Asianet Suvarna News Asianet Suvarna News

ಪುಣೆ ಗೂಗಲ್‌ ಕಚೇರಿಗೆ ಬೆದರಿಕೆ ಕರೆ: ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ವಶಕ್ಕೆ

ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿದ್ದಕ್ಕಾಗಿ ಹೈದರಾಬಾದ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಇದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

googles pune office gets hoax bomb threat caller arrested from hyderabad ash
Author
First Published Feb 13, 2023, 5:22 PM IST

ಪುಣೆ(ಫೆಬ್ರವರಿ 13, 2023): ಮಹಾರಾಷ್ಟ್ರದ ಪುಣೆಯ ಕೋರೆಗಾಂವ್ ಉದ್ಯಾನವನದ ವಾಣಿಜ್ಯ ಸಂಕೀರ್ಣದಲ್ಲಿರುವ ಗೂಗಲ್ ಕಚೇರಿಯಲ್ಲಿ ಸ್ಫೋಟಕ ಸಾಧನವಿದೆ ಎಂದು ವ್ಯಕ್ತಿಯೊಬ್ಬ ಭಾನುವಾರ ರಾತ್ರಿ ಕರೆ ಮಾಡಿದ್ದಾನೆ. ಈ ಹಿನ್ನೆಲೆ, ಪುಣೆ ಪೊಲೀಸ್ ತಂಡಗಳು ಮತ್ತು ಬಾಂಬ್ ಪತ್ತೆ ಹಾಗೂ ವಿಲೇವಾರಿ ತಂಡಗಳು (ಬಿಡಿಡಿಎಸ್) ತಡರಾತ್ರಿ ಬಂದ ಈ ಕರೆ ಹಿನ್ನೆಲೆ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದು, ಬಾಂಬ್‌ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಹಿನ್ನೆಲೆ ಗೂಗಲ್‌ ಕಚೇರಿಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. 

ಮುಂಬೈನ (Mumbai) ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಗೂಗಲ್‌ (Google) ಕಚೇರಿಗೆ (Office) ಭಾನುವಾರ ರಾತ್ರಿ 7.54ಕ್ಕೆ ಕರೆ ಬಂದಿದ್ದು, ಕಂಪನಿಯ ಪುಣೆಯ (Pune) ಕಚೇರಿಯಲ್ಲಿ ಬಾಂಬ್‌ (Bomb) ಇಡಲಾಗಿದೆ. ಮುಂಧ್ವಾ ಪ್ರದೇಶದಲ್ಲಿರುವ ಬಹು ಮಹಡಿ ಕಮರ್ಷಿಯಲ್‌ ಕಟ್ಟಡದಲ್ಲಿರುವ ಈ ಕಚೇರಿಯ 11ನೇ ಮಹಡಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಬಂದಿದೆ ಎಂದು ಅಧಿಕಾರಿಯೊಬ್ಬರು (Officer) ಸುದ್ದಿಸಂಸ್ಥೆ ಪಿಟಿಐಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 

ಇದನ್ನು ಓದಿ: ಚಾಟ್‌ ಜಿಪಿಟಿಗೆ ಪ್ರತಿಯಾಗಿ ಗೂಗಲ್‌ನಿಂದ ‘ಬರ್ಡ್‌’ ಶುರು; ಶೀಘ್ರವೇ ಹೊಸ ಸೇವೆ ಆರಂಭ: ಸುಂದರ್ ಪಿಚೈ

ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಡೆಪ್ಯುಟಿ ಕಮೀಷನರ್‌ ಆಫ್‌ ಪೊಲೀಸ್‌ (ವಲಯ V), ಪುಣೆಯ ಮುಂಧ್ವಾ ಪ್ರದೇಶದ ಬಹು ಮಹಡಿ ಕಮರ್ಷಿಯಲ್‌ ಕಟ್ಟಡದ 11ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಬಾಂಬ್‌ ಇಡಲಾಗಿದೆ ಎಂದು ಭಾನುವಾರ ತಡರಾತ್ರಿ ಕರೆಬಂದಿತ್ತು ಎಂದು ಹೇಳಿದ್ದಾರೆ. ಬಳಿಕ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿದ್ದಕ್ಕಾಗಿ ಹೈದರಾಬಾದ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಇದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಸೋಮವಾರ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿಗಳು ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಕರೆ ಮಾಡಿದ್ದಕ್ಕಾಗಿ ಹೈದರಾಬಾದ್‌ನಲ್ಲಿ ಅವರನ್ನು ಬಂಧಿಸಲಾಗಿದೆ. ಇದು ಸುಳ್ಳು ಬೆದರಿಕೆ ಕರೆ ಎಂದು ತಿಳಿದುಬಂದಿದೆ ಎಂದು ತಿಳಿಸಿದ್ದಾರೆ. 

ಹಾಗೆ, ನಾನು ಮದ್ಯದ ಅಮಲಿನ ಸ್ಥಿತಿಯಲ್ಲಿ ಈ ರೀತಿ ಕರೆ ಮಾಡಿದ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಆತ ಹೈದರಾಬಾದ್‌ ಮೂಲದವನು ಎಂದು ತಿಳಿದುಬಂದಿದ್ದು, ಅಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದೂ ಮಹಾರಾಷ್ಟ್ರ ಪೊಲೀಸರು ಹೇಳಿದ್ದಾರೆ. 

ಇದನ್ನೂ ಓದಿ: ಮಹಿಳಾ ಬಾಸ್‌ ನನ್ನನ್ನು ತಬ್ಬಿಕೊಂಡಿದ್ದನ್ನು ವಿರೋಧಿಸಿದ್ದಕ್ಕೆ ವಜಾ: ಗೂಗಲ್ ಮಾಜಿ ಉದ್ಯೋಗಿಯಿಂದ ಕೇಸ್‌

ಭಾನುವಾರ ರಾತ್ರಿ ಮುಂಬೈನಲ್ಲಿರುವ ಗೂಗಲ್ ಕಚೇರಿಗೆ ಕರೆ ಬಂದಿರುವ ಬಗ್ಗೆ ಮಾಹಿತಿ ಪಡೆದರು. ನಂತರ, ಬಾಂಬ್ ಪತ್ತೆ ದಳದೊಂದಿಗೆ ಪೊಲೀಸ್ ತಂಡವು ಕೋರೆಗಾಂವ್ ಪಾರ್ಕ್‌ನಲ್ಲಿರುವ ಸಂಪೂರ್ಣ ಗೂಗಲ್ ಕಚೇರಿ ಆವರಣವನ್ನು ಪರಿಶೀಲಿಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಬಳಿಕ ಸಂಬಂಧಿತ ಅಧಿಕಾರಿಗಳು ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ ಎಂದು ಪುಣೆ ಪೊಲೀಸರು ತಿಳಿಸಿದ್ದಾರೆ. 

ಆರೋಪಿಯನ್ನು ಹೈದರಾಬಾದ್ ಪೊಲೀಸರು ಆತನ ಮನೆಯಿಂದಲೇ ಬಂಧಿಸಿದ್ದಾರೆ ಎಂದೂ ವರದಿಯಾಗಿದೆ. ಆಸ್ತಿ ವಿಚಾರದಲ್ಲಿ ತನ್ನ ಸಹೋದರನೊಂದಿಗಿನ ವಿವಾದದ ಹಿನ್ನೆಲೆ ಆರೋಪಿ ಸುಳ್ಳು ಕರೆ ಮಾಡಿದ್ದಾನೆ. ಅವನ ಸಹೋದರ ಪುಣೆ ಮೂಲದ ಗೂಗಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಮುಂಬೈ ಗೂಗಲ್ ಕಚೇರಿಗೆ ಕರೆ ಮಾಡಲಾಗಿದೆ. ಕರೆ ಬಂದ ಬಳಿಕ, ನಾವು ಗೂಗಲ್ ಆವರಣವನ್ನು ಪರಿಶೀಲಿಸಿದ್ದೇವೆ ಮತ್ತು ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ಪುಣೆಯ ಡಿಸಿಪಿ (ಅಪರಾಧ) ಅಮೋಲ್ ಝೆಂಡೆ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಗೂಗಲ್‌ನಿಂದ 12,000 ಉದ್ಯೋಗಿಗಳ ಕಡಿತ, ಸಿಇಒ ಸುಂದರ್ ಪಿಚೈ ಭಾವುಕ ಸಂದೇಶ!

ಇನ್ನು, ಈ ಹುಸಿ ಕರೆ ಸಂಬಂಧ ಮಹಾರಾಷ್ಟ್ರ ರಾಜಧಾನಿ ಮುಂಬೈ ನಗರದ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ಭಾನುವಾರ ರಾತ್ರಿ ಐಪಿಸಿ ಸೆಕ್ಷನ್ 505 (1) (ಬಿ) ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
 

Follow Us:
Download App:
  • android
  • ios