ಯೆಗೆ ಗೆಳೆಯನ ಸಹಕಾರ ಪಡೆದಿದ್ದ ಜಯಂತ್‌, ಹತ್ಯೆ ನಂತರ ಹಾಸನಕ್ಕೆ ಪರಾರಿಯಾಗಿದ್ದ. ಕೃತ್ಯದ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ವಾರದ ಹಿಂದೆ ಜಯಂತ್‌ ಮನೆಗೆ ಬಂದು ಗಲಾಟೆ ಮಾಡಿದ್ದ ಸಂಗತಿ ಗೊತ್ತಾಯಿತು. ಈ ಸುಳಿವು ಆಧರಿಸಿ ತನಿಖೆ ಮುಂದುವರಿಸಿದಾಗ ಕೃತ್ಯ ನಡೆದ ದಿನ ಜಯಂತ್‌ ಮೊಬೈಲ್‌ ಸಂಪರ್ಕ ಘಟನಾ ಸ್ಥಳದ ವ್ಯಾಪ್ತಿಯಲ್ಲಿ ಸಂಪರ್ಕದಲ್ಲಿದ್ದ ಮಾಹಿತಿ ಸಿಕ್ಕಿತು. ಈ ಮಾಹಿತಿ ಮೇರೆಗೆ ಹಾಸನದಲ್ಲಿದ್ದ ಜಯಂತ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.