Tumakuru; ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಟ್ಟಕ್ಕಾಗಿ ಸದಸ್ಯನ ಕಿಡ್ನ್ಯಾಪ್!

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ನಿಡಸಾಲೆ ಗ್ರಾಮ ಪಂಚಾಯತ್ ಸದಸ್ಯ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿ ಮಂಜುನಾಥ್ ಎಂಬುವವರನ್ನ ಸೀನಿಮಿಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Gram Panchayat member kidnapped in Tumakuru gow

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ 

ತುಮಕೂರು (ಅ.13):  ನೀವು ರೆಸಾರ್ಟ್ ರಾಜಕೀಯವನ್ನ ನೋಡಿರ್ತೀರಿ. ಆಪರೇಷನ್ ಕಮಲ, ಆಪರೇಷನ್ ಹಸ್ತದ ಬಗ್ಗೆ ಕೂಡ ಕೇಳಿರ್ತೀರಿ. ಇದೆಲ್ಲಾ ಡೆಲ್ಲಿ ರಾಜಕೀಯ.. ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಇವೆಲ್ಲವನ್ನ ಮೀರಿಸುವಂತಹ ರಾಜಕೀಯವೊಂದು ನಡೆದಿದೆ. ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಅಧಿಕಾರದ ಗದ್ದುಗೆ ಏರಲು ಏನೇನು ಕಸರತ್ತು ನಡೆಸುತ್ತಾರೆ ಅನ್ನೋದನ್ನ ನೀವೆಲ್ಲರೂ ನೋಡಿರ್ತೀರ. ಸಂಖ್ಯಾಬಲ ಹೆಚ್ಚಿಸಲು ಕೆಲವರನ್ನ ಹಣ ಬಲದಿಂದ ಕೊಂಡುಕೊಂಡ್ರೆ, ಇನ್ನೂ ಕೆಲವರನ್ನ ರೆಸಾರ್ಟ್ ನಲ್ಲಿ ಇಟ್ಟು ರಾಜಾತಿಥ್ಯ ನೀಡೋದನ್ನ ಕೂಡ ನೀವು ಟಿವಿಗಳಲ್ಲಿ ನೋಡಿರ್ತೀರಿ. ಆದ್ರೆ ಇಲ್ಲೊಂದು ಗ್ರಾ.ಪಂ ಚುನಾವಣೆ ಡೆಲ್ಲಿ ರಾಜಕೀಯವನ್ನ ಕೂಡ ಮೀರಿಸಿಬಿಟ್ಟಿದೆ. ಇಂಥದೊಂದು ಹೈ ವೋಲ್ಟೇಜ್ ಚುನಾವಣೆ ನಡೆದಿರೋದು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ನಿಡಸಾಲೆ ಗ್ರಾ.ಪಂಯಲ್ಲಿ. ಇವತ್ತು ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ನಿರ್ಧರಿಸಲಾಗಿತ್ತು. ಅವಿಶ್ವಾಸ ಗೊತ್ತುವಳಿ ಬಳಿಕ ಗ್ರಾ.ಪಂ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು. ಆದ್ರೆ ಈ ಚುನಾವಣೆಗೆ ಒಂದು ದಿನ ಮುನ್ನವೇ ಜೆಡಿಎಸ್ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿ ಮಂಜುನಾಥ್ ಎಂಬುವವರನ್ನ ಸೀನಿಮಿಯ ರೀತಿಯಲ್ಲಿ ಕಿಡ್ನಾಪ್ ಮಾಡಲಾಗಿದೆ. ಗ್ರಾ.ಪಂ ಸದಸ್ಯನನ್ನ ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗ್ರಾ.ಪಂ ಅಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ 
ಕಳೆದ ಮೂರು ದಿನಗಳ ಹಿಂದೆ ಕೆಲ ಗ್ರಾ.ಪಂ ಸದಸ್ಯರ ಜೊತೆ ಮಂಜುನಾಥ್ ಪ್ರವಾಸಕ್ಕೆ ಹೋಗಿದ್ರು. ನಿನ್ನೆ ರಾತ್ರಿ ಪ್ರವಾಸ ಮುಗಿಸಿ ಬರುವಾಗ ಎಡೆಯೂರಿನ ಧಾರ್ಣಿಕ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ಹೊರಗೆ ಬಂದ ಮಂಜುನಾಥ್ ಉಳಿದವರಿಗಾಗಿ ಕಾಯುತ್ತಾ ನಿಂತಿದ್ರು. ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತ ವ್ಯಕ್ತಿಗಳು ಮಂಜುನಾಥ್ ಅವರನ್ನ ಅಪಹರಿಸಿ ಕೊಡೊಯ್ದಿದ್ದಾರೆ. 

ಇನ್ನು ಗ್ರಾ.ಪಂ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಅವರನ್ನ ಕಾಂಗ್ರೆಸ್ ನವರೇ ಅಪಹರಿಸಿದ್ದಾರೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ. ಈ ಬಗ್ಗೆ ಅಮೃತ್ತೂರು ಪೊಲೀಸ್ ಠಾಣೆಯಲಿ ದೂರು ಕೂಡ ದಾಖಲಾಗಿದ್ದು, ಶೀಘ್ರವೇ ಕಿಡ್ನಾಪ್ ಆಗಿರುವ ಮಂಜುನಾಥ್ ಅವರನ್ನ ಹುಡುಕಿಕೊಡುವಂತೆ ಗ್ರಾ.ಪಂ ಕಚೇರಿ ಎದುರು ಪ್ರತಿಭಟನೆ ಕೂಡ ನಡೆಸಿದ್ದಾರೆ. 

ಒಟ್ಟಿನಲ್ಲಿ ನಿಡಸಾಲೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿದ್ದ ಚುನಾವಣೆ ವೇಳೆ ಭಾರೀ ಹೈಡ್ರಾಮಾವೇ ನಡೆದುಹೋಗಿದ್ದು, ಸದ್ಯ ಪೊಲೀಸರು ಕಿಡ್ನಾಪ್ ಆಗಿರುವ ಮಂಜುನಾಥ್ ಅವರ ಹುಡುಕಾಟದಲ್ಲಿದ್ದಾರೆ.

Latest Videos
Follow Us:
Download App:
  • android
  • ios