ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡಬೇಕಾದವರಿವರೇ ಸರ್ಕಾರಕ್ಕೆ ಸೇರಬೇಕಾದ ಕೋಟಿ ಕೋಟಿ ಹಣ ಗುಳಂ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಕಿರಣ್. ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು(ಮಾ.15): ಇದು ಕೋರ್ಟ್‌ಗೆ ನಂಬಿಕೆ ದ್ರೋಹ ಬಗೆದವರ ಕತೆ. ಕೋರ್ಟ್ ಸಿಬ್ಬಂದಿಯಾಗಿದ್ದುಕೊಂಡೇ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಉಂಟು ಮಾಡಿದ್ದಾರೆ. ಹೌದು, ಸರ್ಕಾರದ ಕೆಲಸ ದೇವರ ಕೆಲಸ ಎಂದು ಕೆಲಸ ಮಾಡಬೇಕಾದವರಿವರೇ ಸರ್ಕಾರಕ್ಕೆ ಸೇರಬೇಕಾದ ಕೋಟಿ ಕೋಟಿ ಹಣ ಗುಳಂ ಮಾಡಿದ್ದಾರೆ. ಬರೋಬ್ಬರಿ 2.27 ಕೋಟಿ ರೂಪಾಯಿ ವಂಚನೆ ಮಾಡಿರೋದು ಬೆಳಕಿಗೆ ಬಂದಿದೆ. ನ್ಯಾಯಾಲಯಕ್ಕೆ ಕಟ್ಟಬೇಕಾದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪವೊಂದು ಕೇಳಿ ಬಂದಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್, ಬೆಂ.ಗ್ರಾಮಾಂತರ ನ್ಯಾಯಾಲಯದ ಸಿಬ್ಬಂದಿ ಬ್ಯಾಂಕ್‌ಗೆ ಹಣ ಕಟ್ಟದೇ 2 ಕೋಟಿಗೂ ಅಧಿಕ ಹಣ ದೋಖಾ ಮಾಡಿದ್ದಾರೆ. ಈ ಬಗ್ಗೆ ಹಲಸೂರು ಗೇಟ್ ಠಾಣೆಗೆ ಆಡಳಿತಾಧಿಕಾರಿ ಶಿರಾಸ್ತೆದಾರೆ ಸುಮಂಗಳದೇವಿ ದೂರು ನೀಡಿದ್ದಾರೆ. ಈ ಸಂಬಂಧ 7 ಮಂದಿ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಾದ ನಾರಾಯಣ್, ಮಕುದ್ ಪಾಷಾ, ಅವಿನಾಶ್, ನಿಶಾಂತ್ ರಾಘವ್ ನಾಯ್ಕ್, ಶಕುಂತಲಾ ಬಿ.ಕೆ. ಹೇಮಾ, ಸಜೀವ್ ಕುಮಾರ್ ಮೇಲೆ ಆರೋಪಿಸಿ ಎಫ್‌ಐಆರ್ ದಾಖಲಾಗಿದೆ. 

ಮಹಿಳಾ ಜಡ್ಜ್‌ಗೇ ಮೋಸ: ವಿರೂಪ ಮಾಡಿದ ಚಿತ್ರ ಕಳುಹಿಸಿ 20 ಲಕ್ಷ ರು. ಸುಲಿಗೆಗೆ ಯತ್ನ

ಸುಮಂಗಳ ದೇವಿಯವರು ಸಿಜೆಎಂ ಕೋರ್ಟ್‌ನಲ್ಲಿ ಲೆಕ್ಕಪತ್ರಗಳನ್ನು ಇಂಡಿಯನ್ ಆಡಿಟ್ ಹಾಗೂ ಅಕೌಂಟ್ ಡಿಪಾರ್ಟ್‌ಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸುಮಂಗಳ ದೇವಿ ಲೆಕ್ಕಪತ್ರ ಆಡಿಟಿಂಗ್ ಮಾಡುತ್ತಿದ್ದರು. ಈ ವೇಳೆ 2.27 ಕೋಟಿ ಹಣ ವ್ಯತ್ಯಾಸ ಕಂಡು ಬಂದಿತ್ತು. ಆರೋಪಿಗಳು ಕಳೆದ 2019-20, 2020-21, 2021-22 ವರ್ಷದ ಸಾಲಿನಲ್ಲಿ ಅಂದ್ರೆ ಕಳೆದ ಮೂರು ವರ್ಷಗಳಿಂದ ವಂಚನೆ ಮಾಡಿರೋದು ಬಯಲಿಗೆ ಬಂದಿದೆ.

ವಂಚನೆ ಹೇಗೆ..?

ಆರೋಪಿಗಳು ಕೋರ್ಟ್ ಸಿಬ್ಬಂದಿಯಾಗಿದ್ದಾರೆ‌. ಕೋರ್ಟ್‌ಗೆ ಕಟ್ಟಬೇಕಾದ ದಂಡದ ಹಣ, ಕೋರ್ಟ್ ಫೀ, ಕೋರ್ಟ್ ಪ್ರೋಸಸ್ ಫೀ, ಕಾಫಿ ಚಾರ್ಜ್‌ ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಕಟ್ಟದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಹಾಗೆ ಆರೋಪಿಗಳು ನಕಲಿ ಬ್ಯಾಂಕ್‌ನ ಕೆಟಿಸಿ-25 ಚಲನ್ ಬಳಸಿ ವಂಚನೆ ಮಾಡಿದ್ದಾರೆ. 

ಇದು ಸಾಲದು ಎಂಬಂತೆ ಆರೋಪಿಗಳು ಬ್ಯಾಂಕ್ ಸೀಲ್ ಕೂಡ ನಕಲಿ ಮಾಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸಹಿ ಕೂಡ ನಕಲಿ ಮಾಡಿ ವಂಚಿಸಿದ್ದಾರೆ. ಸರ್ಕಾರಿ ಖಜಾನೆ ಅಕೌಂಟ್‌ಗೆ ಹಣ ಜಮಾ ಮಾಡದೇ ಕೋರ್ಟ್‌ಗೆ ನಂಬಿಕೆ ದ್ರೋಹ ಮಾಡಿದ್ದಾರೆ ಅಂತ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಹಲಸೂರು ಗೇಟ್ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.